ವೀರಾಜಪೇಟೆ, ನ. 1: ಪಟ್ಟಣ ಪಂಚಾಯಿತಿಯ ದೈನಂದಿನ ಸೇವೆಯಲ್ಲಿ ತೊಡಗುವ ಕಾರ್ಮಿಕರು ಬಿಡುವಿನ ಸಮಯದಲ್ಲಿ ಆಟೋಟಗಳಲ್ಲಿಯೂ ಭಾಗವಹಿಸುವದರಿಂದ ಮನರಂಜನೆಯೊಂದಿಗೆ ಮನಸ್ಸಿಗೆ ಉಲ್ಲಾಸ-ನೆಮ್ಮದಿ ದೊರೆಯಲಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಕೂತಂಡ ಸಚಿನ್ ಕುಟ್ಟಯ್ಯ ಹೇಳಿದರು.

ವೀರಾಜಪೇಟೆ ಪಟ್ಟಣ ಪಂಚಾಯಿತಿ ವತಿಯಿಂದ ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಮೂರು ದಿನಗಳವರೆಗೆ ಹಮ್ಮಿಕೊಂಡಿದ್ದ ಆಟೋಟ ಸ್ಪರ್ಧೆಗಳ ಸಮಾರೋಪದ ಅಧ್ಯಕ್ಷತೆ ವಹಿಸಿದ್ದ ಸಚಿನ್ ಕುಟ್ಟಯ್ಯ ಅವರು ಪಟ್ಟಣ ಪಂಚಾಯಿತಿಯ ಅಗತ್ಯ ಸೇವೆಗಳಲ್ಲಿ ಭಾಗಿಯಾಗುವ ಕಾರ್ಮಿಕರು ಸರಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದರು.

ಪಟ್ಟಣ ಪಂಚಾಯಿತಿ ಅಭಿಯಂತರ ಎನ್.ಪಿ. ಹೇಮ್‍ಕುಮಾರ್ ಮಾತನಾಡಿ, ಪೌರ ಕಾರ್ಮಿಕರು ಶ್ರಮ ಜೀವಿಗಳಾಗಿದ್ದು, ಅವರ ಸೇವೆ ಅಮೋಘದ್ದಾಗಿದೆ. ಅವರ ಸೇವೆಯನ್ನು ಪರಿಗಣಿಸಿ ಸರಕಾರ ಪೌರ ಕಾರ್ಮಿಕರ ದಿನಾಚರಣೆಯನ್ನು ಆಚರಿಸುವಂತೆ ಆದೇಶಿಸಿದೆ. ಅದರಂತೆ ಪ್ರತಿಯೊಬ್ಬ ಕಾರ್ಮಿಕನಿಗೂ ಆಟೋಟ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಕಾರ್ಮಿಕರ ದಿನಾಚರಣೆಯ ಅಂಗವಾಗಿ ಕಾರ್ಮಿಕರಿಗಾಗಿ ಕೇರಂ, ಚೆಸ್, ಷಟಲ್ ಕಾಕ್, ಕಬಡ್ಡಿ, ಫುಟ್À ಬಾಲ್, ವಾಲಿಬಾಲ್, ಥ್ರೋ ಬಾಲ್, ಹಗ್ಗ ಜಗ್ಗಾಟ, ನೃತ್ಯ ಸ್ಪರ್ಧೆ ಸೇರಿದಂತೆ ವಿವಿಧ ರೀತಿಯ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು.

ಇದೇ ಸಮಾರಂಭದಲ್ಲಿ ಪಟ್ಟಣ ಪಂಚಾಯಿತಿಗೆ ಶಿಸ್ತುಬದ್ಧ, ಕರ್ತವ್ಯ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿರುವ ಕಾರ್ಮಿಕ ಆರ್ಮುಗಂ ಹಾಗೂ ಸುಬ್ಬಮ್ಮ ಅವರುಗಳನ್ನು ಸನ್ಮಾನಿಸಲಾಯಿತು.

ಇಲ್ಲಿನ ಪುರಭವನದಲ್ಲಿ ನಿನ್ನೆ ದಿನ ಏರ್ಪಡಿಸಿದ್ದ ಸಮಾರಂಭದಲ್ಲಿ ಅತಿಥಿಗಳಾಗಿ ಉಪಾಧ್ಯಕ್ಷೆ ತಸ್ನೀಂ ಅಕ್ತರ್, ಸ್ಥಾಯಿ ಸಮಿತಿ ಅಧ್ಯಕ್ಷೆ ಬಿ.ಡಿ. ಸುನಿತಾ, ಸದಸ್ಯರುಗಳಾದ ಟಿ.ಜೆ. ಶಂಕರ್ ಶೆಟ್ಟಿ, ಇ.ಸಿ. ಜೀವನ್, ಮಹಮ್ಮದ್ ರಾಫಿ, ಸವಿತಾ, ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್ ಉಪಸ್ಥಿತರಿದ್ದರು. ಯೋಜನಾಧಿಕಾರಿ ಶೈಲಾ ಕಾರ್ಯಕ್ರಮ ನಿರೂಪಿಸಿದರು.