ಸಿದ್ದಾಪುರ, ನ. ೨೩: ಹಾಲುಗುಂದ ಗ್ರಾಮದಲ್ಲಿ ಹುಲಿ ಹಸುವಿನ ಮೇಲೆ ದಾಳಿ ನಡೆಸಿ ಕೊಂದು ಹಾಕಿರುವ ಘಟನೆ ನಡೆದಿದ್ದು, ಗ್ರಾಮಸ್ಥರು ಆತಂಕಕ್ಕೆ ಸಿಲುಕಿದ್ದಾರೆ, ಕಳೆದ ಮೂರು ದಿನಗಳ ಹಿಂದೆಯಷ್ಟೇ ಹಾಲುಗುಂದ ಸಮೀಪದ ಕಿಗ್ಗಾಲು ಗ್ರಾಮದಲ್ಲಿ ಹುಲಿ ಜಾನುವಾರುಗಳನ್ನು ಕೊಂದು ಹಾಕಿದ ಘಟನೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಮಡಿಕೇರಿ ಉಪವಲಯ ಅರಣ್ಯ ಅಧಿಕಾರಿಗಳು ಕಿಗ್ಗಾಲು ಗ್ರಾಮದಲ್ಲಿ ಹುಲಿಯ ಸೆರೆಗೆ ಬೋನು ಇರಿಸಿದ್ದರು. ಆದರೆ ಹುಲಿ ಸೆರೆ ಆಗಲಿಲ್ಲ. ಇದೀಗ ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಹಾಲುಗುಂದ ಗ್ರಾಮದ ಮೆಕೇರಿರ ಗಪ್ಪು ಗಣಪತಿ ಎಂಬವರಿಗೆ ಸೇರಿದ ಹಸುವನ್ನು ಮನೆಯ ಸಮೀಪದ ಗದ್ದೆಯಲ್ಲಿ ಭಾನುವಾರ ಸಂಜೆ ಮೇಯಲು ಕಟ್ಟಿ ಹಾಕಿದ್ದ ವೇಳೆ ಹುಲಿ ದಾಳಿ ನಡೆಸಿ ಕೊಂದು ಹಾಕಿದೆ.

ಗ್ರಾಮಸ್ಥರು ಮತ್ತು ಕಾರ್ಮಿಕರು ಆತಂಕಕ್ಕೆ ಸಿಲುಕಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ ಮೇರೆಗೆ ವೀರಾಜಪೇಟೆಯ ವಲಯ ಅರಣ್ಯ ಅಧಿಕಾರಿ ಶಿವರಾಂ ನೇತೃತ್ವದಲ್ಲಿ ಉಪವಲಯ ಅರಣ್ಯ ಅಧಿಕಾರಿ ಮನೋಜ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಕುರಿತು ಮಾಹಿತಿ ನೀಡಿದ ವಲಯ ಅರಣ್ಯ ಅಧಿಕಾರಿ ಶಿವರಾಮ್ ಹುಲಿ ಹಸುವಿನ ಮೇಲೆ ದಾಳಿ ನಡೆಸಿ ಕೊಂದು ಹಾಕಿರುವ ಹಿನ್ನೆಲೆಯಲ್ಲಿ ಆ ಭಾಗದಲ್ಲಿ ಹುಲಿಯ ಚಲನವಲನ ಕಂಡುಹಿಡಿಯಲು ಆರು ಟ್ರಾö್ಯಪ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಅಲ್ಲದೆ ಹಾಲುಗುಂದ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ, ಕಾಫಿ ತೋಟಗಳಲ್ಲಿ ಹಗಲಿರಳು ಕೂಂಬಿAಗ್ ನಡೆಸಲಾಗುವುದೆಂದು ಮಾಹಿತಿ ನೀಡಿದರು. ಗ್ರಾಮಸ್ಥರು ಹುಲಿಯ ಚಲನ ವಲನದ ಬಗ್ಗೆ ಜಾಗೃತರಾಗಿ ಎಚ್ಚರಿಕೆಯಿಂದ ಇರುವಂತೆ ಶಿವರಾಂ ಮನವಿ ಮಾಡಿದರು. - ವಾಸು