ವೀರಾಜಪೇಟೆ, ನ. ೨೬: ತಾ. ೨೮ ಮತ್ತು ೨೯ರಂದು ಮಂಗಳೂರಿನಲ್ಲಿ ‘ಯುವಜನ ರಾಜಕಾರಣ: ದಿಕ್ಕು-ಭವಿಷ್ಯ-ಸವಾಲು’ ಎಂಬ ಪ್ರಧಾನ ಆಶಯದೊಂದಿಗೆ ನಡೆಯಲಿರುವ ಜನನುಡಿ-೨೦೨೬ ಸಾಂಸ್ಕೃತಿಕ ಹಾಗೂ ವಿಚಾರ ಸಮ್ಮೇಳನದ ಪೋಸ್ಟರ್ ಅನ್ನು ವೀರಾಜಪೇಟೆಯ ಸಿಐಟಿಯು ಕಚೇರಿ ಆವರಣದಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ವತಿಯಿಂದ ಬಿಡುಗಡೆಗೊಳಿಸಲಾಯಿತು.
ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಸಹ ಕಾರ್ಯದರ್ಶಿ ಸುಶೀಲಾ, ವಾಸ್ತವದಲ್ಲಿ ಮಹಿಳೆಯರು ತೀವ್ರ ಆರ್ಥಿಕ ಹಾಗೂ ಸಾಮಾಜಿಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಪ್ರಮುಖವಾಗಿ ಮೈಕ್ರೋ ಫೈನಾನ್ಸ್ ಕಂಪೆನಿಗಳ ಅಧಿಕ ಬಡ್ಡಿದರ, ಸಾಲ ವಸೂಲಾತಿ ಹೆಸರಿನಲ್ಲಿ ನಡೆಯುತ್ತಿರುವ ಕಿರುಕುಳ ಹಾಗೂ ದೌರ್ಜನ್ಯಗಳಿಂದ ಗ್ರಾಮೀಣ ಮತ್ತು ಶ್ರಮಿಕ ವರ್ಗದ ಮಹಿಳೆಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಹಿಳೆಯರಿಗೆ ಉದ್ಯೋಗ ಸೃಷ್ಟಿಸುವಲ್ಲಿ, ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸುವಲ್ಲಿ ಹಾಗೂ ಮಹಿಳೆಯರಿಗೆ ಪೂರಕವಾದ ಸುರಕ್ಷಿತ ವಾತಾವರಣ ನಿರ್ಮಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ಆರೋಪಿಸಿದರು.
ಕೊಡಗು ಜಿಲ್ಲಾ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಸಂಚಾಲಕಿ ಪದ್ಮಿನಿ ಶ್ರೀಧರ್ ಮಾತನಾಡಿ, ಜನನುಡಿ ಸಮ್ಮೇಳನದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಹಾಗೂ ಯುವಜನರು ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಸಿಐಟಿಯು ಜಿಲ್ಲಾಧ್ಯಕ್ಷ ಎ.ಸಿ. ಸಾಬು ಮಾತನಾಡಿ, ದುಡಿಯುವ ವರ್ಗದ ಸಮಸ್ಯೆಗಳು ಹಾಗೂ ಮಹಿಳೆಯರ ಸಮಸ್ಯೆಗಳು ಪರಸ್ಪರ ಬೆಸೆದುಕೊಂಡಿವೆ. ಕಾರ್ಮಿಕ ಕಾನೂನುಗಳನ್ನು ದುರ್ಬಲಗೊಳಿಸುತ್ತಿರುವುದರಿಂದ ದುಡಿಯುವ ಮಹಿಳೆಯರು ಹೆಚ್ಚಿನ ನಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರದ ಕಾರ್ಪೊರೇಟ್ ಪರ ಹಾಗೂ ಜನವಿರೋಧಿ ನೀತಿಗಳ ವಿರುದ್ಧ ಕಾರ್ಮಿಕ ಮತ್ತು ಮಹಿಳಾ ಸಂಘಟನೆಗಳು ಒಗ್ಗೂಡಿ ಬಲಿಷ್ಠ ಹೋರಾಟ ರೂಪಿಸುವುದು ಇಂದಿನ ಅಗತ್ಯವಾಗಿದೆ ಎಂದರು.
ಸAಘಟನೆಯ ಪ್ರಮುಖರಾದ ಕುಸುಮಾ, ಪ್ರೇಮಾ ಮಾತನಾಡಿದರು.
ಈ ಸಂದರ್ಭ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಹಲವು ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.