ಗೋಣಿಕೊಪ್ಪಲು, ನ. 1: ಮಳೆಯ ಅಭಾವ, ಅಂತರ್ಜಲ ಮಟ್ಟ ಕುಸಿತ. ಬರಿದಾಗುತ್ತಿರುವ ಕೆರೆ, ಕಟ್ಟೆ, ಬಾವಿಗಳು. ಭತ್ತವನ್ನೇ ಬೆಳೆದು ಬಾಳು ಹಸನಾಗಿಸಿಕೊಳ್ಳುತ್ತಿದ್ದ ಈ ವಿಭಾಗದ ರೈತರ ಕಂಗಳು ಇದೀಗ ಒದ್ದೆಯಾಗುತ್ತಿದೆ. ವರುಣನ ಕೃಪೆಗಾಗಿ ದಿನವೂ ಪ್ರಾರ್ಥನೆ ಮಾಡುತ್ತಿರುವ ರೈತಾಪಿ ವರ್ಗ ನಿರಾಶೆಯೊಂದಿಗೆ ಅಸಹಾಯಕರಾಗಿ ಆಗಸವನ್ನೇ ದಿಟ್ಟಿಸಿ ನೋಡುವ ಸ್ಥಿತಿ ನಿರ್ಮಾಣವಾಗಿದೆ. ಮಳೆಯ ನೆರಳಿನ ಪ್ರದೇಶ ಎಂದು ಕರೆಯಲ್ಪಡುವ ಬಾಳೆಲೆ ವ್ಯಾಪ್ತಿಯ ರೈತರು ಕಳೆದ 35 ವರ್ಷಗಳಿಂದಲೂ ಕಾಣದ ಭೀಕರ ಬರಗಾಲದ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಲಕ್ಷ್ಮಣ ತೀರ್ಥ ನದಿಯ ತೊಟ್ಟಿಲು ಎಂದೇ ಬಣ್ಣಿಸಲ್ಪಡುವ ಬಾಳೆಲೆ, ನಿಟ್ಟೂರು, ಕೊಟ್ಟಗೇರಿ, ದೇವನೂರು ಮುಂತಾದ ಗ್ರಾಮಗಳಲ್ಲಿ ಈ ಬಾರಿಯ ಮುಂಗಾರು ತನ್ನ ರುದ್ರ ನರ್ತನ ತೋರಲೇ ಇಲ್ಲ. ಲಕ್ಷ್ಮಣ ತೀರ್ಥ ಪ್ರವಾಹ ಉಕ್ಕಿ ಹರಿದಾಗ ಮಾತ್ರ ಬಾಳೆಲೆ-ನಿಟ್ಟೂರು ಸಂಪರ್ಕ ತಿಂಗಳಾನುಗಟ್ಟಲೆ ಕಡಿತಗೊಳ್ಳುತ್ತದೆ. ಇಲ್ಲಿನ ಸಾವಿರಾರು ಹೆಕ್ಟೇರ್ ಭತ್ತದ ಗದ್ದೆಗಳು ಜಲಾವೃತಗೊಳ್ಳುವದು ಸಾಮಾನ್ಯ. ಪ್ರವಾಹ ಸ್ಥಿತಿ ನಿಯಂತ್ರಣಕ್ಕೆ ಬಂದ ನಂತರವೇ ಇಲ್ಲಿನ ರೈತರ ಕೃಷಿ ಚಟುವಟಿಕೆಗಳು, ನಾಟಿ ಕಾರ್ಯ ಚುರುಕುಗೊಳ್ಳುತ್ತಿದ್ದವು. ಆದರೆ, ಈ ಬಾರಿ ಇಲ್ಲೆಲ್ಲಾ ಇಂಚುಗಟ್ಟಲೆ ವರುಣ ಆರ್ಭಟಿಸಲೇ ಇಲ್ಲ. ಮಿಲಿ ಮೀಟರ್, ಸೆಂಟಿ ಮೀಟರ್ ಲೆಕ್ಕದಲ್ಲಿ ಮಳೆ ದಾಖಲಾಗಿದೆ. ಸುಮಾರು ವಾರ್ಷಿಕ 45-50 ಇಂಚು ಮಳೆಯಾಗುವ ಪ್ರದೇಶದಲ್ಲಿ ಈ ಬಾರಿ ಕೇವಲ 18 ರಿಂದ 22 ಇಂಚು ಮಳೆ ದಾಖಲಾಗಿದೆ. ಶ್ರೀಮಂಗಲ ಸಮೀಪ ಇರ್ಪುವಿನಿಂದ ಧುಮ್ಮಿಕ್ಕಿ ಹರಿಯುವ ಲಕ್ಷ್ಮಣ ತೀರ್ಥ ಬಾಳೆಲೆ ವ್ಯಾಪ್ತಿಗೆ ಬರುವಷ್ಟರಲ್ಲಿ ಇಂಗಿ ಹೋಗುತ್ತಿದೆ. ಪಂಪ್‍ಸೆಟ್ ಅಳವಡಿಸಿ, ಗದ್ದೆಗೆ ನೀರು ಹಾಯಿಸುವದು ಕಾನೂನು ಬಾಹಿರವಾದರೂ ಅದಕ್ಕೂ ನೀರಿಲ್ಲ. ಇದರ ನಡುವೆ ಅನಿಯಮಿತ ವಿದ್ಯುತ್ ಕಡಿತ ಬೇರೆ. ಭತ್ತದ ಮಡಿಗಳಲ್ಲಿ ಸಾಕಷ್ಟು ನೀರು ನಿಂತಲ್ಲಿ ಮಾತ್ರ ಭತ್ತ ಮೊಳಕೆ ಒಡೆಯಲು ಸಾಧ್ಯ. ಭತ್ತದ ಪೈರು ಒಣಗುತ್ತಿದೆ, ನೆಲ ಬಿರುಕು ಬಿಡುತ್ತಿದೆ, ಲಕ್ಷಗಟ್ಟಲೆ ಸಾಲ ಮಾಡಿ ನಾಟಿ ಮಾಡಿದ ರೈತನ ಸ್ಥಿತಿ ಚಿಂತಾಜನಕವಾಗಿದೆ. ಈ ಬಗ್ಗೆ ‘ಶಕ್ತಿ’ ಬರಗಾಲ ಗ್ರಾಮದ ಭತ್ತದ ಮಡಿಗಳಲ್ಲಿ ಹೆಜ್ಜೆ ಹಾಕಿದಾಗ ಕಂಡು ಬಂದ ವಾಸ್ತವ ವಿಚಾರದ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದೆ.

ಕೊಡಗು ಜಿಲ್ಲೆಯಲ್ಲಿ ಈ ಬಾರಿ ಹಿಂದೆಂದಿಗಿಂತಲೂ ಭತ್ತದ ಕೃಷಿ ಚಟುವಟಿಕೆ ಕುಸಿತ ಕಂಡಿದೆ. ಹೆಚ್ಚಿನ ರೈತರು ವಾಣಿಜ್ಯ ಬೆಳೆಗಳಿಗೆ, ಶುಂಠಿ ಇತ್ಯಾದಿ ಕೃಷಿಗೆ ಒತ್ತು ನೀಡಿದ ಹಿನ್ನೆಲೆ, ಆನೆ, ಕಾಡು ಹಂದಿ ಇತ್ಯಾದಿ ಕಾಡು ಪ್ರಾಣಿಗಳ ಉಪಟಳಗಳಿಂದ ಬೇಸತ್ತು ರೈತರು ಸಾವಿರಾರು ಹೆಕ್ಟೇರ್ ಭತ್ತದ ಗದ್ದೆಯನ್ನು ಪಾಳು ಬಿಟ್ಟಿರುವ ಕಾರಣ ಇಂಗು ಗುಂಡಿಯಂತೆ ಕಾರ್ಯ ನಿರ್ವಹಿಸುತ್ತಿದ್ದ ಗದ್ದೆಯಲ್ಲಿಯೂ ಅಂತರ್ಜಲ ಮಟ್ಟ ತೀವ್ರ ಕುಸಿತ ಕಂಡಿದೆ. ಬಾಳೆಲೆ ಹೋಬಳಿ ವ್ಯಾಪ್ತಿಯಲ್ಲಿ ಸುಮಾರು 2100 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದ್ದು, ಈ ಬಾರಿ 1800 ಹೆಕ್ಟೇರ್‍ನಲ್ಲಿ ಭತ್ತದ ಬಿತ್ತನೆ ಮಾಡಲಾಗಿದೆ ಎಂದು ಕೃಷಿ ಇಲಾಖೆ ಅಂದಾಜಿಸಿದೆ. ಬಾಳೆಲೆ ಹೋಬಳಿ ಕೃಷಿ ಇಲಾಖೆ ವ್ಯಾಪ್ತಿಗೆ ಬಾಳೆಲೆ, ಬೆಸಗೂರು, ಬೀಳೂರು, ನಿಟ್ಟೂರು, ಕಾರ್ಮಾಡು, ಕೊಟ್ಟಗೇರಿ, ದೇವನೂರು, ರುದ್ರಬೀಡು, ಧನುಗಾಲ ಇತ್ಯಾದಿ ಗ್ರಾಮಗಳು ಒಳಪಡುತ್ತವೆ. ಈ ಭಾಗದ ರೈತರು ಯಾವ ಪರಿ ಸಂಕಷ್ಟಕ್ಕೆ ಒಳಗಾಗಿದ್ದಾರೆಂದರೆ ಕೃಷಿ ಇಲಾಖಾಧಿಕಾರಿಗಳೂ ಅಸಹಾಯಕರಾಗಿ ಕೈಚೆಲ್ಲಿ ಕುಳಿತ್ತಿದ್ದಾರೆ! ಕಂದಾಯ ಇಲಾಖೆ ರೈತರ ಮಡಿಗಳಿಗೆ ಭೇಟಿ ಕೊಟ್ಟು ಸರ್ಕಾರಕ್ಕೆ ನಷ್ಟದ ವರದಿಯನ್ನು ನೀಡುವ ಜವಾಬ್ದಾರಿಯನ್ನೂ ಮರೆತು ನಿದ್ರಿಸುತ್ತಿರುವದು ಕಂಡು ಬಂದಿದೆ. ಕಂದಾಯ ಇಲಾಖೆ ಹಾಗೂ ಕೃಷಿ ಇಲಾಖೆ ಜಂಟಿಯಾಗಿ ಇಲ್ಲಿನ ಭತ್ತದ ಗದ್ದೆಯ ನಷ್ಟದ ಪ್ರಮಾಣ ಅಂದಾಜು ಮಾಡಿದೆ ಎಂದಿಟ್ಟುಕೊಳ್ಳುವ. ಆದರೆ, ನೀಡಬಹುದಾದ ಪರಿಹಾರದ ಮೊತ್ತ ಕೇವಲ ಹೆಕ್ಟೇರ್‍ಗೆ ರೂ. 6 ಸಾವಿರ ಮಾತ್ರ. ಇದು ಹಸಿದ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಅಷ್ಟೆ. ಇಂದು ಓರ್ವ ರೈತನಿಗೆ ಮಿತಿಮೀರಿದ ಕಾರ್ಮಿಕ ವೇತನ ಒಳಗೊಂಡಂತೆ ಉಳುಮೆ, ಭತ್ತದ ಬಿತ್ತನೆ, ನಾಟಿ ಕಾರ್ಯ ಇತ್ಯಾದಿಗಳಿಗಾಗಿ ಎಕರೆಗೆ ರೂ. 15 ಸಾವಿರದಿಂದ ರೂ. 25 ಸಾವಿರದವರೆಗೂ ಖರ್ಚು ತಗುಲಿದ್ದಿದೆ! ಒಂದು ಎಕರೆಯಲ್ಲಿ ಸರಾಸರಿ 16 ರಿಂದ 18 ಕ್ವಿಂಟಾಲ್ ಭತ್ತದ ಉತ್ಪಾದನೆಯ ಗುರಿ ಇಟ್ಟುಕೊಂಡರೂ, ಈ ಬಾರಿ ಹವಾಮಾನ ವೈಪರೀತ್ಯ, ಬೆಂಕಿರೋಗ, ನೀರಿನ ಕೊರತೆ ಹಿನ್ನೆಲೆ ಕನಿಷ್ಟ 3 ಕ್ವಿಂಟಾಲ್‍ಗೆ ಭತ್ತದ ಉತ್ಪಾದನೆ ಕುಸಿದರೂ ಅತಿಶಯವಿಲ್ಲ. ಕೆಲವು ಮಡಿಗಳಲ್ಲಿ ಜಾನುವಾರುಗಳು ತಿನ್ನಲೂ ಅಸಾಧ್ಯವಾದ ರೀತಿಯಲ್ಲಿ ಪೈರುಗಳು ಬೆಂದು ಹೋಗಿದೆ! ಅಲ್ಲಲ್ಲಿ ಒಂದಷ್ಟು ನೀರಾವರಿಯಿಂದ ಭತ್ತ ಮೊಳಕೆ ಹೊಡೆದರೂ ಕಾಳು ಕಟ್ಟದೆ ಜೊಳ್ಳಾಗಿ ನಷ್ಟಕ್ಕೆ ಕಾರಣವಾಗಿದೆ.

ಈ ಭಾಗದ ರೈತರಿಗೆ ಒಂದಷ್ಟು ಸಾಂತ್ವನ ಸಿಗಬೇಕಾದಲ್ಲಿ ಕನಿಷ್ಟ ಎಕರೆಗೆ 16 ಕ್ವಿಂಟಾಲ್ ಭತ್ತದ ಬೆಲೆಯನ್ನು ಪರಿಹಾರ ರೂಪದಲ್ಲಿ ನಿಗದಿ ಮಾಡುವ ಮೂಲಕ, ಗ್ರಾ.ಪಂ. ಮಟ್ಟದಲ್ಲಿ ಬರಗಾಲ ಪೀಡಿತ ಗ್ರಾಮ ಎಂದು ಘೋಷಣೆ ಮಾಡುವ ಮೂಲಕ ಪ್ರಧಾನ ಮಂತ್ರಿ ಫಸಲು ಭೀಮಾ ವಿಮಾ ಯೋಜನೆಯನ್ನು ಅನುಷ್ಟಾನಗೊಳಿಸಬೇಕಾಗಿದೆ. ಸಹಕಾರ ಬ್ಯಾಂಕ್‍ಗಳಲ್ಲಿ ಬೆಳೆ ಸಾಲ, ಇತ್ಯಾದಿ ಕೃಷಿ ಸಾಲವನ್ನು ಹೊಂದಿದ್ದಾರೋ ಅಥವಾ ಫಸಲು ಭೀಮಾ ವಿಮಾ ಯೋಜನೆಯ ಎಕರೆಗೆ ರೂ. 392 ರಂತೆ ಪಾವತಿ ಮಾಡಿದ್ದಾರೋ ಅವರಿಗೆ ಸದರಿ ಯೋಜನೆಯಿಂದ ಸಾಂತ್ವನ ಸಿಗಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಾರಿ ಪ್ರಾಯೋಗಿಕವಾಗಿ ಫಸಲು ಭೀಮಾ ಯೋಜನೆ ಜಾರಿಗೆ ತಂದಿದ್ದು, ಜುಲೈ 31ಕ್ಕೆ ಗಡವು ಮುಗಿದಿದೆ. ಈ ಬಗ್ಗೆ ಕೃಷಿ ಇಲಾಖೆ, ಕಂದಾಯ ಇಲಾಖೆ ಹಾಗೂ ಗ್ರಾ.ಪಂ.ಗಳು ಪೂರಕವಾಗಿ ರೈತರ ಸಂಕಷ್ಟಕ್ಕೆ ಸ್ಪಂದನೆ ನೀಡಬೇಕಾಗಿದೆ. ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿ ಮಟ್ಟದಲ್ಲಿಯೂ ವಿಶೇಷ ಸಭೆ ನಡೆದು ರೈತರ ಪರ ತೀರ್ಮಾನ ಕೈಗೊಳ್ಳುವ ಅವಶ್ಯಕತೆ ಇದೆ.

ಈ ನಡುವೆ ತಾ.2 ರಂದು (ಇಂದು) ವೀರಾಜಪೇಟೆ ತಹಶೀಲ್ದಾರ್ ಕಚೇರಿಯಲ್ಲಿ ಉಪವಿಭಾಗಾಧಿಕಾರಿ, ಕೃಷಿ ಅಧಿಕಾರಿಗಳು ಹಾಗೂ ಕಂದಾಯ ಇಲಾಖಾಧಿಕಾರಿಗಳ ಮಟ್ಟದ ಸಭೆ ನಡೆಯಲಿದೆ.

45 ಎಕರೆಯಲ್ಲಿ ಭತ್ತ ಕೃಷಿ ಮಾಡಿ ದುಃಖ ತೋಡಿಕೊಂಡ ಪವನ್

ನಿಟ್ಟೂರು ಗ್ರಾ.ಪಂ. ಉಪಾಧ್ಯಕ್ಷ ಪೆÇೀಡಮಾಡ ಪವನ್ ಚಿಟ್ಟಿಯಪ್ಪ ಅವರು ನಿಟ್ಟೂರು ವ್ಯಾಪ್ತಿಯಲ್ಲಿಯೇ ಅತ್ಯಧಿಕ ಭತ್ತ ಬೆಳೆಯುವ ಕೃಷಿಕ. ಈ ಬಾರಿ ಉತ್ಸಾಹದಿಂದಲೇ ಸುಮಾರು 45 ಎಕರೆ ಪ್ರದೇಶದಲ್ಲಿ ಸರ್ವೆ ನಂ. 106, 112 ಹಾಗೂ 114 ರಲ್ಲಿ ಐಆರ್-64(5 ಎಕರೆ), ಅತಿರಾ (15 ಎಕರೆ), ದೊಡ್ಡಿ (15 ಎಕರೆ) ಹಾಗೂ ತನು( 10 ಎಕರೆ) ಭತ್ತದ ಕೃಷಿಯನ್ನು ಉತ್ಸಾಹದಿಂದಲೇ ಮಾಡಿದ್ದರು. ಭತ್ತದ ಬಿತ್ತನೆ ಮೊಳಕೆ ಒಡೆಯುವದು, ನಾಟಿ ಕಾರ್ಯ, ಅಗತ್ಯ ಗೊಬ್ಬರ ಹಾಕುವದು ಇತ್ಯಾದಿ ಒಳಗೊಂಡಂತೆ ಗದ್ದೆಗಳು ಜೂನ್ - ಜುಲೈನಲ್ಲಿ ಹಸಿರಿನಿಂದ ಕಂಗೊಳಿಸುತ್ತಿದ್ದವು. ಪೈರುಗಳು ಉತ್ತಮವಾಗಿಯೇ ಬೆಳವಣಿಗೆ ಕಂಡಿತ್ತು. ತಮ್ಮ ಪೂರ್ವಜರ ಕಾಲದಿಂದಲೇ ಅನುಸರಿಸುತ್ತಾ ಬಂದಿದ್ದ ಕೃಷಿ ಪದ್ಧತಿಯನ್ನು ಇವರೂ ಮುಂದುವರಿಸಿದ್ದರು. ಕೇವಲ 18 ಇಂಚು ಮಳೆಯಾದ ಹಿನ್ನೆಲೆ ಇವರ ಗದ್ದೆಗಳ ಪೈರುಗಳು ಸೊರಗತೊಡಗಿದವು. ಕೆರೆಯ ನೀರನ್ನು ಹಾಯಿಸಿಯೂ ಪ್ರಯತ್ನಿಸಿದ್ದರು. ಕೆರೆಯೂ ಖಾಲಿ, ಲಕ್ಷ್ಮಣ ತೀರ್ಥ ನದಿಯಲ್ಲಿಯೂ ನೀರಿಲ್ಲ. ನೆರೆಯ ಕೃಷಿಕರ ಕೆರೆಯಲ್ಲಿಯೂ ನೀರಿಲ್ಲ. ತಮ್ಮ 35 ವರ್ಷದ ಅನುಭವದಲ್ಲಿ ಇದೇ ಪ್ರಥಮ ಬಾರಿಗೆ ಸೋತು ಹೋಗಿದ್ದೇನೆ ಎಂದು ದುಃಖ ವ್ಯಕ್ತಪಡಿಸುತ್ತಾರೆ. ಈವರೆಗೆ ಕಂದಾಯ ಇಲಾಖೆ, ಕೃಷಿ ಇಲಾಖಾಧಿಕಾರಿಗಳು ಇತ್ತ ಸುಳಿದಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ. ಸುಮಾರು ರೂ. 5 ಲಕ್ಷ ನಷ್ಟ ಅನುಭವಿಸುವ ಭೀತಿಯಲ್ಲಿದ್ದಾರೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಸರಹದ್ದಿನ ವಡ್ದರಮಾಡು ಕಟ್ಟೆ ವ್ಯಾಪ್ತಿಯಿಂದ ಕಾಡು ಹಂದಿಗಳೂ ಕೃಷಿಕರ ಮಡಿಗಳಿಗೆ ನುಸುಳಿ ಪೈರುಗಳನ್ನು ನಾಶಪಡಿಸುತ್ತಿರುವ ಆರೋಪವೂ ಬಾಳೆಲೆ-ದೇವನೂರು ವ್ಯಾಪ್ತಿಯಲ್ಲಿ ಕೇಳಿಬಂದಿದೆ.

ಈ ನಡುವೆ ನಲ್ಲೂರು ಇತ್ಯಾದಿ ರೈತರ ಕೃಷಿ ಪ್ರದೇಶಕ್ಕೆ ಕೊಡಗು ಜಿಲ್ಲಾ ಉಪ ಕೃಷಿ ನಿರ್ದೇಶಕ ಕೆ.ರಾಜು ಭೇಟಿ ನೀಡಿದ್ದಾರೆ. ಫಲಿತಾಂಶ ತಿಳಿದಿಲ್ಲ.

ದೇವನೂರು ರೈತರ ಗೋಳು

ಬಾಳೆಲೆ ಗ್ರಾ.ಪಂ. ವ್ಯಾಪ್ತಿಯ ದೇವನೂರುವಿನಲ್ಲಿ ಹಲವು ರೈತರು ಉತ್ಸಾಹದಿಂದಲೇ ನಾಟಿ ಕಾರ್ಯ ಮಾಡಿದ್ದರು. ಇದೀಗ ತಲೆ ಮೇಲೆ ಕೈ ಹೊತ್ತು ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಾಳೆಲೆ ಗ್ರಾ.ಪಂ. ಮಾಜಿ ಅಧ್ಯಕ್ಷ ಅದೇಂಗಡ ವಿನು ಉತ್ತಪ್ಪ ಅವರು ಹಲವು ರೈತರ ಗದ್ದೆಗಳಿಗೆ ಕರೆದೊಯ್ದು ವಾಸ್ತವ ಮನವರಿಕೆ ಮಾಡಿದರು. ಅಲ್ಲಿನ ನೂರಾರು ಎಕರೆ ಗದ್ದೆಯಲ್ಲಿ ಕೃಷಿಕರಾದ ಮೇಚಂಡ ಪೆಮ್ಮಯ್ಯ, ಅಳಮೇಂಗಡ ಮುದ್ದಪ್ಪ, ಸತೀಶ್, ಮೇಚಂಡ ಕಿಶ, ಮಾಪಂಗಡ ಡಾ. ಬೆಳ್ಳಿಯಪ್ಪ, ಡಾ. ಸುಬ್ಬಯ್ಯ, ಅದೇಂಗಡ ಡಿ. ತಿಮ್ಮಯ್ಯ, ಅದೇಂಗಡ ಬೆಳ್ಳಿಯಪ್ಪ, ಪ್ರಕಾಶ್, ಮಂಜು, ಅಡ್ಡೇಂಗಡ ರಾಖಿ ನಾಣಯ್ಯ, ಯೋಗೀಶ, ಅಜಯ್, ರಘು, ಸುಗುಣ, ಮಂದೆಮಾಡ ಬೋಸು, ಕಾಂಡೇರ ಗಣಪತಿ ಹಾಗೂ ಅಳಮೇಂಗಡ, ಪೆÇೀಡಮಾಡ, ಕೊಕ್ಕಲೆಮಾಡ, ಐಚಂಡ ಮನೆತನದ ರೈತರು ಭತ್ತದ ಮಡಿಗಳಲ್ಲಿ ನೀರಿಲ್ಲದೆ ಭತ್ತದ ಪೈರು ದಿನನಿತ್ಯ ಒಣಗುತ್ತಿರುವದನ್ನು ನೋಡಿ ಕಣ್ಣೀರು ಹಾಕುತ್ತಿದ್ದಾರೆ. ಕೃಷಿಯಲ್ಲಿಯೇ ಸಂತೃಪ್ತಿ ಕಂಡುಕೊಳ್ಳುತ್ತಿದ್ದ ಇವರೆಲ್ಲರ ಎದೆಯಲ್ಲಿ ಇದೀಗ ಭೀಕರ ಬರಗಾಲದ ಛಾಯೆ ನಡುಕ ಹುಟ್ಟಿಸಿದೆ.

ದೇವನೂರು ಅಣೆಕಟ್ಟು ಮೂಲಕ ಬ್ರಿಟೀಷರ ಆಳ್ವಿಕೆ ಸಂದರ್ಭ 1932 ರಲ್ಲಿ 200 ಕ್ಕೂ ಅಧಿಕ ಎಕರೆ ಭತ್ತದ ಗದ್ದೆಗೆ ನೀರುಣಿಸಲು ಬಲದಂಡೆ ನಾಲೆಯನ್ನು ನಿರ್ಮಾಣ ಮಾಡಲಾಗಿತ್ತು. ಈ ಬಾರಿ ಮಳೆಗಾಲದಲ್ಲಿಯೂ ನಾಲೆಯಲ್ಲಿ ನೀರು ಹರಿಯಲೇ ಇಲ್ಲ. ಇಲ್ಲಿ ಕೇವಲ 22-23 ಇಂಚು ಮಳೆ ದಾಖಲಾಗಿದೆ. ಇದೀಗ ಭತ್ತದ ‘ತೆಂಡೆ ಒಡೆದು ಕಾಳು ಕಟ್ಟುವ ಸಮಯ’ದಲ್ಲಿ ಭತ್ತದ ಗದ್ದೆಗಳ ಭೂಮಿ ನೀರಿಲ್ಲದೆ ಬಿರಿಯುತ್ತಿದೆ. ಪೆÇಟ್ಯಾಷ್ ಇನ್ನಿತರ ಗೊಬ್ಬರ ಹಾಕುವ ಸಮಯದಲ್ಲಿ ಭತ್ತದ ಮಡಿಗಳಲ್ಲಿ ಸಾಕಷ್ಟು ನೀರು ನಿಲ್ಲಬೇಕಾದ ಅಗತ್ಯವಿತ್ತು. ಈ ಬಾರಿ ಹಿಂಗಾರು ಮಳೆ ಕೈಕೊಟ್ಟ ಹಿನ್ನೆಲೆ ಸಂದಿಗ್ದ ಪರಿಸ್ಥಿತಿಯಲ್ಲಿ ರೈತಾಪಿ ವರ್ಗ ಸರ್ಕಾರದಿಂದ ಸಿಗುವ ಪರಿಹಾರಕ್ಕಾಗಿ ಎದುರು ನೋಡುತ್ತಾ ಇದೆ. ದೇವನೂರು ವ್ಯಾಪ್ತಿಯಲ್ಲಿ ಮಾಜಿ ಜಿ.ಪಂ. ಸದಸ್ಯ ಅರಮಣಮಾಡ ರಂಜನ್ ಚಂಗಪ್ಪ ಅವರೂ ನೂರಾರು ಎಕರೆ ಭತ್ತದ ನಾಟಿ ಕಾರ್ಯ ಮುಗಿಸಿ, ಇದೀಗ ಒಣಗಿ ಸೊರಗುತ್ತಿರುವ ಗದ್ದೆಯನ್ನು ನೋಡುತ್ತಾ ತಮ್ಮ ಅತೀವ ದುಃಖ ವ್ಯಕ್ತಪಡಿಸಿದ್ದಾರೆ.

30 ಎಕರೆಯಲ್ಲಿ ನಾಟಿ ಮಾಡಿ ಹೆಣಗುತ್ತಿರುವ ಕೊಪ್ಪಲು ಅಚ್ಯುತ

ಬಾಳೆಲೆ ಗ್ರಾ.ಪಂ. ಹಾಲಿ ಸದಸ್ಯರೂ ಆಗಿರುವ ಕೊಪ್ಪಲು ಅಚ್ಯುತ ತಮ್ಮ ಕುಟುಂಬದ 15 ಎಕರೆ ಗದ್ದೆಯಲ್ಲದೆ, ಗುತ್ತಿಗೆ ಆಧಾರದಲ್ಲಿ ಹೆಚ್ಚುವರಿ 15 ಎಕರೆ ಗದ್ದೆಯನ್ನು ಹೊಂದಿಕೊಂಡು ಲಕ್ಷ್ಮಣ ತೀರ್ಥ ನದಿ ಪಾತ್ರದಲ್ಲಿ ಅತಿರಾ, ಸೋನಾ ಮಸೂರಿ, ವಿಎನ್‍ಕೆ ಹೈಬ್ರೀಡ್ ಭತ್ತದ ಕೃಷಿಯನ್ನು ಉತ್ಸಾಹದಿಂದ ಮಾಡಿದ್ದರು. ಇದೀಗ ಲಕ್ಷ್ಮಣ ತೀರ್ಥದ ಅಳಿದುಳಿದ ನೀರನ್ನು 30 ಎಕರೆ ಭತ್ತದ ಗದ್ದೆಗೆ ಹಾಯಿಸುತ್ತಿದ್ದಾರೆ. ನದಿಯಲ್ಲಿ ಅಂತರ್ಜಲ ಕುಸಿತ ಹಿನ್ನೆಲೆ ಎತ್ತರದ ಪ್ರದೇಶದಲ್ಲಿರುವ ಭತ್ತದ ಗದ್ದೆಯಲ್ಲಿ ನೀರು ನಿಲ್ಲುತ್ತಿಲ್ಲ. ಕಾಫಿ, ಕಾಳು ಮೆಣಸಿಗೆ ಹನಿ ನೀರಾವರಿ ಮೂಲಕ ನೀರನ್ನು ಸಾಕಷ್ಟು ನೀಡಲು ಸಾಧ್ಯವಿದ್ದರೂ ಗದ್ದೆಯಲ್ಲಿ ನೀರು ನಿಲ್ಲಿಸಬೇಕಾದರೆ ಸಾಹಸವನ್ನೇ ಮಾಡಬೇಕಾದೀತು. ಅಚ್ಯುತ ಅವರು ಹಗಲು-ರಾತ್ರಿಯೆನ್ನದೆ ಫಸಲು ತೆಗೆಯಲು ವಿದ್ಯುತ್ ಕಣ್ಣಾ ಮುಚ್ಚಾಲೆ ನಡುವೆಯೇ ಹೆಣಗುತ್ತಿದ್ದಾರೆ. ಈಗಿದ್ದೂ ಭತ್ತದ ಪೈರು ಬೆಂಕಿ ರೋಗಕ್ಕೆ ತುತ್ತಾಗುತ್ತಿದೆ. ಈ ವಿಭಾಗದಲ್ಲಿ ಸಾಕಷ್ಟು ಜಾನುವಾರುಗಳನ್ನು ರೈತರು ಸಾಕುತ್ತಿದ್ದು, ಭವಿಷ್ಯದಲ್ಲಿ ಮೇವಿನಕೊರತೆಯೂ ಕಂಡು ಬರಲಿದೆ. ಇಲ್ಲಿ ಇತ್ತೀಚೆಗಿನ ವರ್ಷಗಳಲ್ಲಿ ಸುಮಾರು 10 ಕ್ಕೂ ಅಧಿಕ ಜಾನುವಾರುಗಳು ಹುಲಿಯ ಬಾಯಿಗೆ ಆಹಾರವಾಗಿದೆ. ಇಲ್ಲಿನ ಶ್ರೀಕಂಠಪ್ಪ ಅವರ ಗಾಡಿ ಎತ್ತು ಹುಲಿಯ ಬಾಯಿಗೆ ಸಿಲುಗಿದ್ದು, ರೂ.30 ಸಾವಿರ ಪರಿಹಾರ ಘೋಷಣೆ ಮಾಡಿ ಇನ್ನೂ ಅರಣ್ಯ ಇಲಾಖಾಧಿಕಾರಿಗಳು ಮೀನಾ ಮೇಷ ಎಣಿಸುತ್ತಿರುವದಾಗಿ ಆರೋಪ ವ್ಯಕ್ತವಾಗಿದೆ. ಇಲ್ಲಿನ ಹಿರಿಯರಾದ ಸತ್ಯಮೂರ್ತಿ, ನರಸಿಂಗರಾವ್ ಅವರು ಇಂತಹಾ ಭೀಕರತೆ, ನೀರಿನ ಅಭಾವ ಎಂದೂ ಕಂಡಿರಲಿಲ್ಲ ಎಂದು ಹೇಳಿದ್ದಾರೆ. ರಾಮಕೃಷ್ಣ ಹೆಗ್ಗಡೆ ಮುಖ್ಯಮಂತ್ರಿ ಅವಧಿಯಲ್ಲಿ 1981-82 ರಲ್ಲಿ ಬಾಳೆಲೆ ವ್ಯಾಪ್ತಿಯಲ್ಲಿ ಇಂತಹಾ ಸನ್ನಿವೇಶ ಸೃಷ್ಟಿಯಾಗಿತ್ತು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ವೀರಾಜಪೇಟೆಯಲ್ಲಿ ಈ ಬಾರಿ ಸುಮಾರು 16 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ನಿಗದಿಪಡಿಸಲಾಗಿತ್ತು. ಇದೀಗ 12,400 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಕೃಷಿ ಮಾಡಲಾಗಿದ್ದು, ತಾಲೂಕಿನಾದ್ಯಂತ ಎಲ್ಲೆಡೆ ಬರಗಾಲದ ತೀವ್ರತೆ ಕಂಡು ಬಂದಿದೆ. ಬಾಳೆಲೆ ನಿಟ್ಟೂರುವಿನಲ್ಲಿ ಈಗಲೇ 4 ದಿನಕ್ಕೊಮ್ಮೆ ಕೇವಲ 30 ನಿಮಿಷ ಮಾತ್ರ ನಲ್ಲಿಯಲ್ಲಿ ನೀರು ಬಿಡಲಾಗುತ್ತಿದೆ. ಕೃಷಿ ಮಾತ್ರವಲ್ಲದೆ, ಕುಡಿಯುವ ನೀರು, ಜಾನುವಾರು ಮೇವಿಗೂ ಸಂಕಷ್ಟ ಎದುರಾಗಿದೆ.

ಕೊಟ್ಟಗೇರಿ ನಿವಾಸಿ, ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ಅರಮಣ ಸತೀಶ್ ದೇವಯ್ಯ ಅವರೂ ಸರ್ಕಾರದ ಮಟ್ಟದಲ್ಲಿ ತುರ್ತು ಪರಿಹಾರ ಘೋಷಣೆಗೆ ಒತ್ತಾಯಿಸಿದ್ದಾರೆ.

ಮೂವರೇ ಕೃಷಿ ಅಧಿಕಾರಿಗಳು!

ಇಡೀ ವೀರಾಜಪೇಟೆ ತಾಲೂಕಿನ ಭತ್ತ ಕೃಷಿಯ ಅವಲೋಕನವನ್ನು ಮೂವರು ಮಹಿಳೆಯರೇ ನಿಭಾಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪೆÇನ್ನಂಪೇಟೆಯ ಕೃಷಿ ಅಧಿಕಾರಿ ರೀನಾ ಅವರನ್ನು ಪ್ರಬಾರ ತಾಲೂಕು ಸಹಾಯಕ ಕೃಷಿ ನಿರ್ದೇಶಕರಾಗಿ ನಿಯೋಜಿಸಲಾಗಿದೆ. ಬಾಳೆಲೆಯ ಕೃಷಿ ಅಧಿಕಾರಿ ಎ.ಪಿ. ಮೀರಾ ಅವರನ್ನು ಹುದಿಕೇರಿ ಹೋಬಳಿಗೂ ಹೆಚ್ಚುವರಿಯಾಗಿ ನಿಯೋಜಿಸಲಾಗಿದೆ. ಅಮ್ಮತ್ತಿ ಹೋಬಳಿಯ ಕೃಷಿ ಅಧಿಕಾರಿಯಾಗಿ ಲವಿನ್ ಮಾದಪ್ಪ ಕಾರ್ಯನಿರ್ವಹಿಸುತ್ತಿದ್ದಾರೆ. ಜಲಾನಯನ ಅಧಿಕಾರಿ ಶಿವೇಗೌಡರನ್ನು ಹೆಚ್ಚುವರಿಯಾಗಿ ಇದೀಗ ನಿಯೋಜಿಸಲಾಗಿದೆ. ಕನಿಷ್ಟ 8 ಕೃಷಿ ಅಧಿಕಾರಿಗಳಲ್ಲಿ ಕೇವಲ ಇಬ್ಬರು ಮಾತ್ರ ತಲೆ ಕೆಡಿಸಿಕೊಂಡು ಎಲ್ಲೆಡೆ ಓಡಾಟ ನಡೆಸಿದ್ದಾರೆ. ಇದರ ನಡುವೆ ಗೋಣಿಕೊಪ್ಪಲು, ಅಮ್ಮತ್ತಿ, ಬಾಳೆಲೆ ಹಾಗೂ ಹುದಿಕೇರಿಯಲ್ಲಿ 2016-17ರ ಸಾಲಿನ ಕೃಷಿ ಅಭಿಯಾನ ಕಾರ್ಯಕ್ರಮದ ಹೊಣೆಯನ್ನೂ ಇರುವ ಮೂವರು ಅಧಿಕಾರಿಗಳು ಹೊತ್ತುಕೊಂಡು, ಅಮಂತ್ರಣ ಹಂಚುತ್ತಿದ್ದಾರೆ. ಬರಗಾಲ ಎದುರಾಗಿದೆ. ಎದುರಿಸದೆ ವಿಧಿಯಿಲ್ಲ. ರಾಜ್ಯದ 170ಕ್ಕೂ ಅಧಿಕ ತಾಲೂಕುಗಳಲ್ಲಿ ಬರ ಇದೆ. ಆದರೆ, ಕಾವೇರಿಯ ಮಡಿಲು, ಲಕ್ಷ್ಮಣ ತೀರ್ಥದ ತೊಟ್ಟಿಲು, ಬರಪೆÇಳೆ ಹುಕ್ಕಿ ಹರಿಯುವ ಗ್ರಾಮಗಳಲ್ಲಿ ನೀರಿಗೆ ಹಾಹಾಕಾರ ಎದುರಾಗಿರುವದು ನಿಜಕ್ಕೂ ರೈತರಿಗೂ, ಸಾರ್ವಜನಿಕರಿಗೂ, ಪ್ರಾಣಿ-ಪಕ್ಷಿಗಳಿಗೂ ಸಂಕಷ್ಟದ ಕಾಲವಾಗಿದೆ. ರಾಜ್ಯ ಸರ್ಕಾರ, ಜಿಲ್ಲಾಡಳಿತ, ಜನಪ್ರತಿನಿಧಿಗಳ ಸ್ಪಂದನ ಇಂತಹ ಸಂದರ್ಭ ಅಗತ್ಯ ಬೇಕಾಗಿದೆ.