ವೀರಾಜಪೇಟೆ, ನ. ೨೪: ಜಿಲ್ಲೆಯಲ್ಲಿ ಹುಲಿ ದಾಳಿ ಮುಂದುವರಿದಿದ್ದು, ಹಾಡಹಗಲೇ ಹಸುವಿನ ಮೇಲೆ ದಾಳಿ ನಡೆಸಿದ ಹುಲಿ ಅದನ್ನು ಕೊಂದು ಹಾಕಿರುವ ಘಟನೆ ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಯ ಮೈತಾಡಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಮೈತಾಡಿ ಗ್ರಾಮದ ನಿವಾಸಿ ಅಣ್ಣಳಪಂಡ ಶರಣು ಸುಬ್ಬಯ್ಯ ಅವರಿಗೆ ಸೇರಿದ ನಾಲ್ಕು ವರ್ಷದ ಹಸುವನ್ನು ಮೇಯಲು ಬಿಟ್ಟಿದ್ದ ಸಂದರ್ಭ ಬೆಳಿಗ್ಗೆ ಸುಮಾರು ೧೧.೩೦ಕ್ಕೆ ಹುಲಿ ದಾಳಿ ನಡೆಸಿ ಬಲಿ ಪಡೆದಿದೆ. ಕಳೆದ ಮೂರು ದಿನಗಳಲ್ಲಿ ಹುಲಿ ದಾಳಿಗೆ ನಾಲ್ಕು ಜಾನುವಾರುಗಳು ಬಲಿಯಾಗಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಇದೇ ಪ್ರದೇಶದಲ್ಲಿ ಹುಲಿಯ ಚಲನವಲನ ಪತ್ತೆಹಚ್ಚಲು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಆರ್ಆರ್ಟಿ ತಂಡದವರು ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲೇ ಸಮೀಪದಲ್ಲಿ ಹುಲಿ ಹಸುವಿನ ಮೇಲೆ ದಾಳಿ ನಡೆಸಿದೆ. ಹಸುವನ್ನು ಕೊಂದ ಬಳಿಕ ಹುಲಿ ಸಮೀಪದ ಕಾಫಿ ತೋಟದತ್ತ ತೆರಳಿರುವುದನ್ನು ಸ್ಥಳೀಯರು ಗಮನಿಸಿದ್ದು, ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಕಾಡಾನೆಗಳ ಹಾವಳಿಯಿಂದ ಈಗಾಗಲೇ ಸಂಕಷ್ಟ ಎದುರಿಸುತ್ತಿರುವ ಗ್ರಾಮಸ್ಥರಿಗೆ ಇದೀಗ ಹುಲಿ ದಾಳಿಯೂ ಮತ್ತೊಂದು ಆತಂಕವಾಗಿ ಪರಿಣಮಿಸಿದೆ. ಹುಲಿ ಆಗಿಂದಾಗೆ ತನ್ನ ನೆಲೆ ಬದಲಾಯಿಸುತ್ತಾ ಕಾಫಿ ತೋಟಗಳ ನಡುವೆ ಸಂಚರಿಸಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿರುವುದು ಅರಣ್ಯ ಇಲಾಖೆಗೂ ಸವಾಲಾಗಿ ಪರಿಣಮಿಸಿದೆ.
ಕಳೆದ ೪-೫ ದಿನಗಳಿಂದ ಹಾಲುಗುಂದ, ಏಲಿಯಂಗಾಡು ಹಾಗೂ ಕಿಗ್ಗಾಲು ಗ್ರಾಮಗಳ ವ್ಯಾಪ್ತಿಯಲ್ಲಿ ಹುಲಿ ಕಾಣಿಸಿಕೊಂಡಿದ್ದು, ಇದೀಗ ಮೈತಾಡಿಯಲ್ಲೂ ಹಸುವನ್ನು ಬಲಿ ಪಡೆದಿದೆ. ಇದರಿಂದ ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ರೈತರು ಹಾಗೂ ಹೈನುಗಾರಿಕೆ ಅವಲಂಬಿಸಿರುವ ಕುಟುಂಬಗಳು ಜಾನುವಾರುಗಳನ್ನು ಮೇಯಲು ಬಿಡಲೂ ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ನವೆಂಬರ್ ತಿಂಗಳೊAದರಲ್ಲೇ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಹುಲಿ ದಾಳಿಗೆ ಸುಮಾರು ೧೦ ಜಾನುವಾರುಗಳು ಬಲಿಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಹಾಲುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಏಲಿಯಂಗಾಡು, ಹಾಲುಗುಂದ ಹಾಗೂ ಮೈತಾಡಿ ಗ್ರಾಮಗಳಲ್ಲಿ ಹುಲಿ ನಿರಂತರವಾಗಿ ಕಾಣಿಸಿಕೊಂಡು ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಹುಲಿಯನ್ನು ಪತ್ತೆಹಚ್ಚಿ ಸೆರೆಹಿಡಿಯಲು ಅರಣ್ಯ ಇಲಾಖೆ ವಿಶೇಷ ಕಾರ್ಯಾಚರಣೆ ಕೈಗೊಂಡಿದೆ.
ಇದಕ್ಕಾಗಿ ಡ್ರೋನ್ ಕ್ಯಾಮರಾ ಹಾಗೂ ಸಾಕಾನೆಗಳನ್ನು ಬಳಸಿಕೊಂಡು ಹುಲಿಯ ಚಲನವಲನ ಪತ್ತೆಹಚ್ಚುವ ಕಾರ್ಯಕ್ಕೆ ಇಲಾಖೆ ಮುಂದಾಗಿದೆ. ವೀರಾಜಪೇಟೆ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿನುತಾ ಚವಾಣ್ ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಶಿವರಾಂ, ಉಪವಲಯ ಅರಣ್ಯಾಧಿಕಾರಿ ರಾಘವ, ಅರಣ್ಯ ಇಲಾಖೆ ಸಿಬ್ಬಂದಿ, ಆರ್ಆರ್ಟಿ ಹಾಗೂ ಆನೆ ಕಾರ್ಯಪಡೆ ತಂಡದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.
ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕು. ಅನಗತ್ಯವಾಗಿ ಕಾಫಿ ತೋಟ ಹಾಗೂ ನಿರ್ಜನ ಪ್ರದೇಶಗಳಿಗೆ ತೆರಳದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ವೀರಾಜಪೇಟೆ ವಲಯ ಅರಣ್ಯಾಧಿಕಾರಿ ಶಿವರಾಂ ಮನವಿ ಮಾಡಿದ್ದಾರೆ.
- ವಾಸು