ಆಲೂರು-ಸಿದ್ದಾಪುರ, ಆ. 6: ಸಮೀಪದ ಆಲೂರು-ಸಿದ್ದಾಪುರ ಗ್ರಾ.ಪಂ.ಯ 2016-17ನೇ ಸಾಲಿನ ಗ್ರಾಮಸಭೆ ಗ್ರಾ.ಪಂ.ಅಧ್ಯಕ್ಷೆ ವೀಣಾ ರಮೇಶ್ ಅಧ್ಯಕ್ಷತೆಯಲ್ಲಿ ಮಾಲಂಬಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಗ್ರಾಮಸ್ಥರು ಕೆಲವು ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಂದಾಯ ಇಲಾಖೆಯ ಬಗ್ಗೆ ಸಭೆಯಲ್ಲಿ ಕಂದಾಯ ಅಧಿಕಾರಿ ಯೊಬ್ಬರು ಮಾಹಿತಿ ನೀಡುತ್ತಿದ್ದಾಗ ಮಧ್ಯ ಪ್ರವೇಶಿಸಿದ ಗ್ರಾಮಸ್ಥ ಮಹಾಂತಪ್ಪ ಕಂದಾಯ ಇಲಾಖೆಯಿಂದ ಬಡವರು ಮತ್ತು ಮಹಿಳಾ ಕೂಲಿ ಕಾರ್ಮಿಕರಿಗೆ ನೀಡುತ್ತಿರುವ ಹೆರಿಗೆ ಭತ್ಯೆ ಮೊತ್ತ ತೀರಾ ಕಮ್ಮಿಯಾಗಿದೆ. ಅದೇ ಮಹಿಳೆ ಸರಕಾರಿ ಉದ್ಯೋಗಿಯಾಗಿದ್ದು ಆಕೆಗೆ ಹೆರಿಗೆ ಸಂದರ್ಭದಲ್ಲೊಂದು ತಿಂಗಳು ರಜೆ ಹಾಕಿದ್ದರೂ ಸರಕಾರ ಹೆರಿಗೆ ಭತ್ಯೆಯ ಜೊತೆಯಲ್ಲಿ ಮಾಸಿಕ ವೇತನವನ್ನು ನೀಡುತ್ತಿದೆ. ಆದರೆ ಕೂಲಿ ಕಾರ್ಮಿಕ ಮಹಿಳೆಯರಿಗೆ ಸರಕಾರ ಹೆರಿಗೆ ಭತ್ಯೆ ಎಂದು ಅಲ್ಪ ಮೊತ್ತವನ್ನು ನೀಡಿ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ದರು. ಆಲೂರು-ಸಿದ್ದಾಪುರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪ್ರತಿದಿನ ನೂರಾರು ರೋಗಿಗಳು ಬರುತ್ತಾರೆ. ಸುತ್ತಮುತ್ತಲಿನ ಹಾಗೂ ನೆರೆಯ ಹಾಸನ ಜಿಲ್ಲೆಯ ಭಾಗದಿಂದಲೂ ರೋಗಿಗಳು ಬರುತ್ತಾರೆ. ಆದರೆ ಈ ಆಸ್ಪತ್ರೆಗೆ ಆ್ಯಂಬ್ಯುಲೆನ್ಸ್ ವ್ಯವಸ್ಥೆ ಇಲ್ಲ. ಈ ಬಗ್ಗೆ ಹಲವಾರು ಬಾರಿ ಗ್ರಾಮಸ್ಥರು ಗ್ರಾಮಸಭೆಗಳಲ್ಲಿ ಪ್ರಸ್ತಾಪಿಸುತ್ತಿದ್ದರೂ ಪ್ರಯೋಜನವಾಗುತ್ತಿಲ್ಲ ಎಂದು ಮಾಲಂಬಿ ಗ್ರಾಮದ ಹೆಚ್.ಎಸ್. ಪ್ರೇಮ್‍ನಾಥ್ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ. ಸದಸ್ಯೆ ಸರೋಜಮ್ಮ, ಈ ಬಗ್ಗೆ ಜಿ.ಪಂ. ಸಭೆಯಲ್ಲಿ ಪ್ರಸ್ತಾಪಿಸಲಾಗುವದೆಂದರು. ಮಾಲಂಬಿ ಸಮಿಪದ ಕೂಡುರಸ್ತೆಗೆ ಸದರಿ ಗ್ರಾ.ಪಂ.ಯಿಂದ ಕುಡಿಯುವ ನೀರು ಸರಬರಾಜು ಮಾಡಲು ವ್ಯವಸ್ಥೆ ಮಾಡಿದ್ದರೂ ಇಲ್ಲಿಗೆ ನೀರು ಸರಬರಾಜಾಗುತ್ತಿಲ್ಲ. ಇಲ್ಲಿನ ಜನರು ಕೊಳವೆ ಬಾವಿ ಮತ್ತು ಸ್ವಂತ ಕೊಳವೆ ಬಾವಿ ಮೂಲಕ ಕುಡಿಯುವ ನೀರನ್ನು ಉಪಯೋಗಿಸುವಂತಾಗಿದೆ ಎಂದು ಮಾಲಂಬಿಯ ಪಿ.ಎನ್. ಗಂಗಾಧರ್ ಪ್ರಸ್ತಾಪಿಸಿದಾಗ ಈ ಕುರಿತು ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಈ ಸಮಸ್ಯೆಗೆ ಉತ್ತರಿಸಿದ ಜಿ.ಪಂ. ಅಭಿಯಂತರ ವೀರೇಂದ್ರ, ಕೂಡುರಸ್ತೆ ಗ್ರಾಮದಲ್ಲಿ ಪ್ರತ್ಯೇಕ ಕೊಳವೆ ಬಾವಿ ತೆರೆದು ಅದಕ್ಕೆ ಮೋಟಾರು ಅಳವಡಿಸಿ ಕುಡಿಯುವ ನೀರನ್ನು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗುದೆಂದರು. ಸದರಿ ಗ್ರಾ.ಪಂ. ವ್ಯಾಪ್ತಿಯ ಮಾಲಂಬಿ, ಕಣವೆ, ಬಸವನಹಳ್ಳಿ, ಹಿತ್ಲುಗದ್ದೆ ಗ್ರಾಮಗಳಲ್ಲಿ ಕಾಡಾನೆ ಹಾವಳಿ ಜಾಸ್ತಿಯಾಗಿದೆ. ಅರಣ್ಯ ಇಲಾಖೆ ಯವರು ಇಂತಹ ಸಂದರ್ಭದಲ್ಲಿ ಕಾಡಾನೆಗಳನ್ನು ಮತ್ತೆ ಕಾಡಿಗೆ ಓಡಿಸುವ ಪದ್ಧತಿಯನ್ನು ಸ್ಥಗಿತ ಗೊಳಿಸಿ ಕಾಡಾನೆಗಳ ಹಾವಳಿ ನಿಯಂತ್ರಿಸಲು ಶಾಶ್ವತ ಪರಿಹಾರವನ್ನು ಒದಗಿಸಿ ಕೊಡಬೇಕು. ಈ ಬಗ್ಗೆ ಹಲವಾರು ಬಾರಿ ಗ್ರಾಮಸ್ಥರು ಮತ್ತು ರೈತರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಇನ್ನಾದರೂ ಅರಣ್ಯ ಇಲಾಖೆಯವರು ಈ ಕುರಿತು ಕ್ರಮ ತೆಗೆದುಕೊಳ್ಳದಿದ್ದಲ್ಲಿ ರೈತರು ಅರಣ್ಯ ಇಲಾಖೆ ಕಚೇರಿ ಎದುರು ಧರಣಿ ನಡೆಸುತ್ತೇವೆ ಎಂದು ಹೆಚ್.ಎಸ್. ಪ್ರೇಮ್‍ನಾಥ್ ಸಭೆಯ ಮುಂದಿಟ್ಟರು. ಇದಕ್ಕೆ ಹಾಲಿ ಗ್ರಾ.ಪಂ. ಸದಸ್ಯರು ಸೇರಿದಂತೆ ಗ್ರಾಮಸ್ಥರೆಲ್ಲರೂ ಧ್ವನಿಗೂಡಿಸಿದರು.

ಆಲೂರು-ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿ ತುಂಬಾ ದೊಡ್ಡದಾಗಿರುವ ದರಿಂದ ಇಲ್ಲಿ ಸಾಕಷ್ಟು ಪೊಲೀಸ್ ಇಲಾಖೆಗೆ ಸಂಬಂಧ ಪಟ್ಟಂತಹ ಸಮಸ್ಯೆಗಳಿರುತ್ತದೆ. ಈ ಕಾರಣದಿಂದ ಪೊಲೀಸ್ ಇಲಾಖೆಯಿಂದ ಇಲ್ಲಿ ನಾಗರಿಕ ಸಂಪರ್ಕ ಸಭೆಗಳನ್ನು ನಡೆಸಬೇಕು ಹಾಗೂ ಆಲೂರು-ಸಿದ್ದಾಪುರ ಜಂಕ್ಷನ್‍ನಲ್ಲಿ ವಾಹನ ಅಪಘಾತಗಳು ಹೆಚ್ಚಾಗುತ್ತಿದೆ. ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಆಲೂರು-ಸಿದ್ದಾಪುರದ ಜಯಕುಮಾರ್ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶನಿವಾರಸಂತೆ ಠಾಣಾಧಿಕಾರಿ ಮರಿಸ್ವಾಮಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವದು. ಅಪಘಾತಗ ಳಾಗುತ್ತಿರುವ ಸ್ಥಳದಲ್ಲಿ ದಾನಿಗಳ ಸಹಾಯದಿಂದ ಬ್ಯಾರಿಕೇಡ್‍ಗಳನ್ನು ಅಳವಡಿಸಲಾಗುವದೆಂದರು.

ಸಭೆಯಲ್ಲಿ ಪಡಿತರ ಚೀಟಿ, ವಿದ್ಯುತ್ ಸಮಸ್ಯೆ, ಬಡವರಿಗೆ ಸರಕಾರ ನೀಡುವ ವಿವಿಧ ಯೋಜನೆಯ ವಸತಿ ಸೌಲಭ್ಯಗಳಲ್ಲಿ ಸರಕಾರದ ನಿಯಮಗಳು ಹಾಗೂ ಅದರ ಬಾದಕಗಳ ಬಗ್ಗೆ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಸಭೆಯಲ್ಲಿ ಮಾತನಾಡಿದ ಜಿ.ಪಂ. ಸದಸ್ಯೆ ಸರೋಜಮ್ಮ, ಜಿ.ಪಂ.ಯಿಂದ ಕ್ಷೇತ್ರಕ್ಕೆ ಇದುವರೆಗೆ ರೂ. 8.77 ಲಕ್ಷ ಅನುದಾನ ಬಂದಿದೆ. ಈ ಅನುದಾನ ದಲ್ಲಿ ಆಲೂರು-ಸಿದ್ದಾಪುರ ಮತ್ತು ದುಂಡಳ್ಳಿ ಗ್ರಾ.ಪಂ. ವ್ಯಾಪ್ತಿಗಳಲ್ಲಿ ರಸ್ತೆ ಅಭಿವೃದ್ಧಿ, ಚರಂಡಿ ನಿರ್ಮಾಣ ಕಾಮಗಾರಿಗಾಗಿ ವಿನಿಯೋಗಿಸ ಲಾಗಿದೆ. ಇನ್ನು ಮುಂದೆ ಬರುವ ಅನುದಾನದಲ್ಲಿ ಅಗತ್ಯತೆ ಇರುವ ಗ್ರಾಮಗಳ ಅಭಿವೃದ್ಧಿಗಾಗಿ ಆದ್ಯತೆ ನೀಡಲಾಗುವದೆಂದರು. ಸಭೆಯಲ್ಲಿ ತಾ.ಪಂ. ಅಧ್ಯಕ್ಷೆ ಪುಷ್ಪ ರಾಜೇಶ್, ತಾ.ಪಂ. ಸದಸ್ಯೆ ಲೀಲಾವತಿ ಮಹೇಶ್, ನೋಡಲ್ ಅಧಿಕಾರಿ ಭಾನುಪ್ರಕಾಶ್ ಮಾತನಾಡಿದರು. ವಿವಿಧ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಗ್ರಾ.ಪಂ. ಉಪಾಧ್ಯಕ್ಷೆ ಸತ್ಯ, ಗ್ರಾ.ಪಂ. ಪಿಡಿಓ ಚಂದ್ರೇಗೌಡ ಗ್ರಾ.ಪಂ. ಸದಸ್ಯರುಗಳು ಹಾಜರಿದ್ದರು.

- ದಿನೇಶ್ ಮಾಲಂಬಿ.