ಸೋಮವಾರಪೇಟೆ, ಜು.25: ಕರ್ನಾಟಕ ರಕ್ಷಣಾ ವೇದಿಕೆಯ ಸಾಹಿತ್ಯ ಘಟಕದ ಚಿಗುರು ಕವಿಗೋಷ್ಠಿ ಬಳಗ ಹಾಗೂ ಸ್ಥಳೀಯ ಶಾಖೆಯ ವತಿಯಿಂದ ತಾಲೂಕಿನ ಕಿರಗಂದೂರು ಸರ್ಕಾರಿ ಶಾಲೆಯಲ್ಲಿ ಆಯೋಜಿಸಲಾಗಿದ್ದ ವನಮಹೋತ್ಸವ-ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಕವಿಗಳು ತಮ್ಮ ಕವನಗಳ ಮೂಲಕ ಪರಿಸರ ರಕ್ಷಣೆಯ ಜಾಗೃತಿ ಮೂಡಿಸಿದರು.

ಪರಿಸರ ಅಳಿದರೆ ಮನುಕುಲವೇ ಅಳಿದಂತೆ, ಪರಿಸರ ರಕ್ಷಣೆ ಎಲ್ಲರ ಜವಾಬ್ದಾರಿ, ಪರಿಸರವನ್ನು ನಾವು ರಕ್ಷಿಸಿದರೆ ಮಾತ್ರ ಅದೂ ಸಹ ನಮ್ಮನ್ನು ರಕ್ಷಿಸುತ್ತದೆ ಎಂಬಿತ್ಯಾದಿ ತಾತ್ಪರ್ಯಗಳನ್ನು ಹೊಂದಿದ ಕವನಗಳು ಕವಿಗಳಿಂದ ಮೂಡಿ ಬಂದವು. ಕವಿಗೋಷ್ಠಿ ಕಾರ್ಯಕ್ರಮದಲ್ಲಿ 13 ಕವಿಗಳು ಕವನ ವಾಚಿಸಿದರು. ದಟ್ಟವಾದ ಮೋಡದ ವಾತಾವರಣದಲ್ಲಿ, ತುಂತುರು ಮಳೆಯ ಹನಿಯ ನಡುವಲಿ ಕವಿಗಳಿಂದ ಕಾವ್ಯ ಕಲರವ ನಡೆಯಿತು. ಫ್ಯಾನ್ಸಿ ಮುತ್ತಣ್ಣ, ಪುಟ್ಟಣ್ಣ ಆಚಾರ್ಯ, ಶರ್ಮಿಳಾ ರಮೇಶ್, ಜಲಾ ಕಾಳಪ್ಪ, ಪೂಜಾ, ಅನಿತಾ ಶುಭಾಕರ್, ರುಬೀನಾ, ವಸಂತಿ, ದೀಪಿಕಾ, ಸುದರ್ಶನ್, ನ.ಲ.ವಿಜಯ, ಸು&divound;ೀತಾ ಲೋಕೇಶ್, ಕಾಂಚನ ಅವರುಗಳಿಂದ ಹಸಿರಿನ ಮೂಲಕ ಉಸಿರನ್ನು ಉಳಿಸಿಕೊಳ್ಳುವ ಬಗೆಗಿನ ಕವನಗಳಾದ ಅನಾಥ ಹೆಜ್ಜೆಗಳು, ಬಿಕರಿಯಾಗದಿರಲಿ ಈ ಮಣ್ಣು, ಆಚರಿಸು ವನಮಹೋತ್ಸವ, ಸಾಲು ಮರದ ತಿಮ್ಮಕ್ಕ, ಸೃಷ್ಟಿಯ ಮಹಿಮೆಯಲಿ, ವನಸಿರಿ, ಮರ ಮಾತನಾಡಿದಾಗ, ಸವಿನೆನಪು, ತಾಯ್ನಾಡಿನ ಕುವರರೇ, ಕವಿಯ ಮನ, ಕಿಟಕಿ ಬಾಗಿಲು ತೆರೆದು ಬಿಡಿ, ಮನಸ್ಸಿನ ಹೊಸ್ತಿಲಲಿ, ಮಣ್ಣಿನ ಮಗ ಸೇರಿದಂತೆ ಅನೇಕ ಕವನಗಳು ನೆರೆದಿದ್ದವರಲ್ಲಿ ಅರಿವು ಮೂಡಿಸಿದವು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಾ ಏಜಣ್ಣ ಶಾಲಾ ಆವರಣದಲ್ಲಿ ಗಿಡ ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದಕ್ಕೂ ಮುನ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಧರ್ಮಪ್ಪ ಅವರು ಮಾತನಾಡಿ, ಗಿಡನೆಡುವದರ ಮೂಲಕ ಪರಿಸರ ಜಾಗೃತಿಯನ್ನು ಮೂಡಿ ಸುತ್ತಿರುವದು ಸಂತಸದ ವಿಷಯ. ಓಝೋನ್ ಕೊರತೆಯಿಂದ ಪರಿಸರ ನಾಶವಾಗುತ್ತಿರುವ ಕಾರಣ ಇಂದು ನಾವೆಲ್ಲರೂ ಬಳಲುತ್ತಿದ್ದೇವೆ. ಪರಿಸರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯೂ ಹೌದು. ಈ ವಿಷಯದಲ್ಲಿ ಪ್ರತಿಯೊಬ್ಬರೂ ಜಾಗೃತರಾಗಿರಬೇಕು. ಪರಿಸರವನ್ನು ಉಳಿಸುವತ್ತ ಸರ್ವರೂ ಕಾರ್ಯೋನ್ಮುಖರಾಗಬೇಕು ಎಂದರು.

ಇದೇ ಸಂದರ್ಭ ಸೋಮವಾರಪೇಟೆಯಲ್ಲಿ ದರ್ಜಿಯಾಗಿರುವ, ತಾಯಿ ಪ್ರೇಮಿಯಾದ ಬಿ.ಲಿಂಗಪ್ಪ ಅವರನ್ನು ಸನ್ಮಾನಿಸಲಾಯಿತು. ನಂತರ ಮಾತನಾಡಿದ ಅವರು, ತಾಯಿ ತನ್ನ ದೇಹದ ರಕ್ತವನ್ನು ಹಾಲಿನ ರೂಪದಲ್ಲಿ ನಮಗೆಲ್ಲಾ ನೀಡಿರುತ್ತಾಳೆ. ಆಕೆಯನ್ನು ಆದರಿಸಿ ಸತ್ಕರಿಸುವದು ನಮ್ಮೆಲ್ಲರ ಕರ್ತವ್ಯ ಎಂದರು. ವೇದಿಕೆಯಲ್ಲಿ ಕವಿಬಳಗದ ಅಧ್ಯಕ್ಷ ಸುದರ್ಶನ್, ಕವಿಗೋಷ್ಠಿ ಅಧ್ಯಕ್ಷೆ ರಾಣಿ ರವೀಂದ್ರ, ತಾಲೂಕು ಕರವೇ ಅಧ್ಯಕ್ಷ ದೀಪಕ್, ಮಹಿಳಾ ಘಟಕದ ಅಧ್ಯಕ್ಷೆ ರೂಪಾ ಸುರೇಶ್, ಗ್ರಾವi ಘಟಕದ ಅಧ್ಯಕ್ಷ ವಿಶ್ವನಾಥ್, ಕವಯಿತ್ರಿ ಸುನೀತಾ ಲೋಕೇಶ್, ಗ್ರಾಮಸ್ಥರು, ಶಿಕ್ಷಕರು, ಕರವೇ ಸದಸ್ಯರು ಮತ್ತಿತರು ಉಪಸ್ಥಿತರಿದ್ದರು.