ಗೋಣಿಕೊಪ್ಪಲು, ಅ. 10: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳು, ಪ್ರತಿಭೆ ಹಾಗೂ ಸೃಜನ ಶೀಲತೆಯಲ್ಲಿ ನಗರ ಪ್ರದೇಶದ ಮಕ್ಕಳೊಂದಿಗೆ ಸರಿ ಸಮಾನರಾಗಿ ಹೆಜ್ಜೆಯನ್ನು ಇಡುತ್ತಿದ್ದಾರೆ.

ಆದರೆ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಕೆಲವೊಂದು ಸೌಲಭ್ಯಗಳ ಕೊರತೆ ಎದುರಾಗುತ್ತಿದೆ. ಇದನ್ನು ಮನಗಂಡ ದಾನಿಗಳಾದ ಉದ್ಯಮಿ ಕಡೇಮಾಡ ಕನಸು ದೇವಯ್ಯ ಅವರು ವಿದ್ಯಾರ್ಥಿಗಳಿಗೆ ಸಹಾಯ ಹಸ್ತ ಚಾಚುವದರ ಮೂಲಕ ಮಾದರಿಯಾಗಿದ್ದಾರೆ.

ಗ್ರಾಮೀಣ ಭಾಗವಾದ ದಕ್ಷಿಣ ಕೊಡಗಿನ ಕುಟ್ಟಂದಿ ಪ್ರೌಢಶಾಲೆಯ 100 ವಿದ್ಯಾರ್ಥಿಗಳಿಗೆ ಬೆಂಗಳೂರಿನ ಉದ್ಯಮಿ ಕೊಡಗಿನ ಬಿ. ಶೆಟ್ಟಿಗೇರಿಯ ನಿವಾಸಿ ಕಡೇಮಾಡ ಕನಸು ದೇವಯ್ಯ ಅವರು ಟ್ರ್ಯಾಕ್ ಶೂಟ್‍ಗಳನ್ನು ಉಚಿತವಾಗಿ ವಿತರಿಸಿದರು.

ಗ್ರಾಮಾಂತರ ಪ್ರದೇಶವಾದ ಕುಟ್ಟಂದಿ ಪ್ರೌಢ ಶಾಲೆಯಲ್ಲಿ ಪರಿಶಿಷ್ಟ ಜಾತಿ, ವರ್ಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಪ್ರಸ್ತುತ ಸಾಲಿನಲ್ಲಿ ಈ ಶಾಲೆಯು ಎಸ್.ಎಸ್.ಎಲ್.ಸಿ.ಯಲ್ಲಿ ಶೇ. 100 ಫಲಿತಾಂಶ ಪಡೆದು ಗಮನ ಸೆಳೆದಿತ್ತು.

ಬಡ ಮಕ್ಕಳು ಸಮವಸ್ತ್ರದ ಸಮಸ್ಯೆಯನ್ನು ಎದುರಿಸುತ್ತಿದ್ದರು. ಇದನ್ನು ಮನಗಂಡ ಬಿ. ಶೆಟ್ಟಿಗೇರಿಯ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಕಡೇಮಾಡ ಅಶೋಕ್ ಚಿಟ್ಟಿಯಪ್ಪ ಕುಟುಂಬದವರೇ ಆದ ಕನಸು ಗಣಪತಿಯವರಿಗೆ ಮನವಿ ಸಲ್ಲಿಸಿದ್ದರು.

ಮನವಿಗೆ ಸ್ಪಂದಿಸಿದ ಕನಸು ಗಣಪತಿಯವರು ತವರು ಗ್ರಾಮದ ಶಾಲಾ ಮಕ್ಕಳಿಗೆ ಉಚಿತವಾಗಿ ಟ್ರ್ಯಾಕ್ ಶೂಟ್‍ನ್ನು ತಾವೇ ಬೆಂಗಳೂರಿನಿಂದ ಆಗಮಿಸಿ ವಿದ್ಯಾರ್ಥಿಗಳಿಗೆ ವಿತರಣೆ ಮಾಡಿ ಮಾದರಿಯಾದರು. ಸಂಸ್ಥೆಯ ಅಧ್ಯಕ್ಷ ಚಂದುರ ಸಿ. ಚಂಗಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಟ್ರ್ಯಾಕ್ ಶೂಟ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದ ಪಂಚಾಯಿತಿ ಅಧ್ಯಕ್ಷ ಕಡೇಮಾಡ ಅಶೋಕ್, ಶಾಲೆಯು 53 ವರ್ಷಗಳನ್ನು ಪೂರೈಸಿದ್ದು, ಹಲವು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ ಶಾಲೆಯಾಗಿದೆ. ದಾನಿಗಳು ನೀಡಿರುವ ಸಮವಸ್ತ್ರವನ್ನು ಉತ್ತಮವಾಗಿ ಬಳಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಶಾಲೆಯ ನಿರ್ದೇಶಕ ಉಮೇಶ್ ಕೇಚಮಯ್ಯ ಮಾತನಾಡಿ, ಗ್ರಾಮೀಣ ಭಾಗದ ಶಾಲೆಯಲ್ಲಿ ಹೆಚ್ಚಿನ ಮಕ್ಕಳು ಬಡವರಿದ್ದಾರೆ. ಆದರೆ, ವಿದ್ಯಾಭ್ಯಾಸದಲ್ಲಿ ನಗರ ಪ್ರದೇಶವನ್ನು ಮೀರಿಸಿದ್ದು, ಈ ಶಾಲೆಯು ಎಸ್‍ಎಸ್‍ಎಲ್‍ಸಿಯಲ್ಲಿ ಶೇ. 100 ಫಲಿತಾಂಶ ಪಡೆದು ಕೀರ್ತಿ ತಂದಿದೆ ಶಿಕ್ಷಕರ ಅವಿರತ ಶ್ರಮ ಸಾರ್ಥಕವಾಗಿದೆ ಎಂದರು.

ನಿರ್ದೇಶಕ ಲಾಲ ಭೀಮಯ್ಯ ಅವರು ದಾನಿಗಳ ಗುಣಗಾನ ಮಾಡಿದರು. ಶಾಲೆ ಬೆಳೆದು ಬಂದ ಹಾದಿಯನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ನಿರ್ದೇಶಕರು ಗಳಾದ ತೀತಿಮಾಡ ಬೋಸ್ ಅಯ್ಯಪ್ಪ, ಪಾಂಡಂಡ ಕೆ. ರಮೇಶ್, ಬಾನಂಡ ದಿನೇಶ್, ಕಡೇಮಾಡ ವಿಜು, ಕೊಲತಂಡ ರಾಮಚ್ಚ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

ಶಾಲೆಯ ಮುಖ್ಯೋಪಾ ಧ್ಯಾಯಿನಿ ದೀಪಾ ಸ್ವಾಗತಿಸಿದರೆ, ವಿದ್ಯಾರ್ಥಿನಿ ಯಶೋದ ಪ್ರಾರ್ಥಿಸಿ ದರು. ಎ.ಎ. ಮುತ್ತಪ್ಪ ನಿರೂಪಿಸಿದರೆ, ಶಿಕ್ಷಕಿ ಯಸ್ಮ ಕಾರ್ಯಪ್ಪ ವಂದಿಸಿದರು.