ಮಡಿಕೇರಿ, ನ. ೨೪: ಬೆಟ್ಟಗೇರಿ ಅಂಗನವಾಡಿಯಲ್ಲಿ ವಿಶ್ವ ಮಕ್ಕಳ ದಿನ ಹಾಗೂ ಪೋಷಣ್ ಅಭಿಯಾನ ಯೋಜನೆ ಅಡಿಯಲ್ಲಿ ಸೀಮಂತ ಕಾರ್ಯಕ್ರಮ ನೆರವೇರಿತು.
ಬೆಟ್ಟಗೇರಿ ಶಾಲೆಯ ಮುಖ್ಯ ಶಿಕ್ಷಕರಾದ ಧರಣಿ ಅವರು ಮಕ್ಕಳ ಹಕ್ಕುಗಳ ಬಗ್ಗೆ, ಶಾಲೆಯಲ್ಲಿ ಸಿಗುತ್ತಿರುವ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಜಿಲ್ಲಾ ಉಪನಿರ್ದೇಶಕರ ಕಚೇರಿಯ ಕೇಶನಿ, ಭೇಟಿ ಬಚಾವ್ ಬೇಟಿ ಪಡಾವೋ ಕಾರ್ಯಕ್ರಮದ ಕುರಿತು, ಸಖಿ ವನ್ ಸ್ಟಾಪ್ ಸೆಂಟರ್ನ ಕುರಿತು, ಹಿರಿಯ ನಾಗರಿಕರಿಗೆ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಪ್ರಬಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಅವರು ಮಾತನಾಡಿ, ಮಗುವಿನ ಜೀವನದ ಮೊದಲ ಆರು ವರ್ಷಗಳು ಅತ್ಯಂತ ಮಹತ್ವದ ಬೆಳವಣಿಗೆಯ ಹಂತಗಳಾಗಿವೆ. ಈ ಹಂತದಲ್ಲಿ ಮಗುವಿನ ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಭಾಷಾ ಬೆಳವಣಿಗೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದರು.
ಅAಗನವಾಡಿ ಕೇಂದ್ರಗಳು ಕೇವಲ ಪೌಷ್ಟಿಕ ಆಹಾರ ವಿತರಿಸುವ ಕೇಂದ್ರಗಳಲ್ಲ. ಅವು ಮಗುವಿನ ಕಲಿಕೆ, ಆಟ, ಸೃಜನಶೀಲತೆ, ಆರೋಗ್ಯ ಮತ್ತು ಸರ್ವತೋಮುಖ ಬೆಳವಣಿಗೆಯ ಕೇಂದ್ರಗಳಾಗಿವೆ. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಮಕ್ಕಳಿಗೆ ಪ್ರೀತಿ, ಆರೈಕೆ ಮತ್ತು ಪೂರ್ವ ಪ್ರಾಥಮಿಕ ಶಿಕ್ಷಣ ನೀಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಆದ್ದರಿಂದ ಪ್ರತಿಯೊಬ್ಬ ಪೋಷಕರು ಅಂಗನವಾಡಿ ಕೇಂದ್ರಗಳೊAದಿಗೆ ಕೈಜೋಡಿಸಬೇಕು ಎಂದು ತಿಳಿಸಿದರು.
ಈ ಸಂದರ್ಭ ಮಕ್ಕಳಿಗೆ ವಿವಿಧ ರೀತಿಯ ಆಟೋಟ ಸ್ಪರ್ಧೆಗಳು ಮತ್ತು ಛದ್ಮವೇಶ ಸ್ಪರ್ಧ ಕಾರ್ಯಕ್ರಮ ಏರ್ಪಡಿಸಿ ಬಹುಮಾನ ವಿತರಣೆ ಮಾಡಲಾಯಿತು. ಪೋಷಣ್ ಅಭಿಯಾನ ಯೋಜನೆ ಅಡಿ ಸಮುದಾಯ ಆಧಾರಿತ ಚಟುವಟಿಕೆಯಲ್ಲಿ ಸೀಮಂತ ಕಾರ್ಯಕ್ರಮ ನಡೆಸಿ ಗರ್ಭಿಣಿಯರ ಆರೈಕೆ, ಆಹಾರ ಪದ್ಧತಿ ಆರೋಗ್ಯ ತಪಾಸಣೆ, ಚುಚ್ಚುಮದ್ದು, ಕುರಿತು ಮಾಹಿತಿ ನೀಡಲಾಯಿತು.
ಕಾರ್ಯಕ್ರಮದ ನಿರೂಪಣೆಯನ್ನು ಬೆಟ್ಟಗೇರಿ ಅಂಗನವಾಡಿ ಕಾರ್ಯಕರ್ತೆ ಪುಷ್ಪಾವತಿ, ಪ್ರಾರ್ಥನೆಯನ್ನು ಅಂಗನವಾಡಿ ಕೇಂದ್ರದ ಮಕ್ಕಳು ನೆರವೇರಿಸಿದರು. ಧರಣಿ ಅವರು ವಂದನಾರ್ಪಣೆ ನೆರವೇರಿಸಿದರು.