ಶ್ರೀಮಂಗಲ, ಜೂ. 15: ದೈಹಿಕ ತೊಂದರೆಯಿಂದ ಬಳಲುತ್ತಿರುವ ಪತಿಯ ಪರಿಸ್ಥಿತಿಯ ಲಾಭವನ್ನು ಬಳಸಿಕೊಂಡು ಅಬಲೆ ಮಹಿಳೆಯಿಂದ ಗಂಡನ ಪಿತ್ರಾರ್ಜಿತ ಆಸ್ತಿಯಲ್ಲಿ ಕಾಫಿ ತೋಟಕ್ಕೆ ಕಂದಾಯ ನಿಗದಿ ಪಡಿಸಲು ಮತ್ತು ಸರ್ವೆ ಮಾಡಿಸಲು ಶ್ರೀಮಂಗಲ ಕಂದಾಯ ಇಲಾಖೆಯಲ್ಲಿನ ಗ್ರಾಮ ಲೆಕ್ಕಿಗರ ಸಹಾಯಕ ಸಿಬ್ಬಂದಿ ರೂ. 20 ಸಾವಿರ ಹಣ ಪಡೆದು ವಂಚಿಸಲು ಯತ್ನಿಸಿದ್ದು, ರೈತ ಸಂಘ ಮತ್ತು ಬೆಳೆಗಾರರ ಒಕ್ಕೂಟದ ಒತ್ತಡಕ್ಕೆ ಮಣಿದು ಪಡೆದ ಹಣವನ್ನು ಮಹಿಳೆಗೆ ಹಿಂತಿರುಗಿಸಿದ ಪ್ರಸಂಗ ನಡೆದಿದೆ.

ಈ ಬಗ್ಗೆ ಪತ್ರಿಕಾಗೊಷ್ಟಿಯಲ್ಲಿ ಮಾಹಿತಿ ನೀಡಿದ ನೊಂದ ಮಹಿಳೆ ಚೆಪ್ಪುಡೀರ ರೂಪಾ ಸುರೇಂದ್ರ ಕಳೆದ 13 ವರ್ಷಗಳಿಂದ ಗಂಡ ಚೆಪ್ಪಡೀರ ಸುರೇಂದ್ರ ಅವರು ಅನಾರೋಗ್ಯ ದಿಂದ ಬಳಲುತ್ತಿದ್ದು, ಸಂಸಾರದ ಎಲ್ಲಾ ಕೆಲಸವನ್ನು ತಾನೆ ನಿಭಾಯಿ ಸುತ್ತಿದ್ದು, ಗಂಡನ ಪಿತ್ರಾರ್ಜಿತ ಆಸ್ತಿ ಕೆ.ಬಾಡಗ ಗ್ರಾಮದ ಸರ್ವೆ ನಂ 16/1 ರಲ್ಲಿ 1.70 ಎಕರೆ ಜಾಗ ಕಂದಾಯಕ್ಕೆ ನಿಗದಿ ಪಡಿಸಬೇಕಾಗಿತ್ತು. ಈ ಬಗ್ಗೆ ವಿಚಾರಿಸಲು ಶ್ರೀಮಂಗಲ ಕಂದಾಯ ಇಲಾಖೆಗೆ 8 ತಿಂಗಳ ಹಿಂದೆ ತೆರಳಿದ ಸಂದರ್ಭ ಸಿಬ್ಬಂದಿ ಮಹೇಶ್ ಆಸ್ತಿಗೆ ಕಂದಾಯ ನಿಗದಿ ಪಡಿಸಲು 50 ವರ್ಷಗಳೇ ಹಿಡಿಯಬಹುದು ಎಂದು ಹೆದರಿಸಿ, ಇಲ್ಲಿನ ಕಂದಾಯ ಅಧಿಕಾರಿಗಳಿಗೆ, ತಹಶೀಲ್ದಾರರಿಗೆ, ಜಿಲ್ಲಾ ಉಪ ವಿಭಾಗಾಧಿಕಾರಿಯವರಿಗೆ ಹಣ ನೀಡಿದರೆ 2 ತಿಂಗಳಲ್ಲಿ ಕೆಲಸ ಮಾಡಿಕೊಡುತ್ತೇನೆ, ಇದಕ್ಕಾಗಿ ರೂ. 20 ಸಾವಿರ ಕೊಡಿ. ನನಗೆ ಹಣ ಬೇಡ ಅಧಿಕಾರಿಗಳಿಗೆ ಕೊಡಬೇಕು ಎಂದು ಹೇಳಿದ್ದಾನೆ. ಮನೆಯಲ್ಲಿನ ಕಷ್ಟ ಪರಿಸ್ಥಿತಿಯನ್ನು ನೆನೆದು ಮತ್ತು ಈ ವಿಷಯದ ಬಗ್ಗೆ ಅರಿವು ಕಡಿಮೆ ಇರುವದರಿಂದ ಮಹೇಶನಿಗೆ 8 ತಿಂಗಳ ಹಿಂದೆ 20 ಸಾವಿರ ಹಣ ನೀಡಿದ್ದು, ಹಣ ಪಡೆದುಕೊಂಡು ಮಹೇಶ್ ಇದಕ್ಕೆ ಸಂಬಂಧಪಟ್ಟ ಯಾವದೇ ಕೆಲಸ ಮಾಡದೇ ದಿನ ದೂಡುತ್ತಿದ್ದು, ಕರೆ ಮಾಡಿದರೂ ಸರಿಯಾಗಿ ಉತ್ತರಿಸದೆ ಸತಾಯಿಸು ತ್ತಿದ್ದ. 2 ಬಾರಿ ತಾಲೂಕು ಕಛೇರಿಗೆ ಬರ ಹೇಳಿ ಅಲ್ಲಿಯೂ ಈತ ಬಾರದೆ ದಿನ ಕಳೆದ ಪರಿಸ್ಥಿತಿ ನಿರ್ಮಾಣ ಮಾಡಿದ್ದಾನೆ ಎಂದು ಆರೋಪಿಸಿದರು.

ಕಛೇರಿಗೆ ಬಂದು ವಿಚಾರಿಸಿ ದಾಗ ಕಡತ ಮೇಲಾಧಿಕಾರಿ ಗಳ ಬಳಿ ಇದೆ ಇನ್ನು ಒಂದು ವಾರದಲ್ಲಿ ಮಾಡಿಕೊಡುತ್ತೇನೆ ಎಂಬ ಹಾರಿಕೆಯ ಉತ್ತರ ನೀಡುತ್ತಾ ಬಂದಿದ್ದಾನೆ. ಈ ಬಗ್ಗೆ ಅಲ್ಪ ಸ್ವಲ್ಪ ಮಾಹಿತಿ ಪಡೆದು ತಾನೇ ಖುದ್ದು ಆಸ್ತಿಗೆ ಕಂದಾಯ ನಿಗದಿ ಪಡಿಸುವ ಕೆಲಸಕ್ಕೆ ಇಳಿದು ಸರ್ವೆ ಕಾರ್ಯ ಮಾಡಿಸಿಕೊಂಡಿರುತ್ತೇನೆ. ಕಂದಾಯ ನಿಗದಿಪಡಿಸುವಿಕೆ ಚಾಲ್ತಿಯಲ್ಲಿದೆ. ನನ್ನ ಪೂರ್ವಾಪರವನ್ನು ಚೆನ್ನಾಗಿ ತಿಳಿದಿರುವ ಈತ ಹಣ ಪಡೆದು ಯಾವದೇ ಕೆಲಸ ಮಾಡಿಕೊಡದೆ ವಂಚಿಸಲು ಯತ್ನಿಸುತ್ತಿದ್ದ. ಕೊಟ್ಟ ಹಣವನ್ನು ಹಿಂತಿರುಗಿಸಲು ಕೇಳಿಕೊಂಡರೂ ಸತಾಯಿಸುತ್ತಿದ್ದು, ಈ ಬಗ್ಗೆ ಅಸಹಾಯಕಳಾದ ತಾನು ಕೊಡಗು ರೈತ ಸಂಘ ಮತ್ತು ಬೆಳೆಗಾರರ ಒಕ್ಕೂಟಕ್ಕೆ ದೂರು ನೀಡಿದ್ದು, ಇದರ ಬಗ್ಗೆ ಕೂಲಂಕಷ ವಾಗಿ ಪರಿಶೀಲಿಸಿ ನನ್ನ ನೋವನ್ನು ಮನಗಂಡು ಮೊನ್ನೆ ದಿನ ಕಂದಾಯ ಇಲಾಖೆಗೆ ಹೋಗಿ ಕೇಳಿದಾಗ ಹಣ ಸ್ವಲ್ಪ ದಿನದ ನಂತರ ಕೊಡುತ್ತೇನೆ ಎಂದಾಗ, ರೈತ ಸಂಘ ಹಾಗೂ ಬೆಳೆಗಾರರ ಸಂಘದ ಒತ್ತಡಕ್ಕೆ ಮಣಿದು ಸ್ಥಳದಲ್ಲಿಯೇ ನೀಡಿದ. ಇಂತಹವರ ಬಗ್ಗೆ ಎಚ್ಚರಿಕೆ ಅಗತ್ಯ. ಈತನ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ರೈತ ಸಂಘದ ವಕ್ತಾರ ಚಿಮ್ಮಂಗಡ ಗಣೇಶ್ ಮಾತನಾಡಿ, ಕಂದಾಯ ಇಲಾಖೆಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದ್ದು, ಸಾರ್ವಜನಿಕರು ಇದರಿಂದ ಕಣ್ಣೀರಿಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಶ್ರೀಮಂಗಲ ಕಂದಾಯ ಇಲಾಖೆಯ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದು, ಈ ಪ್ರಕರಣದಲ್ಲಿ ಮಹೇಶ್ ಹಣ ಪಡೆದಿರುವದನ್ನು ನಮಗಳ ಮುಂದೆ ಒಪ್ಪಿಕೊಂಡು ರೂಪಾ ಅವರಿಂದ ಪಡೆದ 20 ಸಾವಿರ ಹಣವನ್ನು ಹಿಂತಿರುಗಿಸಿದ್ದಾನೆ. ಇನ್ನು ಮುಂದೆಯಾದರೂ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕಾಗಿದೆ. ಇಂಥವ ರಿಂದ ಕಂದಾಯ ಇಲಾಖೆಗೆ ಕೆಟ್ಟ ಹೆಸರು ಬರುತ್ತಿದ್ದು, ಈತನ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಇನ್ನು ಮುಂದೆ ರೂಪಾ ಅವರ ಆಸ್ತಿಯ ಕಡತ ವಿಲೇವಾರಿ ಸಮಯದಲ್ಲಿ ಯಾವದೇ ಅಡ್ಡಿ ಆತಂಕಗಳನ್ನು ಉಂಟು ಮಾಡಿದರೆ ರೈತ ಸಂಘದಿಂದ ಕ್ರಮ ಕೈಗೊಳ್ಳಲಾಗುವದು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಅಜ್ಜಮಾಡ ಶಂಕರು ನಾಚಪ್ಪ, ರೈತ ಸಂಘದ ಸದಸ್ಯ ಮಚ್ಚಮಾಡ ರಂಜಿ ಉಪಸ್ಥಿತರಿದ್ದರು.