ವೀರಾಜಪೇಟೆ, ಆ. 19: ಇಂದಿಗೂ ಸ್ವಾತಂತ್ರ್ಯ ಭಾರತದಲ್ಲಿ ಜಾತಿ, ಧರ್ಮಗಳ ನಿರ್ಬಂಧ ವಿಧಿಸಿ, ಮಹಿಳೆಯರು ಹಾಗೂ ಅಬಲೆಯರ ಹಕ್ಕನ್ನು ಕಿತ್ತುಕೊಳ್ಳು ತ್ತಿರುವದು ಖಂಡನಾರ್ಹ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳ ಮಾನಸ ಹೇಳಿದರು. ಸಮೀಪದ ಕಣ್ಣಂಗಾಲ ಗ್ರಾಮ ಪಂಚಾಯಿತಿಯಲ್ಲಿ ನಡೆದ 70ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ಇಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷೆಗೆ ದಿಗ್ಬಂಧನ ವಿಧಿಸಿ, ಕಳೆದ ಸಾಲಿನ ಸ್ವಾತಂತ್ರ್ಯೋತ್ಸವದಲ್ಲಿ ಭಾಗವಹಿಸಲು ಬಿಡದಿರುವ ಬಗ್ಗೆ ಸವಿಸ್ತಾರವಾದ ವರದಿಯನ್ನು ಮಾಧ್ಯಮಗಳಿಂದ ತಿಳಿದು ಕೊಂಡಿದ್ದೇನೆ. ಪಂಚಾಯಿತಿ ಅಧ್ಯಕ್ಷೆ ಈಶ್ವರಿ ಅವರೊಂದಿಗೆ ಈ ಬಾರಿಯ ಸ್ವಾತಂತ್ರ್ಯೋತ್ಸವದಲ್ಲಿ ಭಾಗವಹಿಸುತ್ತಿ ರುವದು ಸಂತಸ ತಂದಿದೆ. ಅಧ್ಯಕ್ಷೆ ನೋವಿಗೆ ಅಧಿಕಾರಿಗಳು ಸ್ಪಂದಿಸಿ, ಕ್ರಮ ಕೈಗೊಂಡಿದ್ದಾರೆ. ಜೊತೆಗೆ ಗ್ರಾಮಸ್ಥರು ಬೆಂಬಲವಾಗಿ ನಿಂತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಇಂತಹ ಘಟನೆಗಳು ನಡೆದಾಗ ತಕ್ಷಣ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಪ್ರಕರಣಗಳು ಅತಿರೇಕಕ್ಕೆ ಹೋಗುತ್ತದೆ ಎಂದರು. ಇಂದು ಮಾಧ್ಯಮಗಳು ಅತ್ಯಂತ ಕ್ರೀಯಾಶೀಲವಾಗಿದೆ. ಆದರೂ ಜಡ್ಡು ಗಟ್ಟಿದ ವ್ಯವಸ್ಥೆಯಲ್ಲಿ ಅಧಿಕಾರಿಗಳು ನಿರೀಕ್ಷಿತ ರೀತಿಯಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ನಾವು ತತ್ವ ಸಿದ್ಧಾಂತ ಪಾಲಿಸದೆ ಹೋದಾಗ ಕೆಲವು ಕಹಿ ಘಟನೆಗಳಿಗೆ ಸಾಕ್ಷಿಯಾಗ ಬೇಕಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಣ್ಣಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಈಶ್ವರಿ ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭ ಕೋರಿದರು. ಶಿಕ್ಷಕ ಮಂಜುನಾಥ್ ಸ್ವಾತಂತ್ರ್ಯೋತ್ಸವದ ಕುರಿತು ಮಾತನಾಡಿದರು. ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಕಿರಣ್ ಫಡೆÉ್ನಕರ್, ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಾರದ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವಿ.ಎನ್. ಮನೋಜ್, ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು.

ವಿವಿಧ ಸ್ಪರ್ಧೆಯಲ್ಲಿ ವಿಜೇತ ರಾದ ಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.