ಮಡಿಕೇರಿ, ಜೂ. 15: ಪರಿಶಿಷ್ಟ ಪಂಗಡದ ಉಪ ಯೋಜನೆಯಡಿ ಪರಿಶಿಷ್ಟ ಪಂಗಡದ ವಿವಿಧ ಅಭಿವೃದ್ಧಿ ಕಾರ್ಯಕ್ಕೆ ಬಿಡುಗಡೆಯಾಗುವ ಅನುದಾನಕ್ಕೆ ಹಿಂದುಳಿದ ಪಂಗಡವಾದ ಕುಡಿಯ ಜನಾಂಗಕ್ಕೆ ಸೌಲಭ್ಯ ವಿಸ್ತರಿಸುವಂತೆ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಸರಕಾರವನ್ನು ಆಗ್ರಹಿಸಿದ್ದಾರೆ.

ಈ ಕುರಿತು ಜಿಲ್ಲಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧೀನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.

ರಾಜ್ಯದಲ್ಲಿರುವ ಬುಡಕಟ್ಟು ಜನಾಂಗದವರಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಪಂಗಡಗಳಾದ ಸಿದ್ದಿ, ಮಲೈಕುಡಿ, ಸೋಲಿಗ, ಎರವ ಮತ್ತು ಡೋಂಗ್ರಿಗರೇಶಿಯ ಜನಾಂಗದವರನ್ನು ಗುರುತಿಸಿ ವಿಶೇಷ ಅಭಿವೃದ್ಧಿ ಯೋಜನೆಯಡಿ ಮೂಲಭೂತ ಸೌಕರ್ಯ ಒದಗಿಸಲು ಸರಕಾರದ ವತಿಯಿಂದ ಕೊಡಗು ಜಿಲ್ಲೆ ಸೇರಿ ಒಟ್ಟು 8 ಜಿಲ್ಲೆಗಳಿಗೆ ಅನುದಾನ ಬಿಡುಗಡೆ ಮಾಡಲಾಗುತ್ತಿದೆ.

ಆದರೆ, ಕೊಡಗಿನಲ್ಲಿ ಬುಡಕಟ್ಟು ಜನಾಂಗದವರಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಪಂಗಡಗಳಾದ ಸಿದ್ದಿ, ಮಲೈಕುಡಿ, ಸೋಲಿಗ, ಎರವ ಮತ್ತು ಡೋಂಗ್ರಿಗರೇಶಿಯ ಜನಾಂಗದವರಲ್ಲದೇ ‘ಕುಡಿಯ’ ಜನಾಂಗದವರು ಹೆಚ್ಚಾಗಿ ವಾಸಿಸುತ್ತಿದ್ದಾರೆ. ಕೊಡಗಿನ ‘ಕುಡಿಯ’ ಜನಾಂಗದವರು ಸಹ ಬುಡಕಟ್ಟು ಜನಾಂಗದವರಾಗಿದ್ದು, ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಪಂಗಡದವರಾಗಿರುತ್ತಾರೆ. ವಿಶೇಷ ಅಭಿವೃದ್ಧಿ ಯೋಜನೆಯಡಿ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿರುತ್ತಾರೆ.

2016-17ನೇ ಸಾಲಿನಲ್ಲಿ ವಿಶೇಷ ಅಭಿವೃದ್ಧಿ ಯೋಜನೆಯಡಿ ಅನುದಾನ ಬಿಡುಗಡೆ ಮಾಡುವಾಗ ಕೊಡಗಿನ ಬುಡಕಟ್ಟು ಜನಾಂಗದಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿವಾಗಿ ಅತ್ಯಂತ ಹಿಂದುಳಿದ ಪಂಗಡದವರಾದ ‘ಕುಡಿಯ’ ಜನಾಂಗದವರಿಗೂ ಸೌಲಭ್ಯ ಮಂಜೂರು ಮಾಡಬೇಕೆಂದು ಅವರು ಸರಕಾರವನ್ನು ಆಗ್ರಹಿಸಿದ್ದಾರೆ.