ಸೋಮವಾರಪೇಟೆ, ಅ. 10: ರೈತರು ತಮ್ಮ ಜಮೀನಿನ ಮಣ್ಣನ್ನು ಪರೀಕ್ಷೆಗೊಳಪಡಿಸಿ, ಭೂಮಿಯ ಫಲವತ್ತತೆಯನ್ನು ಕಾಯ್ದುಕೊಳ್ಳುವ ಮೂಲಕ ಉತ್ತಮ ಇಳುವರಿ ಪಡೆದು ಆರ್ಥಿಕವಾಗಿ ಸಬಲರಾಗಬೇಕೆಂದು ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಜೆ. ದೀಪಕ್ ಸಲಹೆ ನೀಡಿದರು.

ಜಿ.ಪಂ., ಕೃಷಿ ಇಲಾಖೆ ವತಿಯಿಂದ ಸಮೀಪದ ಶಾಂತಳ್ಳಿ ಕುಮಾರಲಿಂಗೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಕೃಷಿ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರೈತರು ತಮ್ಮ ಜಮೀನಿನಲ್ಲಿ ಆಯಾ ಕಾಲಕ್ಕೆ ಅನುಗುಣವಾಗಿ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು. ಸರ್ಕಾರದ ಸವಲತ್ತುಗಳನ್ನು ಬಳಸಿಕೊಳ್ಳಲು ಕೃಷಿ ಇಲಾಖೆಯ ಸಂಪರ್ಕವನ್ನು ಹೊಂದಿರಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎಸ್.ಪಿ. ಪೊನ್ನಪ್ಪ ಮಾತನಾಡಿ, ಕೃಷಿ ಅಭಿಯಾನ ಕಾರ್ಯಕ್ರಮ ಪ್ರತಿ ಹೋಬಳಿ ಮಟ್ಟ ಮತ್ತು ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದರೆ ಹೆಚ್ಚಿನ ರೈತರಿಗೆ ಅನುಕೂಲವಾಗುತ್ತದೆ. ರೈತರು ಪಾಳು ಬಿಟ್ಟಿರುವ ಗದ್ದೆಗಳನ್ನು ಪುನಶ್ಚೇತನ ಗೊಳಿಸುವ ಮೂಲಕ ಭತ್ತ ಮತ್ತು ಇತರೆ ಉಪ ಬೆಳೆಗಳ ಕೃಷಿಗೆ ಮುಂದಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಂತಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಪಿ. ಅನಿಲ್ ಕುಮಾರ್ ಮಾತನಾಡಿ, ಗ್ರಾಮದ ಯುವಕರು ಪಟ್ಟಣದತ್ತ ಆಕರ್ಷಿತರಾಗಿ ತೀರ ಕಡಿಮೆ ವೇತನಕ್ಕೆ ವಲಸೆ ಹೋಗುವದರ ಬದಲಾಗಿ ಕೃಷಿಯನ್ನು ಅವಲಂಬಿಸಿ ದರೆ ಆರ್ಥಿಕವಾಗಿ ತಮ್ಮ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಬಹುದು ಎಂದು ಹೇಳಿದರು.

ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕಾ ಸಂಶೋಧನಾ ಕೆಂದ್ರದ ವಿಜ್ಞಾನಿ ವೆಂಕಟರಮಣಪ್ಪ ಮಾತನಾಡಿ, ಕಾಳುಮೆಣಸು, ತರಕಾರಿ, ಭತ್ತದಲ್ಲಿ ಕಂಡುಬರುವ ರೋಗ ಮತ್ತು ಕೀಟ ಬಾಧೆಗಳು ಹಾಗೂ ಇದರ ನಿಯಂತ್ರಣದ ಕುರಿತು ರೈತರಿಗೆ ಮಾಹಿತಿ ನೀಡಿದರು.

ಜಿಲ್ಲಾ ಕಾರ್ಯಕ್ರಮ ಸಂಯೋಜಕರಾದ ಕೆ. ಪುಟ್ಟಸ್ವಾಮಿ ಮಾತನಾಡಿ, ಸಾವಯವ ಕೃಷಿ, ಎರೆ ಗೊಬ್ಬರ ತಯಾರಿಕೆ, ಜೀವಸಾರ ಘಟಕ, ಜೀವಾಣು ಗೊಬ್ಬರ, ಜೀವಾಮೃತ ತಯಾರಿಕೆ ಮತ್ತು ಅದರ ಉಪಯೋಗಗಳ ಕುರಿತು ಮಾಹಿತಿ ನೀಡಿದರು. ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಸದಸ್ಯ ಬಿ.ಎ. ಧರ್ಮಪ್ಪ, ಶಾಂತಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ದಿನೇಶ್, ಕೃಷಿ ಉಪನಿರ್ದೇಶಕ ಡಾ. ಕೆ. ರಾಜು, ಸೋಮವಾರಪೇಟೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರಾಜಶೇಖರ್, ಕೃಷಿ ಅಧಿಕಾರಿ ಪಲ್ಲವಿ, ತಾಂತ್ರಿಕ ಅಧಿಕಾರಿ ಮುಕುಂದ್ ಮತ್ತಿತರರು ಉಪಸ್ಥಿತರಿದ್ದರು.