ಮುಳ್ಳೂರು, ನ. ೨೪: ಕೊಡಗು-ಹಾಸನ ಜಿಲ್ಲಾ ಭಾಗದಲ್ಲಿರುವ ಸಕಲೇಶಪುರ ತಾಲೂಕಿಗೆ ಸೇರಿದ ಹೊಸೂರು ಗ್ರಾಮದಲ್ಲಿ ನಾನೂರು ವರ್ಷಗಳ ಇತಿಹಾಸ ಇರುವ ಬೆಟ್ಟದ ಶ್ರೀ ಬಸವೇಶ್ವರ ಸ್ವಾಮಿಯ ಕೌಟೆಕಾಯಿ ಜಾತ್ರೆ ಸೋಮವಾರ ನಡೆಯಿತು.
ಕೌಟೆಕಾಯಿಯನ್ನು ಎರೆಡು ಭಾಗವನ್ನಾಗಿ ಮಾಡಿ ಅದರ ತಿರುಳು ತೆಗೆದು ಅದರಲ್ಲಿ ಹಣತೆಯನ್ನು ಹಚ್ಚುವುದು ಕೌಟೆಕಾಯಿ ಜಾತ್ರೆಯ ವಿಶೇಷತೆಯಾಗಿದೆ.
ಸೋಮವಾರ ನಡೆದ ಕೌಟೆಕಾಯಿ ಜಾತ್ರೋತ್ಸವವನ್ನು ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಕೌಟೆಕಾಯಿ ತಿರುಳಿನ ಹಣತೆಗೆ ದೀಪ ಹಚ್ಚಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಹಿಂದೂ ಧರ್ಮದಲ್ಲಿನ ಆಚರಣೆ ಸಂಪ್ರದಾಯಗಳನ್ನು ನಾವೆಲ್ಲರೂ ಉಳಿಸಿಕೊಳ್ಳಬೇಕು. ಇಂದಿನ ಪೀಳಿಗೆ ಹಿರಿಯರು ಹಾಕಿಕೊಟ್ಟಿರುವ ಸಂಪ್ರದಾಯ, ಆಚಾರ - ವಿಚಾರಗಳನ್ನು ಪಾಲನೆ ಮಾಡಬೇಕು ಎಂದರು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ ಸನ್ಮಾನ ಸ್ವೀಕರಿಸಿ ಮಾತನಾಡಿ, ಡಿಗ್ರಿ ಅರ್ಹತಾ ಪತ್ರ ಪಡೆದ ಮಾತ್ರಕ್ಕೆ ವಿದ್ಯಾವಂತರಾಗುವುದಿಲ್ಲ; ಸಾಮಾಜಿಕ ಚಿಂತನೆ, ಎಲ್ಲರಿಗೂ ಗೌರವ ಕೊಡುವ, ಎಲ್ಲಾ ವಿಚಾರಗಳನ್ನು ತಿಳಿದುಕೊಳ್ಳುವ, ಎಲ್ಲರ ಜೊತೆ ಬೆರೆಯುವ ಸಂಸ್ಕಾರ ಬೆಳೆಸಿಕೊಂಡವನು ಮಾತ್ರ ನಿಜವಾದ ವಿದ್ಯಾವಂತ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೊಡಗಿನ ಸಾಹಿತಿ ಜಲಾ ಕಾಳಪ್ಪ, ಹರಪಳ್ಳಿ ರವೀಂದ್ರ, ಸಕಲೇಶಪುರದ ಸಾಹಿತಿ ಡಾ. ಲಕ್ಷö್ಮಣ್ ಗಂಗಾಧರ್ ಇವರುಗಳನ್ನು ಜಾತ್ರಾ ಸಮಿತಿಯಿಂದ ಸನ್ಮಾನಿಸಲಾಯಿತು. ಗ್ರಾಮ ಸಮಿತಿ ಅಧ್ಯಕ್ಷ ಮಂಜುನಾಥ್ ನೇತೃತ್ವದಲ್ಲಿ ಜಾತ್ರೋತ್ಸವ ನಡೆಯಿತು. ವೇದಿಕೆಯಲ್ಲಿ ಸಕಲೇಶಪುರ ಮಾಜಿ ಶಾಸಕ ಕುಮಾರ ಸ್ವಾಮಿ, ಜಾತ್ರಾ ಸಮಿತಿ ಅಧ್ಯಕ್ಷ ಕಾಂತರಾಜ್, ರಮೇಶ್ ಮುಂತಾದವರು ಹಾಜರಿದ್ದರು.
- ಭಾಸ್ಕರ್ ಮುಳ್ಳೂರು.