ಕೂಡಿಗೆ, ಆ. 6: ಇಲ್ಲಿಗೆ ಸಮೀಪದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲುಗುಂದ ಗ್ರಾಮದಲ್ಲಿರುವ ಹಾರಂಗಿ ಅಣೆಕಟ್ಟೆಯ ಮುಂಭಾಗದಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡ ಬೃಂದಾವನದ ವೀಕ್ಷಣೆಗೆ ಕಳೆದ ಒಂದು ವಾರದಿಂದಲೂ ಪ್ರವಾಸಿಗರ ದಂಡು ಆಗಮಿಸುತ್ತಿದೆ. ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದರೂ ಹಾರಂಗಿ ಅಣೆಕಟ್ಟೆಯು ಭರ್ತಿಯಾದ ಹಿನ್ನೆಲೆಯಲ್ಲಿ ಹಾರಂಗಿ ಅಣೆಕಟ್ಟೆಯ ನಾಲ್ಕು ಮುಖ್ಯ ಧ್ವಾರಗಳ ಮೂಲಕ ಹೆಚ್ಚುವರಿ ನೀರನ್ನು ಹೊಳೆಗೆ ಹರಿಬಿಡುತ್ತಿರುವ ದೃಶ್ಯ ನೋಡುಗರನ್ನು ಆಕರ್ಷಿಸುತ್ತಿದೆ. ಇದರ ವೀಕ್ಷಣೆಗೆ ಜಿಲ್ಲೆ ಹಾಗೂ ಹೊರ ಜಿಲ್ಲೆಯ ಸಾವಿರಾರು ಪ್ರವಾಸಿಗರು ದಿನಂಪ್ರತಿ ಬರುತ್ತಿದ್ದಾರೆ. ಅಲ್ಲದೆ, ಕಳೆದ ವಾರ ಉದ್ಘಾಟನೆಗೊಂಡ ಬೃಂದಾವನ ಸಾರ್ವಜನಿಕರ ವೀಕ್ಷಣೆಗೆ ಉಚಿತ ಪ್ರವೇಶವಾಗಿರುವದರಿಂದ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಹೊರ ರಾಜ್ಯಗಳಿಂದ ಆಗಮಿಸಿದ ಪ್ರವಾಸಿಗರು ಕಳೆದ 2 ವರ್ಷಗಳ ಹಿಂದೆ ಈ ಪ್ರವಾಸಿ ಸ್ಥಳಕ್ಕೆ ಬಂದಾಗ ಹಾರಂಗಿ ಅಣೆಕಟ್ಟೆಯ ಮುಂಬಾಗಿಲಿನಲ್ಲಿ ನೋಡಿ ತೆರಳುವಂತಾಗಿತ್ತು. ಇದೀಗ ಇಲಾಖೆಯವರು ಹಾಗೂ ಜನಪ್ರತಿನಿಧಿಗಳ ಪ್ರಯತ್ನದಿಂದ ಪ್ರವಾಸಿಗರಿಗೆ ಬೃಂದಾವನದ ಸೊಗಡು ಹಾಗೂ ಕಾರಂಜಿ ವೀಕ್ಷಣೆಯ ಅವಕಾಶವಾಗಿದ್ದು, ಪ್ರವಾಸಿಗರ ದಂಡೆ ಹರಿದು ಬರುತ್ತಿದೆ.