ಕಣಿವೆ, ನ. ೨೩: ಭವಿಷ್ಯದ ಭಾರತದ ನವಶಿಲ್ಪಿಗಳಾದ ಇಂದಿನ ವಿದ್ಯಾರ್ಥಿಗಳು ಕಲಿಕೆಯ ಅವಧಿಯಲ್ಲಿ ನಾಡಿನ ಸಂಸ್ಕೃತಿಗಳ ಜೊತೆಗೆ ಹನ್ನೆರಡನೇ ಶತಮಾನದ ವಚನಕಾರರ ಮೌಲ್ಯಗಳನ್ನು ಅರಿಯುವ ಮೂಲಕ ಸತ್ಪçಜೆಗಳಾಗಿ ಹೊರಹೊಮ್ಮಬೇಕೆಂದು ಕೊಡಗು ವಿಶ್ವವಿದ್ಯಾಲಯದ ಕುಲಸಚಿವೆ ಪ್ರೊ. ಭಾರತಿ ಹಿರೇಮಠ್ ಕರೆ ನೀಡಿದರು.
ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಬಸವನಹಳ್ಳಿಯ ಮೊರಾರ್ಜಿ ದೇಸಾಯಿ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ "ಶರಣರ ವಚನಗಳಲ್ಲಿ ಕಾಯಕ ಪ್ರಜ್ಞೆ" ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಅವಧಿಯಲ್ಲಿ ಎಲ್ಲಾ ಭಾಷೆಗಳ ಅರಿವಿರಬೇಕು. ಜೊತೆಗೆ ಸತ್ಯ ಶುದ್ಧ ಕಾಯಕ ಪ್ರಜ್ಞೆ ಜಾಗೃತವಾಗಿರಬೇಕು ಎಂದರು. ವಚನಗಳಲ್ಲಿ ಕಾಯಕ ಪ್ರಜ್ಞೆ ವಿಚಾರದ ಕುರಿತು ಉಪನ್ಯಾಸ ನೀಡಿದ ಕುಶಾಲನಗರದ ನಳಂದ ಗುರುಕುಲ ಕೋಚಿಂಗ್ ಸೆಂಟರ್ ಪ್ರಾಂಶುಪಾಲ ಕುಮಾರ್ ಚಾಮರಾಜನಗರ, ಇಂದಿನ ಯುವ ಜನಾಂಗ ಕಾಯಕದಲ್ಲಿ ತಲ್ಲೀನರಾಗಬೇಕು.
ಕಾಯಕದಿಂದಲೇ ಮಾನವ ಕಲ್ಯಾಣ. ಅದು ಯಾವುದೇ ಕಾಯಕವಿರಲೀ, ಕಾಯಕದ ಮೇಲೆ ಶ್ರದ್ಧೆ ಇರಬೇಕು ಎಂದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್. ಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಗೀತ ಶಿಕ್ಷಕ ಪುಟ್ಟರಾಜು ವಚನಗಳನ್ನು ಹಾಡಿದರು. ಮೊರಾರ್ಜಿ ದೇಸಾಯಿ ಪಿಯು ಕಾಲೇಜು ಉಪನ್ಯಾಸಕ ಚಿದಂಬರ, ಸತೀಶ್ ಕುಮಾರ್, ಶಿವಕುಮಾರ್, ಸ್ಪೂರ್ತಿ, ಸೋನಿಯಾ, ಕೆ.ಆರ್. ರಮೇಶ್, ಜಗದೀಶ್, ಮಹೇಶ್, ಪ್ರವೀಣ್, ರೇವಣ್ಣ ಇದ್ದರು. ವಿದ್ಯಾರ್ಥಿಗಳಿಂದ ವಚನಗಾಯನ ನಡೆಯಿತು.