ಮಡಿಕೇರಿ, ಆ. 6: ಕಣ್ಣಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎರವರ ಈಶ್ವರಿ ಅವರನ್ನು ದಿಗ್ಬಂಧನಗೊಳಿಸಿ ಜೀತದಾಳುವಿ ನಂತೆ ದುಡಿಸಿಕೊಂಡು ದೌರ್ಜನ್ಯ ಎಸಗಿದಂತೆ ಜಿಲ್ಲೆಯಾದ್ಯಂತ ಇದೇ ರೀತಿಯ ಅನೇಕ ಪ್ರಕರಣಗಳು ನಡೆಯುತ್ತಿದೆ ಎಂದು ಆರೋಪಿಸಿರುವ ಸಿಪಿಐಎಂ ಪಕ್ಷದ ಜಿಲ್ಲಾ ಘಟಕ ಆದಿವಾಸಿಗಳು ಸಂಘಟಿತ ಹೋರಾಟಕ್ಕೆ ಮುಂದಾಗಬೇಕೆಂದು ಕರೆ ನೀಡಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಜಿಲ್ಲಾ ಕಾರ್ಯದರ್ಶಿ ಡಾ. ದುರ್ಗಾ ಪ್ರಸಾದ್, ಈಶ್ವರಿ ಅವರ ಮೇಲಿನ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸಿದರು. ದುರ್ಬಲರಾಗಿರುವ ಬುಡಕಟ್ಟು ಜನರ ಮೇಲೆ ಯಾರೇ ಹಿಂಸೆ ನಡೆಸಿದರೂ ಅವರ ವಿರುದ್ಧ ಕಠಿಣ ಶಿಕ್ಷೆ ನೀಡುವ ಮೂಲಕ ಅಸಹಾಯಕರಿಗೆ ಅಭಯ ನೀಡುವ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟರು. ದಲಿತರ ಜಾಗ, ಸ್ಮಶಾನ, ದಲಿತರ ಅಭಿವೃದ್ಧಿಗಾಗಿ ಬಿಡುಗಡೆ ಯಾದ ಸರ್ಕಾರದ ಅನುದಾನ ವನ್ನು ಕಬಳಿಕೆ ಮಾಡುತ್ತಿರುವ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದೆ. ಇಂದಿಗೂ ಆದಿವಾಸಿಗಳ ಸ್ಥಿತಿ ಶೋಚನೀಯ ವಾಗಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಈಶ್ವರಿ ಅವರ ಮೇಲೆ ನಡೆದ ದಬ್ಬಾಳಿಕೆ ಪ್ರಕರಣದಂತೆ ಜಿಲ್ಲೆಯಲ್ಲಿ ಅಸಹಾಯಕರಾಗಿರುವ ಬುಡಕಟ್ಟು ಸಮುದಾಯಕ್ಕೆ ಬೆದರಿಕೆಗಳಿವೆ ಎಂದು ಡಾ. ದುರ್ಗಾಪ್ರಸಾದ್ ಕರೆ ನೀಡಿದರು.

ಆದಿವಾಸಿ ಕುಟುಂಬದ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಮೂಲಭೂತ ಸೌಲಭ್ಯಗಳಿಲ್ಲದೆ ಶ್ರೀಮಂತರ ಮನೆಗಳಲ್ಲಿ ಜೀತದಾಳು ವಿನಂತೆ ದುಡಿಯು ತ್ತಿದ್ದಾರೆ. ದುರ್ಬಲರ ಅಸಹಾಯಕ ಪರಿಸ್ಥಿತಿಯ ಲಾಭ ಪಡೆದು ಕೆಲವು ತೋಟದ ಮಾಲೀಕರು ಸಾಲ ನೀಡಿ ಜೀತದಾಳುಗಳಂತೆ ದುಡಿಸಿ ಕೊಳ್ಳುತ್ತಿದ್ದಾರೆ. ಗಿರಿಜನರ ಉದ್ದಾರಕ್ಕೆಂದು ಸರ್ಕಾರ ಬಿಡುಗಡೆ ಮಾಡುವ ಅನುದಾನ ಅರ್ಹ ಫಲಾನುಭವಿಗಳಿಗೆ ತಲಪದೇ ಇತರರ ಪಾಲಾಗುತ್ತಿದೆ. ಪಡಿತರ ಚೀಟಿಗಳನ್ನು ಮಾಲೀಕರೇ ಕಸಿದುಕೊಂಡು ಪಡಿತರ ಸಾಮಗ್ರಿಗಳ ಲಾಭವನ್ನು ಪಡೆಯು ತ್ತಿರುವ ಘಟನೆಗಳು ನಡೆಯುತ್ತಿವೆ. ಇದೆಲ್ಲವೂ ನಿಯಂತ್ರಣಕ್ಕೆ ಬರಬೇಕಾದರೆ ಆದಿವಾಸಿಗಳು ಸಂಘಟಿತ ಹೋರಾಟಕ್ಕೆ ಮುಂದಾಗ ಬೇಕು ಮತ್ತು ಈ ರೀತಿಯ ಹೋರಾಟಗಳಿಗೆ ಸಿಪಿಐಎಂ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಭರವಸೆ ನೀಡಿದರು.

ಪಕ್ಷದ ಪ್ರಮುಖ ಎ.ಸಿ. ಸಾಬು ಮಾತನಾಡಿ, ವೀರಾಜಪೇಟೆ ತಾಲೂಕಿನ ಹೆಗ್ಗಳ ಗ್ರಾಮದ ತೋರ ಎಂಬಲ್ಲಿ ಕುಡಿಯ ಜನಾಂಗದ ಮಹಿಳೆಯೊಬ್ಬಳು ಕಳೆÉದ 10 ದಿನಗಳಿಂದ ನಾಪತ್ತೆಯಾಗಿದ್ದು, ಹಲವು ಸಂಶಯಗಳಿಗೆ ಎಡೆಮಾಡಿ ಕೊಟ್ಟಿದೆ. ತಕ್ಷಣ ಈ ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸುವ ಮೂಲಕ ಮಹಿಳೆಯ ನಾಪತ್ತೆಗೆ ಕಾರಣಕರ್ತರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.