ಕುಶಾಲನಗರ, ನ. 1: ಟಿಪ್ಪು ಜಯಂತಿ ಸಂದರ್ಭ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಭಾರೀ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಬಗ್ಗೆ ಕಠಿಣ ನಿರ್ಧಾರ ಕೈಗೊಂಡಿದೆ. ಟಿಪ್ಪು ಜಯಂತಿ ಸರಕಾರದ ಸೂಚನೆಯಂತೆ ಎಲ್ಲೆಡೆ ನಡೆಯಲಿದ್ದು, ಯಾವದೇ ಮುನ್ಸೂಚನೆ ಇಲ್ಲದೆ ಅನಧಿಕೃತವಾಗಿ ಆಚರಣೆ ನಡೆಯುವಂತಿಲ್ಲ.

ರಾಜ್ಯ ಸರಕಾರದ ಅಧಿಸೂಚನೆಯಂತೆ ರಾಜ್ಯ, ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಟಿಪ್ಪು ಜಯಂತಿ ಆಚರಿಸಲು ಅನುಮತಿ ನೀಡಿದ್ದು, ಈ ನಿಟ್ಟಿನಲ್ಲಿ ರೂ. 60 ಲಕ್ಷಗಳನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮುಖಾಂತರ ಸರಕಾರ ಮಂಜೂರು ಮಾಡಿದೆ. ಜಯಂತಿಯನ್ನು ಆಚರಿಸಲು ರಾಜ್ಯದ 30 ಜಿಲ್ಲಾ ಕೆಂದ್ರಗಳಿಗೆ ತಲಾ ರೂ. 50 ಸಾವಿರಗಳಂತೆ ತಾಲೂಕು ಮಟ್ಟಕ್ಕೆ ತಲಾ ರೂ. 25 ಸಾವಿರ ಗಳಂತೆ ಹಣ ಬಿಡುಗಡೆ ಮಾಡಲು ಕ್ರಮ ಕೈಗೊಂಡಿದೆ. ಈ ನಿಟ್ಟಿನಲ್ಲಿ ಪೂರ್ವಭಾವಿ ಸಿದ್ಧತೆಗಳು ಮಾಡಿಕೊಳ್ಳುವಂತೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಅಕ್ಟೋಬರ್ 20 ರಂದು ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದೆ.

ಈ ಸಂಬಂಧ ಕೊಡಗು ಜಿಲ್ಲಾಡಳಿತ ಎಲ್ಲಾ ರೀತಿಯಲ್ಲಿ ಸಿದ್ಧತೆಗಳನ್ನು ನಡೆಸುತ್ತಿದ್ದು, ಕಳೆದ ವರ್ಷ ಟಿಪ್ಪು ಜಯಂತಿ ಸಂದರ್ಭ ಕೊಡಗು ಜಿಲ್ಲೆಯಲ್ಲಿ ನಡೆದ ರೀತಿಯಲ್ಲಿ ಯಾವದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಎಚ್ಚರಿಕೆ ವಹಿಸಲಿದೆ. ಪೊಲೀಸ್ ಮೂಲಗಳ ಪ್ರಕಾರ ಈಗಾಗಲೇ ಜಿಲ್ಲಾ ಪೊಲೀಸ್ ಇಲಾಖೆ ಹಲವು ಸಭೆಗಳನ್ನು ನಡೆಸಿದ್ದು, ಟಿಪ್ಪು ಜಯಂತಿ ಸಂದರ್ಭ ಶಾಂತಿ ಸುವ್ಯವಸ್ಥೆ ಕಾಪಾಡಲು ಕಠಿಣ ಕ್ರಮ ಕೈಗೊಳ್ಳಲಿದೆ.

ಪೊಲೀಸ್ ಮೂಲಗಳ ಪ್ರಕಾರ ಈ ಬಾರಿ ಜಯಂತಿ ಸಂದರ್ಭ ಮೆರವಣಿಗೆ ನಡೆಸುವಂತಿಲ್ಲ. ಬಹಿರಂಗ ಸಭೆ ನಡೆಸುವಂತಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿಯಾಗುವ ಸಂಭವವಿದೆ. ಇನ್ನೆರಡು ದಿನಗಳಿಂದ ಮುಂದಿನ ಆದೇಶದ ತನಕ ಜಿಲ್ಲೆಗೆ ಒಳಬರುವ ಎಲ್ಲಾ ವಾಹನಗಳನ್ನು ತಪಾಸಣೆಗೆ ಒಳಪಡಿಸಲು ಸೂಚನೆ ನೀಡಲಾಗಿದೆ. ಹೋಂ ಸ್ಟೇ, ಪ್ರವಾಸಿ ಕೇಂದ್ರ, ಲಾಡ್ಜ್‍ಗಳಲ್ಲಿ ತಂಗುವ ಪ್ರತೀ ವ್ಯಕ್ತಿಯ ಮಾಹಿತಿ ಪೊಲೀಸ್ ಇಲಾಖೆಗೆ ಕಡ್ಡಾಯವಾಗಿ ನೀಡಬೇಕಾಗಿದೆ. ಅಪರಿಚಿತರ ಮೇಲೆ ಪೊಲೀಸರು ತೀವ್ರ ನಿಗಾ ವಹಿಸಲಿದ್ದಾರೆ.

ಕಳೆದ ಬಾರಿ ಟಿಪ್ಪು ಜಯಂತಿ ಘಟನೆಯಲ್ಲಿ ಪೊಲೀಸ್ ಮೊಕದ್ದಮೆಗೆ ಒಳಗಾದ ವ್ಯಕ್ತಿಗಳಿಂದ ಈ ಸಂದರ್ಭ ಯಾವದೇ ಶಾಂತಿ ಭಂಗವಾಗದಂತೆ ಜಿಲ್ಲಾಡಳಿತ ಮುಚ್ಚಳಿಕೆಯೊಂದಿಗೆ ರೂ. 1 ಲಕ್ಷ ಬಾಂಡ್‍ನ ಭದ್ರತೆ ತೆಗೆದುಕೊಳ್ಳಲಿದೆ. ಜಯಂತಿ ಸಂದರ್ಭ ಯಾವದೇ ಸಂಘಟನೆಗಳು ಪರ - ವಿರೋಧ ವ್ಯಕ್ತಪಡಿಸುವದು ಕಂಡುಬಂದಲ್ಲಿ ಪೊಲೀಸ್ ಕಾನೂನು ಕ್ರಮಕ್ಕೆ ಒಳಪಡಬೇಕಾಗುತ್ತದೆ.

ಟಿಪ್ಪು ಜಯಂತಿ ವಿಷಯದಲ್ಲಿ ಸಮಾಜದಲ್ಲಿ ಅಶಾಂತಿ ಉಂಟುಮಾಡುವ ಪ್ರಮುಖರನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ತೆಗೆದುಕೊಳ್ಳುವ ಬಗ್ಗೆಯೂ ಇಲಾಖೆ ಚಿಂತನೆ ಹರಿಸಿದೆ. ಈಗಾಗಲೆ ಜಿಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ವಿಶೇಷ ತರಬೇತಿಯೊಂದಿಗೆ ರಕ್ಷಣಾ ಕವಚ ಸೇರಿದಂತೆ ಅವಶ್ಯಕತೆಯುಳ್ಳ ಶಸ್ತ್ರಗಳನ್ನು ಪೂರೈಸಲಾಗಿದೆ. ಅಂದಾಜು 1 ಸಾವಿರಕ್ಕೂ ಅಧಿಕ ಪೊಲೀಸರು ಹೊರ ಜಿಲ್ಲೆಯಿಂದ ನಿಯೋಜಿಸಲಾಗುತ್ತಿದ್ದು, ಅಶಾಂತಿ ಉಂಟು ಮಾಡುವವರನ್ನು ಸಾಗಿಸಲು 50 ಕ್ಕೂ ಅಧಿಕ ಬಸ್‍ಗಳನ್ನು ಒದಗಿಸಲಾಗಿದ್ದು, ಅವರುಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವದರೊಂದಿಗೆ ಬಳ್ಳಾರಿ ಅಥವಾ ಇನ್ನಿತರ ಜೈಲ್‍ಗಳಿಗೆ ರವಾನಿಸುವ ವ್ಯವಸ್ಥೆಗೂ ಪೊಲೀಸ್ ಇಲಾಖೆ ಸಜ್ಜಾಗಿದೆ. ಈ ಬಾರಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸರು ಟೊಂಕ ಕಟ್ಟಿ ನಿಂತಿದ್ದಾರೆ.

ಸದÀ್ಯ ಎರಡು ದಿನಗಳ ಒಳಗಾಗಿ ದಕ್ಷಿಣ ವಲಯದ ಪೊಲೀಸ್ ಮಹಾ ನಿರೀಕ್ಷಕರು ಜಿಲ್ಲೆಗೆ ಭೇಟಿ ನೀಡಲಿದ್ದು, ಈ ಬಗ್ಗೆ ಅಧಿಕೃತ ಆದೇಶ ಹೊರ ಬೀಳಲಿದೆ. ಕುಶಾಲನಗರಕ್ಕೆ ಭೇಟಿ ನೀಡಿದ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಬಳಿ ಟಿಪ್ಪು ಜಯಂತಿ ಭದ್ರತಾ ವ್ಯವಸ್ಥೆಗಳ ಬಗ್ಗೆ ‘ಶಕ್ತಿ’ ಪ್ರತಿಕ್ರಿಯೆ ಬಯಸಿದಾಗ ಇನ್ನೆರೆಡು ದಿನಗಳಲ್ಲಿ ಈ ಬಗ್ಗೆ ಮಾಹಿತಿ ಒದಗಿಸುವದಾಗಿ ಸ್ಪಷ್ಟಪಡಿಸಿದ್ದಾರೆ.

- ಚಂದ್ರಮೋಹನ್