ಆಲೂರು-ಸಿದ್ದಾಪುರ, ಆ. 6: ಸಮೀಪದ ಹಂಡ್ಲಿ ಗ್ರಾ.ಪಂ.ಯ 2016-17ನೇ ಸಾಲಿನ ಗ್ರಾಮಸಭೆ ಗ್ರಾ.ಪಂ. ಅಧ್ಯಕ್ಷ ಹೆಚ್.ಎನ್. ಸಂದೀಪ್ ಅಧ್ಯಕ್ಷತೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯಿತು.ಸಭೆಯಲ್ಲಿ ವಿವಿಧ ಕಾಮಗಾರಿಗಳ ಬಗ್ಗೆ ಸರಕಾರದ ಕಾರ್ಯಕ್ರಮಗಳ ಬಗ್ಗೆ ಸಭೆಯಲ್ಲಿ ಪಾಲ್ಗೊಂಡಿದ್ದ ಗ್ರಾಮಸ್ಥರು ಚರ್ಚಿಸಿದರು. 13ನೇ ಹಣಕಾಸು ಅನುದಾನದಲ್ಲಿ 2015-16ನೇ ಸಾಲಿನಲ್ಲಿ ಗ್ರಾ.ಪಂ.ಯಿಂದ ನಡೆದ ಕಾಮಗಾರಿಗಳ ವಿವರವನ್ನು ಗ್ರಾ.ಪಂ. ಪಿಡಿಓ ಸಭೆಯ ಮುಂದೆ ಓದಿದಾಗ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರು 13ನೇ ಹಣಕಾಸು ಅನುದಾನದಲ್ಲಿ ಗ್ರಾ.ಪಂ.ಗೆ ಎಷ್ಟು ಅನುದಾನ ಬಂದಿದೆ, ಇದರಲ್ಲಿ ಎಷ್ಟು ಕಾಮಗಾರಿ ನಡೆದಿದೆ, ಬಾಕಿಯಾಗಿ ರುವ ಕಾಮಗಾರಿ ಯಾವದು ಇವುಗಳ ವಿವರವನ್ನು ನೀಡಬೇಕೆಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಗ್ರಾ.ಪಂ. ಅಧ್ಯಕ್ಷ ಸಂದೀಪ್ 2015ನೇ ಸಾಲಿನಲ್ಲಿ ಗ್ರಾ.ಪಂ.ಗೆ ರೂ. 8 ಲಕ್ಷ ಗ್ರಾ.ಪಂ. ಅನುದಾನಕ್ಕೆ ಬಂದಿದೆ. ಬಂದಿರುವ ಅನುದಾನದಲ್ಲಿ ಸಮರ್ಪಕವಾಗಿ ಕಾಮಗಾರಿ ಕಾರ್ಯವನ್ನು ಮಾಡಿ ಮುಗಿಸಲಾಗಿದೆ. ಮತ್ತೆ ಗ್ರಾ.ಪಂ. ಅನುದಾನ ಬಂದ ಮೇಲೆ ಬಾಕಿಯಾಗಿರುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವದೆಂದರು. ಕೃಷಿ ಸಂಪರ್ಕಧಿಕಾರಿ ಪಲ್ಲವಿ ಸಭೆಯಲ್ಲಿ ವಿವರಣೆ ನೀಡುತ್ತಿದ್ದಾಗ ಮಧ್ಯೆ ಪ್ರವೇಶಿಸಿದ ಗ್ರಾಮಸ್ಥರು ಕೃಷಿ ಇಲಾಖೆ ರೈತ ಫಲಾನುಭವಿಗಳಿಗೆ ಶೇ. 50 ರಷ್ಟು ಸಬ್ಸಿಡಿಯಲ್ಲಿ ನೀಡುವ ಪವರ್ ಟಿಲ್ಲರ್, ಸ್ಪ್ರಿಂಕ್ಲರ್ ಯಂತ್ರ ಮುಂತಾದ ಕೃಷಿ ಯಂತ್ರೋಪಕರಣ ಗಳಿಗೆ ಶೇ. 50 ರಷ್ಟು ಸಬ್ಸಿಡಿಯನ್ನು ನೀಡುವದರ ಜೊತೆಗೆ ಸಂಬಂಧಪಟ್ಟ ಇಲಾಖೆ ವತಿಯಿಂದಲೇ ರೈತ ಫಲಾನುಭವಿಗಳಿಗೆ ಯಂತ್ರೋಪ ಕರಣಗಳನ್ನು ನೀಡುತ್ತಿರುವ ಸಂಪ್ರದಾಯ ಬಿಡಬೇಕು. ಇಲಾಖೆ ವತಿಯಿಂದ ಫಲಾನುಭವಿಗಳಿಗೆ ನೀಡುವ ಯಂತ್ರೋಪಕರಣಗಳ ಗುಣಮಟ್ಟ ಉತ್ತಮವಾಗಿಲ್ಲ. ಇದರ ಬದಲಿಗೆ ರೈತ ಫಲಾನುಭವಿಗಳಿಗೆ ಸಹಾಯ ಧನದ ಮೊತ್ತವನ್ನು ನೀಡಿದರೆ ತಮಗೆ ಬೇಕಾದಂತಹ ಉತ್ತಮ ಗುಣಮಟ್ಟದ ಯಂತ್ರೋಪ ಕರಣವನ್ನು ಖರೀದಿಸಬಹುದೆಂದು ರೈತ ಫಲಾನುಭವಿಗಳು ಒತ್ತಾಯಿ ಸಿದರು. ಈ ಕುರಿತು ಸಭೆಯಲ್ಲಿ ಗ್ರಾಮಸ್ಥರು ಧ್ವನಿಗೂಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ. ಸದಸ್ಯ ಪುಟ್ಟರಾಜ್ ಈ ಬಗ್ಗೆ ಜಿ.ಪಂ. ಸಭೆಯಲ್ಲಿ ಗಮನ ಸೆಳೆಯಲಾಗುವದೆಂದರು.

ಹಂಡ್ಲಿ ಗ್ರಾ.ಪಂ. ವ್ಯಾಪ್ತಿಯ ಗುಡುಗಳಲೆ ಜಂಕ್ಷನ್ ದಿನೇದಿನೇ ಪಟ್ಟಣವಾಗಿ ಬೆಳೆಯುತ್ತಿದೆ. ಇದರಿಂದ ಗ್ರಾ.ಪಂ.ಗೆ ಆದಾಯವೂ ಹೆಚ್ಚಾಗುತ್ತಿದೆ. ಆದರೆ ಗುಡುಗಳಲೆ ಜಂಕ್ಷನ್‍ನಲ್ಲಿ ಉತ್ತಮವಾದ ಚರಂಡಿ ವ್ಯವಸ್ಥೆಯಾಗಲಿ, ಸಾರ್ವಜನಿಕ ಶೌಚಾಲಯದ ವ್ಯವಸ್ಥೆಯನ್ನಾಗಲಿ ಮಾಡಿಕೊಟ್ಟಿಲ್ಲ.

ಗ್ರಾ.ಪಂ.ಗೆ ಇಷ್ಟೊಂದು ಆದಾಯವಾಗುತ್ತಿದ್ದರೂ ಕನಿಷ್ಟ ಇಲ್ಲಿಗೆ ಗ್ರಾ.ಪಂ. ವತಿಯಿಂದ ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡವನ್ನು ನಿರ್ಮಿಸಿಕೊಡಲು ಸಾಧ್ಯವಾಗಿಲ್ಲ ಎಂದು ಗುಡುಗಳಲೆಯ ಕಾಂತರಾಜ್ ಸಭೆಯ ಮುಂದಿಟ್ಟರು. ಇದಕ್ಕೆ ಸಭೆಯಲ್ಲಿ ಭಾಗವಹಿಸಿದ ಗ್ರಾಮಸ್ಥರೆಲ್ಲರೂ ಧ್ವನಿಗೂಡಿಸಿದರು. ಈ ಪ್ರಶ್ನೆಗೆ ಉತ್ತರ ನೀಡಲು ಗ್ರಾ.ಪಂ. ಅಧ್ಯಕ್ಷರು ಹಾಗೂ ಸದಸ್ಯರುಗಳು ಪರದಾಡಬೇಕಾಯಿತು.

ಗುಡುಗಳಲೆ ಜಂಕ್ಷನ್‍ನಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ, ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಕಂಡಕಂಡ ಕಡೆಯಲ್ಲಿ ನಿಲ್ಲಿಸಿ ಕೊಳ್ಳುತ್ತಾರೆ. ಕಾಲೇಜು ವಿದ್ಯಾರ್ಥಿ ಗಳು ವೇಗವಾಗಿ ಬೈಕ್ ಓಡಿಸಿ ಜನರನ್ನು ಗಾಬರಿಗೊಳಿಸುತ್ತಾರೆ. ದ್ವಿಚಕ್ರ ವಾಹನದಲ್ಲಿ ಮೂರು ಜನ ಸವಾರರನ್ನು ಕೂರಿಸಿಕೊಂಡು ಬೈಕ್ ಓಡಿಸುತ್ತಿದ್ದಾರೆ ಹಾಗೂ ಗುಡುಗಳಲೆ ಜಂಕ್ಷನ್‍ನಲ್ಲಿ ರಾತ್ರಿವೇಳೆ ಪೊಲೀಸರು ಗಸ್ತು ತಿರುಗುತ್ತಿಲ್ಲ. ಈ ಬಗ್ಗೆ ಪೊಲೀಸರು ಕ್ರಮ ತೆಗೆದು ಕೊಳ್ಳಬೇಕೆಂದು ಜಿ.ಎಂ. ಕಾಂತರಾಜು ಸಭೆಯ ಮುಂದಿಟ್ಟರು.

ಇದಕ್ಕೆ ಉತ್ತರ ನೀಡಿದ ಶನಿವಾರಸಂತೆ ಪೊಲೀಸ್ ಠಾಣಾಧಿಕಾರಿ ಮರಿಸ್ವಾಮಿ ಈಗಾಗಲೇ ಗುಡುಗಳಲೆ ಜಂಕ್ಷನ್‍ನಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 120 ಮಂದಿ ವಾಹನ ಸವಾರರಿಗೆ ಕೇಸು ದಾಖಲಾಗಿದೆ. ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವದು. ಹಗಲು ವೇಳೆಯಲ್ಲಿ ಜಂಕ್ಷನ್‍ನಲ್ಲಿ ಕರ್ತವ್ಯ ನಿರ್ವಹಿಸಲು ಪೊಲೀಸ್ ಸಿಬ್ಬಂದಿ ಗಳನ್ನು ನಿಯೋಜಿಸಲಾಗಿದೆ ಎಂದರು

ಸಭೆಯಲ್ಲಿ ರೈತರು ಹಂಡ್ಲಿ ಭಾಗದ ಕೆಲವು ಕಾಫಿ ತೋಟಗಳಲ್ಲಿ ಬಸವನ ಹುಳು ಹಾವಳಿ ಕಂಡು ಬಂದಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡರೆ ಮುಂದಾಗುವ ಬಸವನಹುಳು ಬಾಧೆಯನ್ನು ತಪ್ಪಿಸಬಹುದೆಂದರು, ಸಭೆಯಲ್ಲಿ ಗ್ರಾಮಸ್ಥರು ಪಕ್ಕದ ಶನಿವಾರಸಂತೆ ಆಸ್ಪತ್ರೆಯಲ್ಲಿ ಜನರ ಸೇವೆಗಾಗಿರುವ ಆ್ಯಂಬ್ಯುಲೆನ್ಸ್ ವಾಹನ ಕೆಟ್ಟುನಿಂತಿದೆ. ಇದನ್ನು ದುರಸ್ತಿ ಪಡಿಸಿದರೆ ಜನರಿಗೆ ಉಪಯೋಗ ವಾಗುತ್ತದೆ ಎಂದು ಒತ್ತಾಯಿಸಿದರು. ಹಂಡ್ಲಿ ಗ್ರಾ.ಪಂ. ವ್ಯಾಪ್ತಿಯ ಜನರು ಹಾಗೂ ರೈತರು ಕಂದಾಯ ಇಲಾಖೆಗೆ ಹೋಗಬೇಕಾದರೆ ಕೊಡ್ಲಿಪೇಟೆಗೆ ಹೋಗಬೇಕಾಗುತ್ತದೆ. ಹಂಡ್ಲಿ ಗ್ರಾ.ಪಂ. ಕೇಂದ್ರದಲ್ಲಿ ಗ್ರಾಮ ಲೆಕ್ಕಾಧಿಕಾರಿಯ ಕಚೇರಿಯನ್ನು ತೆರೆದರೆ ಉಪಯೋಗವಾಗುತ್ತದೆ ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಈ ಸಂದರ್ಭ ಮಾತನಾಡಿದ ಜಿ.ಪಂ. ಸದಸ್ಯ ಪುಟ್ಟರಾಜು, ಜಿ.ಪಂ. ಕ್ಷೇತ್ರದಲ್ಲಿ ಜಿ.ಪಂ. ಅನುದಾನವನ್ನು ಸಮರ್ಪವಾಗಿ ಬಳಸಿಕೊಳ್ಳಲಾಗಿದೆ, ವಿವಿಧ ಕಾಮಗಾರಿಗಳನ್ನು ಹಂತ ಹಂತವಾಗಿ ಮಾಡಲು ಕ್ರಮ ಕೈಗೊಳ್ಳಲಾಗುವದು. ಗ್ರಾ.ಪಂ., ತಾ.ಪಂ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಂದ ಜನರಿಗೆ ತೊಂದರೆಯಾದಲ್ಲಿ ಸಾರ್ವಜನಿಕರ ಪರವಾಗಿ ಸ್ಪಂದಿಸುತ್ತೇನೆ. ಗ್ರಾ.ಪಂ. ಹಾಗೂ ಜಿ.ಪಂ.ಯನ್ನು ಅಭಿವೃದ್ಧಿಗೊಳಿಸಲು ಜನರ ಸಹಕಾರ ಅತಿ ಮುಖ್ಯವಾಗಿದೆ ಎಂದರು.

ಸಭೆಯಲ್ಲಿ ತಾಲೂಕು ಯೋಜನಾಧಿಕಾರಿ ಡಿ. ನಾರಾಯಣ್ ನೋಡೆಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಸಭೆಯಲ್ಲಿ ತಾ.ಪಂ. ಸದಸ್ಯ ಕುಶಾಲಪ್ಪ, ಗ್ರಾ.ಪಂ. ಉಪಾಧ್ಯಕ್ಷೆ ರೂಪ ದಿನೇಶ್, ಗ್ರಾ.ಪಂ. ಪಿಡಿಓ ಪ್ರತಿಮಾ, ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

- ದಿನೇಶ್ ಮಾಲಂಬಿ, ಸುರೇಶ್ ವಿ.ಸಿ.