ಮಡಿಕೇರಿ, ಆ. 19: ವಿಶ್ವ ಛಾಯಾಚಿತ್ರ ಗ್ರಾಹಕರ ದಿನಾಚರಣೆ ಯನ್ನು ಮಡಿಕೇರಿ ನಗರದಲ್ಲಿ ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಆಶ್ರಯದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಇದೇ ಸಂದರ್ಭ ಮುಂಗಾರು ಮಳೆ ಬದುಕಿನ ಚಿತ್ರಣ ಛಾಯಾಚಿತ್ರ ಪ್ರದರ್ಶನ ಹಾಗೂ ಪ್ರಶಸ್ತಿ ಪ್ರಧಾನ ಮಾಡಲಾಯಿತು. ವಿಶ್ವ ವಿಖ್ಯಾತ ಛಾಯಾಗ್ರಾಹಕ ಜೋಡಿಯಾದ ಕೃಪಾಕರ- ಸೇನಾನಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಛಾಯಾಗ್ರಾಹಕರಿಗೆ ಹಿತನುಡಿ ಯಾಡಿದರು.

ನಗರದ ವಾರ್ತಾ ಭವನದ ಹತ್ತಿರದ ಸರ್ಕಾರಿ ತರಬೇತಿ ಕೇಂದ್ರದಲ್ಲಿ ನಡೆದ ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಪ್ರೆಸ್ ಕ್ಲಬ್ ಮಾಜಿ ಅಧ್ಯಕ್ಷ ಹೆಚ್.ಟಿ. ಅನಿಲ್ ವೇದಿಕೆಯಲ್ಲಿ ಆಸೀನರಾದ ಗಣ್ಯರ ಛಾಯಾಚಿತ್ರ ಕ್ಲಿಕ್ಕಿಸುವ ಮೂಲಕ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಛಾಯಾಗ್ರಾಹಕರಿಗೆ ದೂರದೃಷ್ಟಿತ್ವ ಹಾಗೂ ಕುಶಲತೆಯ ಅಗತ್ಯವಿದೆ. ಛಾಯಾಗ್ರಾಹಕರಿಗೆ ಇದೀಗ ಸವಾಲು ಎದುರಾಗಿದೆ. ಸಾಮಾನ್ಯ ಜನತೆ ಕೂಡ ಮೊಬೈಲ್ ಕ್ಯಾಮರಾ ಮೂಲಕ ಸ್ಪರ್ಧೆಯೊಡ್ಡುವಂತಾಗಿದೆ. ಛಾಯಾ ಗ್ರಾಹಕರು ಕ್ಯಾಮರಾ ಕಣ್ಣು ಮಾತ್ರವಲ್ಲ, ಸಮಾಜದ ಕಣ್ಣು ಕೂಡ ಆಗಿದ್ದಾರೆ. ಒಂದು ಚಿತ್ರಕ್ಕೆ ಜೀವ ತುಂಬುವವರು ಛಾಯಾಗ್ರಾಹಕರು. ಪತ್ರಕರ್ತರು ಎಷ್ಟೇ ಸುದ್ದಿ ಬರೆದರೂ ಅದಕ್ಕೆ ಒಂದು ಛಾಯಾ ಚಿತ್ರವಿದ್ದರೆ ಸುದ್ದಿ ಸುಂದರವಾಗಿ ಮೂಡಿ ಬರುತ್ತದೆ. ಸಮಾಜದಲ್ಲಿ ಛಾಯಾಚಿತ್ರ ಗ್ರಾಹಕರಿಗೆ ಜವಾಬ್ದಾರಿಯುತ ಸ್ಥಾನವಿದೆ ಎಂದು ಹೇಳಿದರು.

‘ಮುಂಗಾರು ಮಳೆ ಬದುಕಿನ ಚಿತ್ರಣ’ ಛಾಯಾಚಿತ್ರವನ್ನು ವೀಕ್ಷಿಸಿದ ಬಳಿಕ ಪ್ರಖ್ಯಾತ ವನ್ಯಜೀವಿ ಛಾಯಾಗ್ರಾಹಕ ಕೃಪಾಕರ ಮಾತನಾಡಿ, ಫೋಟೋ ಜರ್ನಲಿಸ್ಟ್ ವ್ಯಾಪ್ತಿ ದೊಡ್ಡದಿದೆ. ನಿಜವಾದ ಫೋಟೋ ಜರ್ನಲಿಸ್ಟ್ ಕಂಡುಬರುತ್ತಿಲ್ಲ ಎಂದು ವಿಷಾದಿಸಿದ ಅವರು ಸುದ್ದಿಗೆ ಸಂಬಂಧಿಸಿದ ಫೋಟೋ ಮಾತ್ರ ಕಂಡುಬರುತ್ತಿದೆ. ಛಾಯಾಗ್ರಾಹಕರಿಗೆ ಛಾಯಾಚಿತ್ರ ತೆಗೆಯಲು ತುಡಿತ ಹಾಗೂ ಆಸಕ್ತಿ ಇರಬೇಕು. ಕೆಲಸದ ಬಗ್ಗೆ ಬದ್ಧತೆ

(ಮೊದಲ ಪುಟದಿಂದ) ಅಗತ್ಯ ಎಂದು ಹೇಳಿದರು. ಮತ್ತೋರ್ವ ವನ್ಯಜೀವಿ ಛಾಯಾಗ್ರಾಹಕ ಸೇನಾನಿ ಮಾತನಾಡಿ, ಫೋಟೋ ಜರ್ನಲಿಸ್ಟ್‍ಗೂ ನ್ಯೂಸ್ ಜರ್ನಲಿಸ್ಟ್‍ಗೂ ವ್ಯತ್ಯಾಸವಿದೆ. ವೀಡಿಯೋ ಚಿತ್ರಣ ತೆಗೆಯಲು ಕೌಶಲ್ಯತೆಯ ಅಗತ್ಯವಿದೆ. ಛಾಯಾಚಿತ್ರ ಚಿತ್ರೀಕರಣ ಮಾಡಿಕೊಳ್ಳುವ ಮೊದಲು ಯೋಚನೆ ಮಾಡಿ ನಂತರ ಚಿತ್ರೀಕರಣ ಮಾಡಿಕೊಳ್ಳಬೇಕು. ಕಥೆಯ ಮೂಲಕ ವೀಡಿಯೋ ಚಿತ್ರೀಕರಣ ಮಾಡುವ ಅವಶ್ಯಕತೆಯಿದೆ. ತಮ್ಮ ಕೆಲಸದ ಬಗ್ಗೆ ಶ್ರದ್ಧೆ ಅಗತ್ಯವಿದೆ ಎಂದು ಹೇಳಿದರು.

ವಿಜಯ ಕರ್ನಾಟಕ ಮೈಸೂರು ಆವೃತ್ತಿಯ ಹಿರಿಯ ಛಾಯಾಗ್ರಾಹಕ ನಾಗೇಶ್ ಪಾಣತ್ತಲೆ ಮಾತನಾಡಿ, ಛಾಯಾಗ್ರಾಹಕರಲ್ಲಿ ಸೃಜನಶೀಲತೆ ಹಾಗೂ ಉತ್ತಮ ನಡವಳಿಕೆ ಇರಬೇಕು. ಛಾಯಾಗ್ರಾಹಕರಿಗೆ ನಿತ್ಯವೂ ಛಾಯಾಚಿತ್ರ ಗ್ರಾಹಕ ದಿನವಾಗಿದೆ. ಉತ್ತಮ ಛಾಯಾಚಿತ್ರಗಳು ಸುದ್ದಿ ಮಾಧ್ಯಮಗಳಿಗೆ ದೊರೆತಲ್ಲಿ ಅಂದು ಛಾಯಾಗ್ರಾಹಕನನ್ನು ಆತನ ಸುದ್ದಿ ವಾಹಿನಿಯ ಪ್ರಮುಖರಿಂದ ಶಹಭಾಷ್‍ಗಿರಿ ದೊರೆಯುತ್ತದೆ ಛಾಯಾಗ್ರಾಹಕರಲ್ಲಿ ಶಿಸ್ತು ಮುಖ್ಯ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಛಾಯಾಗ್ರಾಹಕರು ಚಿತ್ರಕ್ಕೆ ಜೀವ ತುಂಬಬೇಕು. ಕ್ರಿಯಾಶೀಲತೆಯಿಂದ ಛಾಯಾಚಿತ್ರ ತೆಗೆಯುವ ಸಂದರ್ಭವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು. ಛಾಯಾಗ್ರಾಹಕ ಮಂಜು ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಮಾರಂಭದಲ್ಲಿ ಶಕ್ತಿ ದಿನಪತ್ರಿಕೆಯ ಛಾಯಾಗ್ರಾಹಕ ಹೆಚ್.ಎನ್. ಲಕ್ಷ್ಮೀಶ್ ಹಾಗೂ ಪ್ರಜಾ ಟಿವಿಯ ಛಾಯಾಗ್ರಾಹಕ ಜೀವನ್ ಪಾಲಕ್ಕಾಡ್ ಅವರು ಪ್ರದರ್ಶಿಸಿದ ಛಾಯಾ ಚಿತ್ರಕ್ಕೆ ಅತ್ಯುತ್ತಮ ಛಾಯಾ ಗ್ರಾºಕ ಪ್ರಶಸ್ತಿ ನೀಡಿ ಗೌರವಿಸಿದರು. ಇದೇ ಸಂದರ್ಭ ಹಿರಿಯ ಛಾಯಾಗ್ರಾಹಕ ನಾಗೇಶ್ ಪಾಣತ್ತಲೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕನ್ನಡ ಪ್ರಭ ಪತ್ರಿಕೆಯ ವರದಿಗಾರ ಹಾಗೂ ಛಾಯಾಗ್ರಾಹಕ ವಿಘ್ನೇಶ್ ಭೂತನಕಾಡು ಕಾರ್ಯಕ್ರಮ ನಿರೂಪಿಸಿದರೆ, ಸಮಯ ಚಾನೆಲ್ ಛಾಯಾಗ್ರಾಹಕ ಮನೋಜ್ ಪ್ರಾರ್ಥಿಸಿ, ಪ್ರಜಾವಾಣಿ ಛಾಯಾಗ್ರಾಹಕ ರಂಗಸ್ವಾಮಿ ಸ್ವಾಗತಿಸಿ, ಟಿವಿ9 ಚಾನೆಲ್‍ನ ಛಾಯಾಗ್ರಾಹಕ ನವೀನ್ ವಂದಿಸಿದರು.