ವೀರಾಜಪೇಟೆ, ಅ. 10: ಇತ್ತೀಚೆಗೆ ನಡೆದ ಜಿಲ್ಲಾಮಟ್ಟದ ಕ್ರೀಡಾ ಕೂಟದಲ್ಲಿ ವೀರಾಜಪೇಟೆ ಸರಕಾರಿ ಪದವಿಪೂರ್ವ ಕಾಲೇಜು ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ನಡೆದ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಸಾಧನೆಗೈದಿದ್ದಾರೆ.

ಕಾಲೇಜಿನ ಬಾಲಕಿಯರ ಫುಟ್‍ಬಾಲ್ ತಂಡ ಬೀದರ್‍ನಲ್ಲಿ ನಡೆದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಬಾಲಕಿಯರ ಕಬಡ್ಡಿ ತಂಡವು ಜಿಲ್ಲಾಮಟ್ಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ತಂಡದ ಸದಸ್ಯರುಗಳಾದ ಚೈತ್ರ ಮತ್ತು ಅಕ್ಕಣಿ ರಾಜ್ಯ ಮಟ್ಟದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿದ್ದಾರೆ. ಬಾಲಕರ ಥ್ರೋಬಾಲ್ ತಂಡ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಈ ತಂಡದ ಜಗದೀಶ್ ಮತ್ತು ತಿಲಕ್ ರಾಜ್ಯ ಮಟ್ಟದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿದ್ದಾರೆ.

ಮೇಲಾಟ ಪಂದ್ಯಗಳಲ್ಲಿ ಇದೇ ಕಾಲೇಜಿನ ಮೇರಿ 1500 ಮೀ. ಹಾಗೂ 3,000 ಮೀ. ಓಟದಲ್ಲಿ ಪ್ರಥಮ ಸ್ಥಾನಗಳಿಸಿ ರಾಜ್ಯಮಟ್ಟದ ಸ್ಪರ್ದೆಗೆ ಆಯ್ಕೆ ಹೊಂದಿರುತ್ತಾರೆ. ಗುಡ್ಡಗಾಡು ಓಟದಲ್ಲಿ ಕಾಲೇಜಿನ ಜಗದೀಶ್ ಹಾಗೂ ತಿಲಕ್ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇದೇ ಕಾಲೇಜಿನ ಪೂಜಾ ಎಂಬ ವಿದ್ಯಾರ್ಥಿನಿ ಬಾಲಕಿಯರ ಫುಟ್‍ಬಾಲ್ ಪಂದ್ಯಾವಳಿಯಲ್ಲಿ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ರಾಜ್ಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಯಾವದೇ ದೈಹಿಕ ಶಿಕ್ಷಣ ಶಿಕ್ಷಕರ ತರಬೇತಿ ಇಲ್ಲದೆ ಕೇವಲ ಸಾಮಾನ್ಯ ವಿಷಯಗಳನ್ನು ಬೋಧಿಸುವ ಉಪನ್ಯಾಸಕರ ಮಾರ್ಗದರ್ಶನದಲ್ಲಿ ಸರಕಾರಿ ಕಾಲೇಜಿನ ವಿದ್ಯಾರ್ಥಿಗಳು ಈ ಮಟ್ಟದ ಸಾಧನೆಗೈದಿರುವದು ವಿಶೇಷತೆಯಾಗಿದೆ.