ಮಡಿಕೇರಿ, ನ. ೨೬ : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಮರೆನಾಡು ಕೊಡವ ಸಮಾಜ, ಬಿರುನಾಣಿ ಇವರ ಸಹಯೋಗದಲ್ಲಿ ತಾ. ೨೯ ಭಾನುವಾರ ಮಧ್ಯಾಹ್ನ ೧೨.೩೦ಗಂಟೆಯಿAದ ಬಿರುನಾಣಿಯ ಮರೆನಾಡು ಕೊಡವ ಸಮಾಜದಲ್ಲಿ “ಮರೆನಾಡ್ರ ಪುತ್ತರಿ ಪುದುಮೆ” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯನವರು ವಹಿಸಲಿದ್ದಾರೆ. ಅತಿಥಿಗಳಾಗಿ ಬಿರುನಾಣಿಯ ಮರೆನಾಡು ಕೊಡವ ಸಮಾಜದ ಅಧ್ಯಕ್ಷರಾದ ಅಣ್ಣಳಮಾಡ ಲಾಲ ಅಪ್ಪಣ್ಣ, ಉಪಾಧ್ಯಕ್ಷರಾದ ಕಾಯಪಂಡ ಸುನಿಲ್ ಮಾಚಯ್ಯ, ಕಾರ್ಯಾಧ್ಯಕ್ಷರಾದ ಬೊಳ್ಳೆರ ಪೊನ್ನಪ್ಪ (ಅಪ್ಪುಟು), ಕಾರ್ಯದರ್ಶಿ ಕಳಕಂಡ ಜೀತು ಕುಶಾಲಪ್ಪ, ಸಹಕಾರ್ಯದರ್ಶಿ ಬಿಟ್ಟಿಯಂಡ ಸುನಿತ ಹಾಗೂ ಖಜಾಂಚಿ ಬೊಟ್ಟಂಗಡ ವಿಶು ಭಾಗವಹಿಸಲಿರುವರು.
ಕಾರ್ಯಕ್ರಮದಲ್ಲಿ ಮರೆನಾಡು ಕೊಡವ ಸಮಾಜದಿಂದ ಪುತ್ತರಿ ಕೋಲಾಟ್, ಬೊಳಕಾಟ್, ಉಮ್ಮತಾಟ್, ದೇಶಕೆಟ್ಟ್ ಪಾಟ್; ಲಯನ್ಸ್ ಶಾಲೆಯ ವಿದ್ಯಾರ್ಥಿಗಳಿಂದ ಕೋಲಾಟ್, ಬೊಳಕಾಟ್, ಉಮ್ಮತಾಟ್ ಹಾಗೂ ಟಿ. ಶೆಟ್ಟಿಗೇರಿಯ ರೂಟ್ಸ್ ಶಾಲೆ ವಿದ್ಯಾರ್ಥಿಗಳಿಂದ ಕೋಲಾಟ್, ಬೊಳಕಾಟ್, ಕಪ್ಪೆಯಾಟ್ ಏರ್ಪಡಿಸಲಾಗುವುದು. ಸಭಾ ಕಾರ್ಯಕ್ರಮದ ವೇಳೆ ಮರೆನಾಡ್ ಕೊಡವ ಸಮಾಜದ ವತಿಯಿಂದ ಆಯ್ದ ಕೆಲವು ಸಾಧಕರುಗಳನ್ನು ಸನ್ಮಾನಿಸಲಾಗುವುದು. ಅಕಾಡೆಮಿಯ ಸದಸ್ಯರಾದ ಕೊಂಡಿಜಮ್ಮನ ಎಂ. ಬಾಲಕೃಷ್ಣ ಹಾಗೂ ನಾಯಂದಿರ ಆರ್. ಶಿವಾಜಿರವರು ಸಂಚಾಲಕರಾಗಿ ಕಾರ್ಯನಿರ್ವಹಿಸಲಿರುವರು. ಈ ಕಾರ್ಯಕ್ರಮದಲ್ಲಿ ಅಕಾಡೆಮಿಯ ಎಲ್ಲಾ ಸದಸ್ಯರುಗಳು, ಗ್ರಾಮಸ್ಥರು, ನಾಡಿನ ಜನತೆ ಭಾಗವಹಿಸಲಿದ್ದಾರೆ. ಅಕಾಡೆಮಿ ಪ್ರಕಟಿತ ಪುಸ್ತಕಗಳ ಪ್ರದರ್ಶನ ಹಾಗೂ ಮಾರಾಟ ಇರುತ್ತದೆ ಎಂದು ಪ್ರಕಟಣೆ ತಿಳಿಸಿದೆ.