ಪ್ರಕೃತಿ ಆರಾಧನಾ ಪರಂಪರೆಯ ಕೊಡವ ಜನಪದರಲ್ಲಿ ಕೃಷಿ ಹಿನ್ನೆಲೆಯ ಆರಾಧನೆ ಮತ್ತು ಆಚರಣೆಗಳೇ ಪ್ರಧಾನ. ತಮ್ಮ ಬದುಕಿನ ಭಾಗವಾದ ಪ್ರತಿಯೊಂದು ಅಂಶಗಳಲ್ಲೂ ದೈವತ್ವವನ್ನು ಕಾಣುವವರು ಜನಪದರು. ಪಂಚಭೂತಗಳು, ಭೂದೇವಿಯ ಒಡಲಿನ ಅತಿ ಸೂಕ್ಷö್ಮಅಂಶಗಳು ಹಾಗೂ ಬದುಕಿಗೆ ಮೂಲವಾದ ಅನ್ನದಲ್ಲೂ ದೇವರನ್ನು ಸಾಕ್ಷೀಕರಿಸುವುದು ಜನಪದರ ಗುಣ. ಉತ್ತು ಬಿತ್ತಿ ಬೆಳೆದ ಭತ್ತವು ಫಲಭರಿತವಾದಾಗ ಅದನ್ನು ಸಡಗರದಿಂದ ಸ್ವಾಗತಿಸಿ ಮನೆತುಂಬಿಸಿಕೊಳ್ಳುವ ಸಂಭ್ರಮ ಅವರದು. ಈ ಹಿನ್ನೆಲೆಯ ಆಚರಣೆಯೇ ಪುತ್ತರಿ ಹಬ್ಬ. ‘ಪುತ್ತರಿ’ ಶಬ್ದವು ‘ಪುತ್ತ’ ಮತ್ತು ‘ಅರಿ’ ಎಂಬ ಕೊಡವ ಶಬ್ದಗಳಿಂದ ನಿಷ್ಪನ್ನಗೊಂಡಿದೆ. ‘ಪುತ್ತ’ ಎಂದರೆ ಹೊಸತು. ‘ಅರಿ’ ಎಂದರೆ ಭತ್ತದ ತೆನೆಯ ಕಟ್ಟು. ಹಾಗಾಗಿ ಹೊಸ ಭತ್ತವನ್ನು ಮನೆಗೆ ತರುವ ಹಬ್ಬವೇ ‘ಪುತ್ತರಿ’. ಹಬ್ಬವೆಂಬುದು ಹಲವು ನಂಬಿಕೆ ಮತ್ತು ಆಚರಣೆಗಳ ಮೊತ್ತ. ಇಗ್ಗ್ತ್ತ ಮಲೆಯ ದೇವ, ಅನ್ನದೇವ, ಮಳೆದೇವನಾದ ಇಗ್ಗ್ತಪ್ಪನೊಂದಿಗೆ ಪುತ್ತರಿಯ ಆಚರಣೆ ಬೆಸೆದುಕೊಂಡಿದೆ. ಪುತ್ತರಿ ಹಬ್ಬದ ದಿನಾಂಕ ಮತ್ತು ಮುಹೂರ್ತವನ್ನು ನಿಗಧಿಗೊಳಿಸುವ ‘ನಮ್ಮೆ ಕುರಿಪ’ ಕಾರ್ಯ ಪಾಡಿ ಇಗ್ಗ್ತಪ್ಪ ದೇವಾಲಯದಲ್ಲಿ ನಡೆಯುತ್ತದೆ. ದೇವಸ್ಥಾನದ ತಕ್ಕ ಮುಖ್ಯಸ್ಥರ ಸಮ್ಮುಖದಲ್ಲಿ ಅಮ್ಮಂಗೇರಿಯ ಕಣಿಯರು ಈ ಕಾರ್ಯವನ್ನು ಮಾಡುತ್ತಾರೆ. ಅಂದಿನಿAದ ಹಬ್ಬದ ಕಟ್ಟುಕಟ್ಟಳೆಗಳು ಪ್ರಾರಂಭವಾಗುತ್ತವೆ. ಸಾಮಾನ್ಯವಾಗಿ ಡಿಸೆಂಬರ್ ತಿಂಗಳ ರೋಹಿಣಿ ನಕತ್ರದ ವೃಶ್ಚಿಕ ಪೌರ್ಣಮಿಯಂದು ಪುತ್ತರಿ ಹಬ್ಬ ನಡೆಯುತ್ತದೆ. ಭತ್ತದ ಕದಿರು ದಾಟಲಿ, ದಾಟದಿರಲಿ ಈ ನಕ್ಷತ್ರದ ಸಮಯ ಮುಖ್ಯವೆನಿಸುತ್ತದೆ. ಹಾಗಾಗಿ ಕೆಲವೊಮ್ಮೆ ನವೆಂಬರ್ ತಿಂಗಳಲ್ಲಿ ಪುತ್ತರಿ ಬರುವುದಿದೆ. ಈ ಸಂದರ್ಭದಲ್ಲಿ ಹಾಲು ತುಂಬಿದ ಹಸಿರು ವರ್ಣದ ಕದಿರನ್ನು ತರುವುದರಿಂದ ‘ಪಚ್ಚೆ (ಹಸಿರು)ಪುತ್ತರಿ’ ಎನಿಸಿಕೊಳ್ಳುತ್ತದೆ. ಪುತ್ತರಿ ಸಮೀಪಿಸುತ್ತಿದ್ದಂತೆಯೇ ಪ್ರತೀ ಮನೆಗಳು, ಊರಿನ ದೇವಸ್ಥಾನ, ಮಂದ್ಗಳು ಸ್ವಚ್ಚವಾಗಿ ಸುಣ್ಣಬಣ್ಣಗಳಿಂದ ಸಿಂಗರಿಸಲ್ಪಡುತ್ತವೆ. ಪೂರ್ವದಲ್ಲಿ ಹಬ್ಬಕ್ಕೆ ಬೇಕಾದ ಬಿದಿರಿನ ಕುತ್ತಿ, ಕುಡಿಕೆ, ಚಾಪೆ, ಕುಕ್ಕೆ ಇತ್ಯಾದಿ ವಸ್ತುಗಳನ್ನು ಆಯಾ ಕಸುಬಿನವರು ಊರಿನವರಿಗೆ ಒದಗಿಸುತ್ತಿದ್ದರು.
‘ಈಡ್ ಎಡ್ಪ/ ಕೆಟ್ಟುವ’ ಆಚರಣೆ ಹಬ್ಬಕ್ಕೆ ಒಂದು ವಾರ ಮುಂಚಿತವಾಗಿ ನಡೆಯುತ್ತದೆ. ಆಯಾ ಊರಿನ ಹಿರಿಯರು ಮತ್ತು ಯುವಕರು ಊರು ತಕ್ಕನ ಮನೆಗೆ ತೆರಳುತ್ತಾರೆ. ಊಟೋಪಚಾರದ ನಂತರ ನಾಲ್ಕು ಮಂದಿ ಹಿರಿಯರ ದುಡಿಕೊಟ್ಟ್ ಪಾಟ್ ಹಾಗೂ ಕೊಂಬುಕೊಟ್ಟ್ ವಾಲಗದೊಂದಿಗೆ ಮಂದ್ಗೆ ತೆರಳುತ್ತಾರೆ. ಇಗ್ಗ್ತಪ್ಪ, ಕಾವೇರಮ್ಮೆಯನ್ನು ಪ್ರಾರ್ಥಿಸಿ ಕೊಡವ ಜನಪದ ಕಲೆಗಳಾದ ಕೋಲಾಟ್, ಬೊಳಕಾಟ್, ಪರೆಯಕಳಿ, ನಾಡೆ ಕಾಕುವ, ಪೀರಕ್ಕೆ ಪಡೆ ಇತ್ಯಾದಿಗಳ ಅಭ್ಯಾಸ ನಡೆಯುತ್ತದೆ. ಹಬ್ಬದಂದು ನಿಗಧಿತ ವೇಳೆಗೆ ನೆರೆಕೆಟ್ಟುವ ಆಚರಣೆ ನಡೆಯುತ್ತದೆ. ಮನೆಯ ನೆಲ್ಲಕ್ಕಿ ನಡುಬಾಡೆಯಲ್ಲಿ (ಕೆಲವೆಡೆಗಳಲ್ಲಿ ಅಂಗಳದಲ್ಲಿ) ಚಾಪೆ ಹಾಸಿ ತಳಿಯತಕ್ಕಿ ಬೊಳಕ್, ಪಕ್ಕದಲ್ಲಿ ಪುತ್ತರಿಗೆಂದೇ ಹೆಣೆದ ಕುಕ್ಕೆ ಪುತ್ತರಿ ಕುಕ್ಕೆ(ಪಚ್ಯ) ಇಡಲಾಗುತ್ತದೆ. ಅದರಲ್ಲಿ ಕುಮ್ಮಿ, ಕೇಕ್, ಅರಳಿ ಮರದ ಎಲೆ, ಎರಞೆÆÃಳಿ ಕೊಡಿಗಳನ್ನು ಒಂದರ ಮೇಲೊಂದು ಇರಿಸಿ ಸುರುಳಿ ಸುತ್ತಿ ಅಚ್ಚಿನಾರಿನಲ್ಲಿ ಕಟ್ಟಿ ಇಡಲಾಗುತ್ತದೆ. ಇದನ್ನು ‘ಬೋಳ್ ನೆರೆ ಕೆಟ್ಟುವ’ ಎನ್ನುತ್ತಾರೆ. ಪುತ್ತರಿ ಗೆಣಸು ಹಾಗೂ ತಂಬುಟ್ಟ್ ಪುತ್ತರಿಯ ವಿಶೇಷ ಖಾದ್ಯಗಳು. ಮನೆಯ ಹೆಂಗಳೆಯರು ಪೀರಕ್ಕೆ(ಕಹಿ ರುಚಿಯ ಕಾಡು ಸೌತೆ)ಯ ತುದಿಯನ್ನು ಕತ್ತರಿಸಿ ಅದನ್ನು ಸುಣ್ಣ ಅಥವಾ ಅಕ್ಕಿ ಪುಡಿಯನ್ನು ಕಲಸಿದ ಮಿಶ್ರಣಕ್ಕೆ ಅದ್ದಿ ಬಾಗಿಲು ಕಿಟಕಿಗಳಿಗೆ ಮೂರು ಬೊಟ್ಟುಗಳನ್ನು ಇಡುತ್ತಾರೆ. ಇದನ್ನು ‘ಪುತ್ತರಿ ಕುರಿಪ’/ ‘ಕುರಿಪ’ ಎನ್ನುತ್ತಾರೆ.
ಬಳ್ಳಪಾನಿ ನೆರ್ಪ ಕ್ರಿಯೆಯ ಜವಾಬ್ದಾರಿ ಮನೆಯ ಹಿರಿಯ ಮುತೈದೆಯರದು. ಪುತ್ತರಿ ಕುಕ್ಕೆಗೆ ಭತ್ತವನ್ನು ತುಂಬಿಸಿ ಅದರ ಮೇಲೆ ಪಾನಿಯಲ್ಲಿ ಭತ್ತ ಇರಿಸಿ ಅದರ ಮೇಲ್ಭಾಗದಲ್ಲಿ ಅಕ್ಕಿ ತುಂಬಿದ ಮಾನವನ್ನು ಇರಿಸಲಾಗುತ್ತದೆ. ಇದನ್ನು ನೆಲ್ಲಕ್ಕಿ ನಡುಬಾಡೆಯಲ್ಲಿನ
ತಳಿಯತಕ್ಕಿ ದೀಪದ ಬಳಿ ಇರಿಸಲಾಗುತ್ತದೆ. ಪೂರ್ವದಲ್ಲಿ ಬಳ್ಳ ಪಾನಿಗಳು ಅಳತೆಯ ಮಾಪಕಗಳಾಗಿದ್ದು; ಅದರ ಸಾಂಕೇತಿಕತೆ ಇಲ್ಲಿ ಗೋಚರಿಸುತ್ತದೆ. ಅದರ ಪಕ್ಕದಲ್ಲಿ ಅಕ್ಕಿ ಪುಡಿಯನ್ನು ತುಂಬಿದ ಪುತ್ತರಿ ಕುಡಿಕೆ ಇರುತ್ತದೆ. ಅದರ ಸಮೀಪ ಹಾಲು, ಜೇನು, ತುಪ್ಪ, ಎಳ್ಳು, ಶುಂಠಿ, ತೆಂಗಿನ ಚೂರು, ಹಾಗಲಕಾಯಿ ಮುಳ್ಳು ಹಾಗೂ ಪೆರುಂಬು ಕೊಡಿಯನ್ನು ತುಂಬಿದ ‘ಪುತ್ತರಿಕುತ್ತಿ’ಯನ್ನು ನಿಲ್ಲಿಸಿ ಅದರೊಳಗೆ ಕುಡುಗೋಲನ್ನು ಇರಿಸಲಾಗುತ್ತದೆ. ಇವೆಲ್ಲವೂ ಜನಪದರ ಮೂಲ ಆಚರಣೆಗಳಾದ ಫಲವಂತಿಕೆಯ ಆಚರಣೆಯನ್ನು ಪ್ರತಿಫಲಿಸುತ್ತವೆ. ಮನೆಯವರೆಲ್ಲಾ ಸೇರಿ ತಂಬುಟ್ಟ್, ಬೇಯಿಸಿದ ಪುತ್ತರಿ ಗೆಣಸನ್ನು ತಿನ್ನುವ ಮೂಲಕ ಪಲಾರ ಮಾಡಿ ಕದಿರು ತೆಗೆಯಲು ಹೋಗುತ್ತಾರೆ. ಕದಿರು ತೆಗೆಯುವವನು ಬಿಳಿಯ ಕುಪ್ಯಚೇಲೆ ಧರಿಸಿ ಮನೆಯ ಸರ್ವ ಸದಸ್ಯರೊಡಗೂಡಿ ನೆಲ್ಲಕ್ಕಿಯಲ್ಲಿ ನಿಂತು ಒಕ್ಕಣೆ ಕಟ್ಟಿ ಪ್ರಾರ್ಥಿಸಿ ಪುತ್ತರಿ ಕುತ್ತಿಯನ್ನು ತೆಗೆದುಕೊಳ್ಳುತ್ತಾನೆ. ತಳಿಯತಕ್ಕಿ ದೀಪ ಹಾಗೂ ದುಡಿಕೊಟ್ಟ್ ಹಾಡಿನೊಂದಿಗೆ ಗದ್ದೆಗೆ ತೆರಳುತ್ತಾರೆ. ಕದಿರು ತೆಗೆಯುವ ಸ್ಥಳವನ್ನು ಬಾಳೆ, ಹೂವು ಮತ್ತು ಮಾವಿನ ತೋರಣಗಳಿಂದ ಅಲಂಕರಿಸಲಾಗಿರುತ್ತದೆ. ಕುತ್ತಿಯನ್ನು ಹೊತ್ತುಕೊಂಡವನು ಅದನ್ನು ಕೆಳಗಿರಿಸಿ ಬಾಳೆ ಎಲೆಯ ಮೇಲೆ ಅಕ್ಕಿ, ತೆಂಗಿನಕಾಯಿ, ವೀಳ್ಯದೆಲೆ ಅಡಿಕೆ ಇರಿಸಿ ಅದರ ಮುಂಭಾಗದಲ್ಲಿ ಬತ್ತಿಯೊಂದನ್ನು ಇರಿಸಿ ಹಚ್ಚುತ್ತಾನೆ. ಕುತ್ತಿಯಲ್ಲಿರುವುದನ್ನು ಭತ್ತದ ಕದಿರಿನ ಬುಡವೊಂದಕ್ಕೆ ಹುಯ್ಯುತ್ತಾನೆ. ಇಗ್ಗ್ತಪ್ಪ ಹಾಗೂ ಕಾವೇರಿಗೆ ಒಕ್ಕಣೆ ಕಟ್ಟಿ ಎಲ್ಲರೂ ಬೆಳೆಗೆ ಅಕ್ಕಿ ಹಾಕುತ್ತಾರೆ. ಒಂದು ನೆರೆಯನ್ನು ಕದಿರಿನ ಬುಡಕ್ಕೆ ಕಟ್ಟಿ ಅದನ್ನು ಬಿಟ್ಟು ಉಳಿದ ಬೆಳೆಯನ್ನು ‘ಪೊಲಿ ಪೊಲಿ ದೇವ’ ಎಂಬ ಘೋಷಣೆಯೊಂದಿಗೆ ಕುಯ್ದು ಪುತ್ತರಿಕುತ್ತಿಗೆ ಹಾಕುತ್ತಾನೆ. ಈ ಸಂದರ್ಭದಲ್ಲಿ ಆಕಾಶಕ್ಕೆ ಗುಂಡು ಹಾರಿಸಲಾಗುತ್ತದೆ. ಪಟಾಕಿ ಸಿಡಿಸಿ ಸಂಭ್ರಮಿಸಲಾಗುತ್ತದೆ. ಬಂದವರೆಲ್ಲರೂ ‘ಪೊಲಿ ಪೊಲಿ ದೇವ’ ಎಂದು ಸಾಮೂಹಿಕವಾಗಿ ಪ್ರಾರ್ಥಿಸುತ್ತಾ ಒಂದೊAದು ಹಿಡಿ ಕದಿರು ಕೇಳಿಕೊಳ್ಳುತ್ತಾರೆ. ಕದಿರು ತೆಗೆದವನು ಕುತ್ತಿಯನ್ನು ಹೊತ್ತು ತಳಿಯತಕ್ಕಿ ದೀಪದೊಂದಿಗೆ ಮೊದಲು ಹಿಂದಕ್ಕೆ ತೆರಳುತ್ತಾನೆ. ಉಳಿದವರು ಹಿಂಬಾಲಿಸುತ್ತಾರೆ. ದಾರಿಯಲ್ಲಿ ದೇವಸ್ಥಾನವಿದ್ದರೆ ಅಲ್ಲಿಗೆ ಕದಿರು ಒಪ್ಪಿಸುತ್ತಾರೆ. ಒಕ್ಕಲು ಕಣಕ್ಕೆ ಕದಿರು ಹಾಕಿ ಅಲ್ಲಿನ ಬೋಟಿಗೆ ನೆರೆ ಕಟ್ಟಿ ಮನೆಗೆ ಬರುತ್ತಾರೆ. ಆಗ ಮುತೈದೆಯೊಬ್ಬಳು ಕದಿರಿಗೆ ಅಕ್ಕಿ ಹಾಕಿ. ಅದರ ಕಾಲುಮುಟ್ಟಿ ನಮಸ್ಕರಿಸುತ್ತಾಳೆ. ಪುತ್ತರಿಕುತ್ತಿ ಹೊತ್ತವನ ಕಾಲುತೊಳೆದು ಗಿಂಡಿಯಲ್ಲಿ ಹಾಲು ನೀಡಿ ಮನೆಯೊಳಗೆ ಬರಮಾಡಿಕೊಳ್ಳುತ್ತಾಳೆ. ಕದಿರನ್ನು ನೆಲ್ಲಕ್ಕಿ ನಡುಬಾಡೆಯಲ್ಲಿರಿಸಲಾಗುತ್ತದೆ. ಈ ಹಿಂದೆ ತಯಾರಿಸಿದ ‘ಬೋಳ್ ನೆರೆ’ಯೊಳಗೆ ಹೊಸ ಕದಿರನ್ನು ಹಾಕಿ ಮನೆಯ ಮುಂಭಾಗ, ಕೈಮಡ, ಭತ್ತ, ಅಕ್ಕಿ ಶೇಖರಿಸಿಡುವ ತುಳಿಯ, ಪತ್ತಾಯ, ಕೊಟ್ಟಿಗೆ, ಬಾವಿ, ವಾಹನ, ತೆಂಗಿನ ಮರಗಳಿಗೆ ಕಟ್ಟಲಾಗುತ್ತದೆ. ಮನೆಯ ಕಿರಿಯರು ಹಿರಿಯರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಳ್ಳುತ್ತಾರೆ. ಹೊಸ ಕದಿರಿನ ಭತ್ತವನ್ನು ಸುಲಿದು ಹಳೆಯ ಅಕ್ಕಿಯೊಂದಿಗೆ ಸೇರಿಸಿ ಪುದಿಯಕ್ಕಿ ಪಾಯಸ ಮಾಡಲಾಗುತ್ತದೆ. ಪುತ್ತರಿ ಕುತ್ತಿ ತೆಗೆದವನು ಅಕ್ಕಿಹಿಟ್ಟು, ಎಳ್ಳು, ಏಳು ಹೊಸ ಕದಿರಿನ ಅಕ್ಕಿ ಕಾಳು, ಏಳು ಚೂರು ಶುಂಠಿ, ಪುತ್ತರಿ ಗೆಣಸು, ಕೆಸುವಿನ ಗೆಡ್ಡೆ, ತೆಂಗಿನ ಚೂರು, ಹಾಗಲಕಾಯಿಯ ಮುಳ್ಳು, ಬಾಳೆಹಣ್ಣು ಹಾಗೂ ಏಳು ಕಲ್ಲಿನ ಹರಳು ಇವುಗಳನ್ನೆಲ್ಲಾ ಕಲಸಿ ಏಳಕ್ಕಿ ಪುಟ್ಟ್ ಮಾಡುತ್ತಾರೆ. ಅದನ್ನು ಒಂದೊAದು ಅರಳಿ ಎಲೆಯ ಮೇಲೆ ಹಾಕಿ ಆ ಮನೆಯಲ್ಲಿ ಗತಿಸಿದವರು ಹಾಗೂ ಮದುವೆಯಾಗಿ ಹೋದ ಹೆಣ್ಣುಮಕ್ಕಳ ಹೆಸರಿನಲ್ಲಿ ನೆಲ್ಲಕ್ಕಿ ನಡುಬಾಡೆಯ ಮೇಲ್ಭಾಗಕ್ಕೆ ಎಸೆಯುತ್ತಾರೆ. ಅದು ಅಂಟಿದರೆ ಅವರಿಗೆ ತೃಪ್ತಿಯಾಗಿದೆ ಎಂಬ ನಂಬಿಕೆಯಿದೆ. ಉಳಿದದನ್ನು ಅಲ್ಲಿರುವವರಿಗೆ ತಿನ್ನಲು ನೀಡಿ “ಪೊಳ್ದ್(ಪೊವ್ದ್) ಕೊಂಡೋAಗ” ಎಂದಾಗ ಎಲ್ಲರೂ ಆಗಲಿಯೆಂದು ತಿನ್ನುತ್ತಾರೆ. ಮೀದಿ ಇರಿಸಿದ ನಂತರ ಮನೆಯವರೆಲ್ಲಾ ಒಟ್ಟಾಗಿ ಹಬ್ಬದಡುಗೆಯನ್ನು ಸವಿಯುತ್ತಾರೆ.
ದಾರ್ಶನಿಕರ ಬಯಲು ಮತ್ತು ಶೂನ್ಯ ಪರಿಕಲ್ಪನೆಯ ಪ್ರತೀಕವಾದ ಊರ್ ಮತ್ತು ನಾಡ್ಮಂದ್ಗಳಲ್ಲಿ ಹಬ್ಬದ ಮರುದಿನ ಎಲ್ಲರೂ ಸೇರಿ ಎಲ್ಲ ರೀತಿಯ ಪುತ್ತರಿ ಕೋಲಾಟ್ನೊಂದಿಗೆ ವಿವಿಧ ಜನಪದ ನೃತ್ಯಗಳಲ್ಲಿ ಭಾಗವಹಿಸುತ್ತಾರೆ. ಹಲವೆಡೆಗಳಲ್ಲಿ ಊರಿನ ಗಂಡಸರು
ಮನೆಮನೆಗೆ ತೆರಳಿ ಆಯಾ ಒಕ್ಕದ ಇತಿಹಾಸ ಮತ್ತು ಖ್ಯಾತಿಯನ್ನು ದುಡಿ ಬಾರಿಸುತ್ತಾ ಹಾಡುತ್ತಾರೆ. ಇದನ್ನು ಕಿರಿಯರು ಅನುಕರಿಸುತ್ತಾರೆ. ‘ಮನೆಪಾಡುವ’ ಈ ಆಚರಣೆ ಅನೌಪಚಾರಿಕ ಶಿಕ್ಷಣ ಮಾಧ್ಯಮವೆನ್ನಬಹುದು. ಆಚರಣೆಗಳ ಮೊತ್ತವಾದ ಪುತ್ತರಿ ಊರಿನ ಐಕ್ಯತೆಯ ಪ್ರತೀಕವಾದ ‘ಊರೊರ್ಮೆ’ಯೊಂದಿಗೆ ಮುಕ್ತಾಯಗೊಳ್ಳುತ್ತದೆ. ಊರಿನವರ ನಡುವೆ ಯಾವುದೇ ಮನಸ್ಥಾಪವಿದ್ದರೂ ಎಲ್ಲವನ್ನು ಮರೆತು ಒಂದಾಗಿ ‘ಊರೋರ್ಮೆ ಕಳ’ದಲ್ಲಿ ಸೇರಿ ಸಂಭ್ರಮಿಸುತ್ತಾರೆ. ಒರ್ಮೆ ಎಂದರೆ ಒಗ್ಗಟ್ಟು ಎಂದರ್ಥ. ಹೀಗೆ ಧಾನ್ಯ ಲಕ್ಷಿö್ಮ ಆರಾಧನೆಯ ಮೂಲ ಆಶಯದೊಂದಿಗೆ ಪ್ರಾರಂಭವಾಗುವ ‘ಪುತ್ತರಿನಮ್ಮೆ’ ಹಬ್ಬಗಳ ಆಚರಣೆಯ ಮೂಲ ಉದ್ದೇಶವಾದ ಭಾವೈಕ್ಯತೆಯನ್ನು ಸಾಧಿಸುವುದರೊಂದಿಗೆ ಮುಕ್ತಾಯಗೊಳ್ಳುತ್ತದೆ. ಹಾಗಾಗಿಯೇ ಜನಪದರು “ಬಪ್ಪಕ ಪುತ್ತರಿ ಬಣ್ಣತೆ ಬಾತ್. ಪೋಪಕ ಪುತ್ತರಿ ಎಣ್ಣತೆ ಪೋಚಿ” (ಸಂಭ್ರಮದೊAದಿಗೆ ಬಂದ ಪುತ್ತರಿ ಹೋಗುವಾಗ ಹೇಳದೇ ಹೋಯಿತು) ಎನ್ನುತ್ತಾ “ದಮ್ಮಯ ಪುತ್ತರಿ ಒಮ್ಮಲೂ ಪೋತೆ”ಎಂದು ಬೇಡಿಕೊಳ್ಳುತ್ತಾರೆ.
- ಡಾ. ಮುಲ್ಲೇಂಗಡ ರೇವತಿ ಪೂವಯ್ಯ
ಸಹಾಯಕ ಪ್ರಾಧ್ಯಾಪಕಿ
ಕಾವೇರಿ ಕಾಲೇಜು, ಗೋಣಿಕೊಪ್ಪ
ಮೊ : ೯೪೮೦೯೦೫೭೫೬