ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ರೈತರು ಬೆಳೆದ ಕೃಷಿ ಫಸಲುಗಳನ್ನು ತಿಂದು ಧ್ವಂಸಗೊಳಿಸಿ ನಷ್ಟಪಡಿಸುತ್ತಿವೆ.

ಇಲ್ಲಿಗೆ ಸಮೀಪದ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಕಾಡಾನೆಗಳು ತೋಟಗಳಿಗೆ ಲಗ್ಗೆಯಿಡುತ್ತಿದ್ದು, ಅಪಾರ ಬೆಳೆ ನಷ್ಟ ಸಂಭವಿಸುತ್ತಿದೆ. ಈ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಅಂದಗೋವೆ ಗ್ರಾಮದ ಬೊಟ್ಟೋಳಂಡ ಎನ್ ಉತ್ತಪ್ಪ ಎಂಬವರಿಗೆ ಸೇರಿದ 5 ಎಕರೆ ಜಾಗದಲ್ಲಿ ಬೆಳೆದ ಮರಗೆಣಸು, ಕೇನೆ, ಕೆಸ ಇನ್ನಿತರ ಬೆಳೆಗಳನ್ನು ನಾಶಗೊಳಿಸಿವೆ. ಇದರಿಂದ ಅಂದಾಜು ರೂ.35000 ಕ್ಕೂ ಮಿಕ್ಕಿ ನಷ್ಟ ಸಂಭವಿಸಿದೆ ಎಂದು ಅರಣ್ಯ ಇಲಾಖೆಗೆ ದೂರು ನೀಡಲಾಗಿದೆ.

ಮಂಜಿಕೆರೆ ಗ್ರಾಮದ ಲಲಿತಸೋಮಸುಂದರ ಎಂಬವರಿಗೆ ಸೇರಿದ ಸಾಮ್ರಾಟ್ ತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡು ತೋಟದಲ್ಲಿ ಬೆಳೆದು ನಿಂತ ಕಾಫಿ ಗಿಡಗಳನ್ನು ತುಳಿದು ಧ್ವಂಸಗೊಳಿಸಿದಲ್ಲದೇ, ತೋಟದ ಗೇಟುಗಳನ್ನು ಮತ್ತು ಸ್ಪಿಂಕ್ಲರ್ ಪೈಪುಗಳನ್ನು ತುಂಡರಿಸಿ ನಾಶಗೊಳಿಸಿವೆ.ಈ ಬಗ್ಗೆ ತೋಟದ ಮಾಲೀಕರಿಗೆ ಅಂದಾಜು ಮೌಲ್ಯ ಸುಮಾರು ರೂ.40,000 ದಷ್ಟು ನಷ್ಟ ಸಂಭವಿಸಿದೆ ಎಂದು ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಈ ಭಾಗದ ಗ್ರಾಮಸ್ಥರು, ದಿನಂಪ್ರತಿ ತನ್ನ ಮರಿಯೊಂದಿಗೆ ಕಾಡಾನೆಗಳು ಸಂಜೆ 6 ಗಂಟೆಯ ಸುಮಾರಿಗೆ ಪ್ರತ್ಯಕ್ಷವಾಗುತ್ತಿದ್ದು, ಮನೆಯಿಂದ ಹೊರ ಬರುವದಕ್ಕೆ ಭೀತಿ ಪಡುವಂತಾಗಿದೆ. ಬೆಳಗ್ಗಿನ ವೇಳೆಯಲ್ಲೂ ರಸ್ತೆಯ ಬದಿಯಲ್ಲೇ ಆನೆಗಳು ಓಡಾಡುತ್ತಿರುವದರಿಂದ ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ, ತೋಟ ಕೆಲಸಕ್ಕೆ ತೆರಳುವ ಕೂಲಿ ಕಾರ್ಮಿಕರಿಗೆ ಇನ್ನಿತರ ಕೆಲಸದ ನಿಮ್ಮಿತ್ತ ಸುಂಟಿಕೊಪ್ಪ ಕಡೆಗೆ ಬರುವದಕ್ಕೆ ಕಷ್ಟ ಪಡುವಂತಾಗಿದೆ. ಕೂಡಲೇ ಅರಣ್ಯ ಇಲಾಖೆಯವರು ಈ ಭಾಗದಲ್ಲಿ ಬಿಡುಬಿಟ್ಟಿರುವ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವದರ ಮೂಲಕ ಮುಂದಾಗುವ ಬಾರೀ ಅನಾಹುತ ತಪ್ಪಿಸಬೇಕೆಂದು ಗ್ರಾಮಸ್ಥರು, ಕೃಷಿಕರು ಆಗ್ರಹಿಸಿದ್ದಾರೆ.