ಶ್ರೀಮಂಗಲ, ಅ. 28: ಟಿ.ಶೆಟ್ಟಿಗೇರಿ ವ್ಯಾಪ್ತಿಯ ವಿವಿಧ ಸಂಘ ಸಂಸ್ಥೆ ಹಾಗೂ ಬಿ.ಜೆ.ಪಿ ಪಕ್ಷದ ಪ್ರಮುಖರು ಭಾಗವಹಿಸಿದ ಸಭೆಯಲ್ಲಿ ಜಿಲ್ಲೆಯಲ್ಲಿ ಟಿಪ್ಪು ಜಯಂತಿಯನ್ನು ಆಚರಣೆ ಮಾಡುವದನ್ನು ವಿರೋಧಿಸಿದ್ದು, ಈ ಆಚರಣೆಯಿಂದ ಜಿಲ್ಲೆಯ ಕೋಮು ಸೌಹಾರ್ದತೆಗೆ ದಕ್ಕೆ ಉಂಟಾಗಲಿದೆ. ಟಿಪ್ಪು ಜಯಂತಿಯನ್ನು ಜಿಲ್ಲೆಯಲ್ಲಿ ಆಚರಣೆ ಮಾಡದಂತೆ ಜಿಲ್ಲಾಡಳಿತವನ್ನು ಒತ್ತಾಯಿಸಲು ನಿರ್ಣಯ ಕೈಗೊಳ್ಳಲಾಯಿತು.

ಸಭೆಯಲ್ಲಿ ಕೊಡವ ಮಾಪಿಳ್ಳೆ ಸಮುದಾಯದ ಪ್ರಮುಖ ಇಬ್ರಾಹಿಂ ಮಾತನಾಡಿ, ಇಸ್ಲಾಂ ಧರ್ಮದಲ್ಲಿ ಯಾವದೇ ಮೂರ್ತಿ ಪೂಜೆ, ವ್ಯಕ್ತಿ ಪೂಜೆ, ಜಯಂತಿ ಆಚರಿಸುವ ಪದ್ಧತಿ ಇಲ್ಲ. ಕೊಡವ ಮಾಪಿಳ್ಳೆ ಸಮುದಾಯವಾದ ನಾವು ಹಿಂದೆ ಕೊಡವರಾಗಿದ್ದೆವು. ಟಿಪ್ಪು ಸುಲ್ತಾನ್ ನಮ್ಮನ್ನು ಬಲಾತ್ಕಾರವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಿಸಿದ್ದಾನೆ. ಈ ಬಗ್ಗೆ ನಮಗೆ ಹಾಗೂ ನಮ್ಮ ಹಿರಿಯರಲ್ಲಿ ನೋವು ಹೆಪ್ಪುಗಟ್ಟಿದೆ. ಟಿಪ್ಪು ಜಯಂತಿಯನ್ನು ಕೊಡಗಿನ ಮೂಲ ನಿವಾಸಿಗಳಾದ ಕೊಡವ ಮಾಪಿಳ್ಳೆ ಸಮುದಾಯ ವಿರೋಧಿಸುತ್ತದೆ. ನಾವುಗಳು ಅಣ್ಣ-ತಮ್ಮಂದಿರ ರೀತಿಯಲ್ಲಿ ಜಿಲ್ಲೆಯಲ್ಲಿ ಬಾಳುತ್ತಿದ್ದೇವೆ. ಯಾವದೇ ಸಂದರ್ಭದಲ್ಲೂ ಕೊಡವರು ನಮ್ಮನ್ನು ಕೀಳಾಗಿ ಕಂಡಿಲ್ಲ. ಈ ಟಿಪ್ಪು ಜಯಂತಿ ಆಚರಣೆ ಬಂದ ನಂತರ ಜಿಲ್ಲೆಯಲ್ಲಿ ಪರಸ್ಪರ ದ್ವೇಷ ಭಾವನೆ ಉಂಟಾಗಿದೆ. ಕಳೆದ ಬಾರಿಯ ಆಚರಣೆಯಲ್ಲಿ ಅಮಾಯಕರು ಬಲಿಯಾಗಿದ್ದಾರೆ. ಹೊರಗಿನಿಂದ ಬಂದ ಕೆಲವರು ಟಿಪ್ಪು ಜಯಂತಿಗೆ ಬೆಂಬಲ ನೀಡುತ್ತಿದ್ದಾರೆಯೇ ಹೊರತು ಕೊಡವ ಮಾಪಿಳ್ಳೆ ಸಮುದಾಯ ಎಂದಿಗೂ ಟಿಪ್ಪು ಜಂಯತಿಗೆ ಬೆಂಬಲ ಸೂಚಿಸುವದಿಲ್ಲ ಎಂದು ಹೇಳಿದರು.

ವೀರಾಜಪೇಟೆ ಕ್ಷೇತ್ರ ಬಿ.ಜೆ.ಪಿ ಅಧ್ಯಕ್ಷ ಅರುಣ್ ಭೀಮಯ್ಯ ಮಾತನಾಡಿ, ಕೊಡಗಿನಲ್ಲಿ ಯಾವದೇ ಕಾರಣಕ್ಕೂ ಟಿಪ್ಪು ಜಯಂತಿ ಆಚರಣೆ ಮಾಡಕೂಡದು. ಇದರಿಂದ ಅಮಾಯಕರಿಗೆ ತೊಂದರೆಯಾಗಲಿದೆ. ಕಳೆದ ವರ್ಷ ಟಿಪ್ಪು ಜಯಂತಿ ಗಲಾಭೆಯಿಂದ ಕುಟ್ಟಪ್ಪ ಅವರು ಹತ್ಯೆಯಾದರು. ಆದರೂ ಈ ಸರಕಾರಕ್ಕೆ ಬುದ್ಧಿ ಬಂದಿಲ್ಲ. ಜನರ ಹಿತದೃಷ್ಟಿಯನ್ನು ಕಾಪಾಡುವ ನಿಟ್ಟಿನಲ್ಲಿ ಟಿಪ್ಪು ಜಯಂತಿ ಆಚರಣೆ ಬೇಡ ಎಂದರು.

ಜಿಲ್ಲಾ ರೈತ ಸಂಘದ ಪ್ರಮುಖ ಮಚ್ಚಮಾಡ ರಂಜಿ ಮಾತನಾಡಿ, ಟಿಪ್ಪು ಕೊಡಗಿನಲ್ಲಿ ಮಾಡಿದ ದೌರ್ಜನ್ಯ ಕೊಡಗಿಗೆ ಮಾತ್ರ ಗೊತ್ತಿದೆ. ಇಂದಿಗೂ ಆತನ ಕ್ರೌರ್ಯಕ್ಕೆ ತುತ್ತಾದ ಕೊಡವ ಜನಾಂಗ ಅಲ್ಪಸಂಖ್ಯಾತವಾಗಿದೆ. ಹಾಗೆಯೇ ಕೊಡವ ಜನಾಂಗವನ್ನು ಮತಾಂತರ ಮಾಡಿರುವದಕ್ಕೆ ಕೊಡವ ಮುಸ್ಲಿಮರು ಜೀವಂತ ಸಾಕ್ಷಿಯಾಗಿದ್ದಾರೆ ಎಂದು ಹೇಳಿದರು.

ಟಿ.ಶೆಟ್ಟಿಗೆರಿ ಬಿ.ಜೆ.ಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಕಟ್ಟೇರ ಈಶ್ವರ ಮಾತನಾಡಿ, ಕೊಡಗು, ಮಲಬಾರ್, ಮಂಗಳೂರುವಿನಲ್ಲಿ ಟಿಪ್ಪು ನಡೆಸಿದ ಹತ್ಯಾಕಾಂಡದ ರೀತಿಯಲ್ಲಿ ಮೇಲುಕೋಟೆಯಲ್ಲಿಯೂ ದೌರ್ಜನ್ಯ ನಡೆಸಿದ್ದಾನೆ. ಮೇಲುಕೋಟೆಯಲ್ಲಿ ದೀಪಾವಳಿ ಹಬ್ಬದ ಸಂದರ್ಭ 800 ಕುಟುಂಬಗಳನ್ನು ಹತ್ಯಾಕಾಂಡ ಮಾಡಿದ್ದಾನೆ. ಇದನ್ನು ನೆನೆಸಿಕೊಂಡು 225 ವರ್ಷಗಳು ಕಳೆದರೂ ಮೇಲುಕೋಟೆಯಲ್ಲಿ ದೀಪಾವಳಿ ಆಚರಣೆ ಮಾಡುತ್ತಿಲ್ಲ. ಹಾಗೆಯೇ ಜಿಲ್ಲೆಯ ದೇವಟ್ ಪರಂಬುವಿನಲ್ಲಿ ಕೊಡವ ಜನಾಂಗದ ಸುಮಾರು 80 ಸಾವಿರ ಜನರನ್ನು ಮೋಸದಿಂದ ಟಿಪ್ಪು ಹತ್ಯೆ ಮಾಡಿದ್ದಾನೆ. ಈ ಎಲ್ಲಾ ವಿಚಾರಗಳು ಇತಿಹಾಸದಲ್ಲಿ ದಾಖಲಾಗಿದ್ದು, ಸರಕಾರಕ್ಕೆ ಗೊತ್ತಿದೆ. ಹಿಂದೂ - ಮುಸ್ಲಿಮರ ಬಗ್ಗೆ ಸಂಘರ್ಷಕ್ಕೆ ಎಡೆ ಮಾಡಿ ಒಟ್ ಬ್ಯಾಂಕ್ ಲಾಭ ಪಡೆಯಲು ಟಿಪ್ಪು ಜಯಂತಿ ಆಚರಣೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಮುಂದಾಗಿದ್ದಾರೆ ಎಂದು ಟೀಕಿಸಿದರು.

ಈ ಸಂದರ್ಭ ಟಿ.ಶೆಟ್ಟಿಗೇರಿ ಕೊಡವ ಸಮಾಜದ ಅಧ್ಯಕ್ಷ ಕೋಟ್ರಮಾಡ ಅರುಣ್ ಅಪ್ಪಣ್ಣ, ಟಿ.ಶೆಟ್ಟಿಗೇರಿ ಮಾಜಿ ಸೈನಿಕರ ಸಂಘದ ಚೆಟ್ಟಂಡ ಕಾರ್ಯಪ್ಪ, ಧರ್ಮಸ್ಥಳ ಸಂಘದ ಅಧ್ಯಕ್ಷ ರಾಜು ಅಚ್ಚಪ್ಪ, ಟಿ.ಶೆಟ್ಟಿಗೇರಿ ಗ್ರಾ.ಪಂ ಅಧ್ಯಕ್ಷ, ಮಚ್ಚಮಾಡ ಸುಮಂತ್, ಟಿ.ಶೆಟ್ಟಿಗೇರಿ ಬಿ.ಜೆ.ಪಿ. ಸ್ಥಾನೀಯ ಸಮಿತಿ ಕಾರ್ಯದರ್ಶಿ ಮಾಣೀರ ಉಮೇಶ್, ಉಪಾಧ್ಯಕ್ಷ ಮಚ್ಚಮಾಡ ಶ್ಯಾಮ್, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ತಡಿಯಂಗಡ ಕರುಂಬಯ್ಯ, ಗ್ರಾ.ಪಂ, ಸದಸ್ಯರಾದ ಚೆಟ್ಟಂಗಡ ರಂಜಿ, ದಮಯಂತಿ, ಹರೀಶ್, ಚಂದ, ಹಿರಿಯರಾದ ಭೀಮಯ್ಯ, ಮಿಲನ್, ಮಿಥುನ್, ಪ್ರಜಾ, ತೀತಿರ ಸೋಮಣ್ಣ ಮತ್ತಿತರರು ಹಾಜರಿದ್ದರು.