ಮಡಿಕೇರಿ, ಆ. 6: ಜಿಲ್ಲಾ ಕೇಂದ್ರ ಮಡಿಕೇರಿ ನಗರದಲ್ಲಿ 2016ನೇ ಜುಲೈಯಿಂದ ಸೀಮೆಎಣ್ಣೆ ಹಾಗೂ ಆಗಸ್ಟ್‍ನಿಂದ ಪಡಿತರ ಪದಾರ್ಥ ಮತ್ತು ಸೀಮೆಎಣ್ಣೆಯನ್ನು ಪಡೆಯಲು ಕೂಪನ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಅದೇ ರೀತಿ ಜಿಲ್ಲೆಯ ಸೋಮವಾರಪೇಟೆ ಪಟ್ಟಣ ಪ್ರದೇಶ, ಕುಶಾಲನಗರ ಪಟ್ಟಣ ಪ್ರದೇಶ ಮತ್ತು ವೀರಾಜಪೇಟೆ ತಾಲೂಕು ಪಟ್ಟಣ ಪ್ರದೇಶ ವ್ಯಾಪ್ತಿಯಲ್ಲಿ 2016ನೇ ಜುಲೈ ಮಾಹೆಯಿಂದ ಸೀಮೆಎಣ್ಣೆಯನ್ನು ಪಡೆಯಲು ಕೂಪನ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಆದ್ದರಿಂದ ಮುಂದಿನ ತಿಂಗಳುಗಳಲ್ಲಿ ಜಿಲ್ಲೆಯ ನಗರ, ಪಟ್ಟಣ, ಗ್ರಾಮಾಂತರ ಪ್ರದೇಶಗಳಲ್ಲಿ ಸೀಮೆಎಣ್ಣೆ ಮತ್ತು ಪಡಿತರ ಪದಾರ್ಥಗಳನ್ನು ಕೂಪನ್ ಪಡೆದೇ ವಿತರಿಸುವ ಯೋಜನೆ ಜಾರಿಗೆ ಬರಲಿದ್ದು, ಸಾರ್ವಜನಿಕರು, ಪಡಿತರ ಚೀಟಿದಾರರು ಹಾಗೂ ನ್ಯಾಯಬೆಲೆ ಅಂಗಡಿದಾರರು ಉತ್ತಮ ರೀತಿಯಲ್ಲಿ ಸಹಕರಿಸಲು ಕೋರಿದೆ.

ಕೂಪನ್ ಪಡೆಯುವ ವಿಧಾನ ಇಂತಿದೆ: ಪಡಿತರ ಚೀಟಿದಾರರು ಸಂಬಂಧಪಟ್ಟ ಫೋಟೋ ಬಯೋ ಕೇಂದ್ರದ ಮೂಲಕ ಬೆರಳಚ್ಚನ್ನು ನೀಡಿ ಆಹಾರ ಧಾನ್ಯ ಮತ್ತು ಸೀಮೆಎಣ್ಣೆ ಕೂಪನ್‍ನ್ನು ಪಡೆಯಬಹುದು.

ಎಸ್.ಎಂ.ಎಸ್. ಮೂಲಕ ಕೂಪನ್ ಪಡೆಯುವ ವಿಧಾನ: ಆಹಾರ ಧಾನ್ಯ ಪಡೆಯಲು ಪಡಿತರ ಚೀಟಿದಾರರು ತಮ್ಮ ಮೊಬೈಲ್ ಮೂಲಕ 161 ಸಂಖ್ಯೆಗೆ ಡಯಲ್ ಮಾಡಿ ಸಂಪರ್ಕವಾದ ನಂತರ ಸಂಖ್ಯೆ 4 ನ್ನು ಒತ್ತಬೇಕು. ಇದಕ್ಕೆ ಸಂಪರ್ಕ ಸಿಕ್ಕಿದ ನಂತರ ತಮ್ಮ ಆಧಾರ್ ಸಂಖ್ಯೆಯನ್ನು ಪೂರ್ತಿ ನಮೂದಿಸಬೇಕು. ನಮೂದಿಸಿದ ನಂತರ ಬಟನ್ ಒತ್ತಬೇಕು. ಆಗ ಕೂಪನ್ ಆಧಾರಿತ ಕೋಡ್ ಸಂಖ್ಯೆ ಬರುತ್ತದೆ. ಈ ಕೋಡ್ ಸಂಖ್ಯೆಯನ್ನು ಸಂಬಂಧಿಸಿದ ನ್ಯಾಯಬೆಲೆ ಅಂಗಡಿಯವರಿಗೆ ತೋರಿಸಿದಲ್ಲಿ ಆಹಾರ ಧಾನ್ಯ ಪಡೆಯಬಹುದಾಗಿದೆ. ಸೀಮೆಎಣ್ಣೆ ಕೂಪನ್ ಪಡೆಯಲು ಪಡಿತರ ಚೀಟಿದಾರರು ಆರ್‍ಸಿಕೆಇಆರ್‍ಒ ಎಂದು ಟೈಪ್ ಮಾಡಿ ಒಂದು ಸ್ಪೇಸ್ ಬಿಟ್ಟು ಪಡಿತರ ಚೀಟಿ ಸಂಖ್ಯೆ (ಉದಾ: ಆರ್‍ಸಿಕೆ ಇಆರ್‍ಒ ಎಂಡಿಕೆ14115263) ಈ ರೀತಿ ಟೈಪ್ ಮಾಡಿ ಇಲಾಖೆಯ ದೂರವಾಣಿ ಸಂಖ್ಯೆ 9731979899 ಕ್ಕೆ ಸಂದೇಶ ಕಳುಹಿಸಬೇಕು. ಆಗ ಕೂಪನ್ ಆಧಾರಿತ ಕೋಡ್ ಸಂಖ್ಯೆ ಬರುತ್ತದೆ. ಈ ಕೋಡ್ ಸಂಖ್ಯೆಯನ್ನು ಸಂಬಂಧಿಸಿದ ನ್ಯಾಯಬೆಲೆ ಅಂಗಡಿಯವರಿಗೆ ತೋರಿಸಿದಲ್ಲಿ ಸೀಮೆಎಣ್ಣೆ ಪಡೆಯಬಹುದಾಗಿದೆ.

ಷರತ್ತು: ಹಿಂದೆ ಆಧಾರ್ ಪಡೆಯಲು ಕೊಟ್ಟ ಮೊಬೈಲ್ ಸಂಖ್ಯೆ ಮತ್ತು ಈಗ ಇರುವ ಮೊಬೈಲ್ ಸಂಖ್ಯೆ ಒಂದೇ ಆಗಿರಬೇಕು. ಮೊಬೈಲ್ ನಂಬರ್ ಬದಲಾವಣೆ ಯಾಗಿದ್ದಲ್ಲಿ ಸಂಬಂಧಪಟ್ಟ ಆಧಾರ್ ಕೇಂದ್ರಕ್ಕೆ ಹೋಗಿ ಮೊಬೈಲ್ ಸಂಖ್ಯೆಯನ್ನು ನೋಂದಾವಣೆ ಮಾಡಿ ಕೊಳ್ಳಬೇಕು. ಈ ಯೋಜನೆ ಪಡಿತರ ಚೀಟಿದಾರರಿಗೆ ಪೂರ್ಣವಾಗಿ ಉಚಿತವಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ಚಂದ್ರಕಾಂತ್ ನಾಯಕ್ ತಿಳಿಸಿದ್ದಾರೆ.