ಸೋಮವಾರಪೇಟೆ, ನ. ೨೨: ಕೊಡಗು ಸೇರಿದಂತೆ ಮಲೆನಾಡು ಪ್ರದೇಶದ ರೈತಾಪಿ ವರ್ಗವನ್ನು ಕಾಡುತ್ತಿರುವ ಸಿ ಮತ್ತು ಡಿ ಲ್ಯಾಂಡ್ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಲಾಗುವುದು. ರೈತರು ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ ಎಂದು ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಕೇಂದ್ರ ಸಚಿವ, ರಾಜ್ಯದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅಭಯ ನೀಡಿದರು.
ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ, ರೈತ ಹೋರಾಟ ಸಮಿತಿ ಹಾಗೂ ಹರಪಳ್ಳಿ ರವೀಂದ್ರ ಅಭಿಮಾನಿಗಳ ಬಳಗದ ವತಿಯಿಂದ ಆಯೋಜಿಸಿದ್ದ ರೈತ ಸಮಾವೇಶ ಹಾಗೂ ಸಮಾಜ ಸೇವಕ ಒಕ್ಕಲಿಗ ನಾಯಕ ಹರಪಳ್ಳಿ ರವೀಂದ್ರ ಅವರ ಜೀವನ ಚರಿತ್ರೆ ಪುಸ್ತಕ ಲೋಕಾರ್ಪಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಲೆನಾಡು ಭಾಗದಲ್ಲಿ ಕಾಡುಗಳನ್ನು ಸಂರಕ್ಷಿಸಿ ಬೆಳೆಸಿದ್ದು ರೈತ ಕುಟುಂಬಗಳೇ ಹೊರತು; ಅರಣ್ಯ ಇಲಾಖೆಯಲ್ಲ. ಈ ಹಿಂದಿನ ಕೆಲವೊಂದು ತಪ್ಪು ನಿರ್ಧಾರ, ತೀರ್ಪು, ನಿರ್ಣಯಗಳಿಂದ ಸಮಸ್ಯೆ ಉದ್ಭವಿಸಿದೆ. ಅರಣ್ಯ ಕಾಯ್ದೆ ಬಂದಾಗ ಅಧಿಕಾರಿಗಳು ಸೂಕ್ತವಾಗಿ ಸ್ಥಳ ಪರಿಶೀಲನೆ ಮಾಡಿಲ್ಲ. ಸ್ಥಳೀಯ ಕೃಷಿ, ಜನಜೀವನವನ್ನು ಪರಿಗಣಿಸದೇ ಸರ್ಕಾರದ ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ನಕ್ಷೆ ತಯಾರಿಸಿ ಅನಾಹುತ ಮಾಡಿದ್ದಾರೆ. ಈ ಸಮಸ್ಯೆಗೆ ಕಳೆದ ೪೫ ವರ್ಷಗಳಿಂದ ಪರಿಹಾರ ಕಾಣಲು ಸಾಧ್ಯವಾಗಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಈ ಹಿಂದೆ ತಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಕೊಡಗಿನ ಶಾಸಕದ್ವಯರಾದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್ ಅವರುಗಳು ವಿಧಾನ ಸೌಧದಲ್ಲಿ ವಿಷಯ ಪ್ರಸ್ತಾಪಿಸಿದ್ದರು. ಬಿಜೆಪಿ ಜೊತೆ ಅಧಿಕಾರ ಮಾಡಿದಾಗ ಉನ್ನತ ಮಟ್ಟದ ಸಮಿತಿ ರಚನೆ ಮಾಡಿದ್ದೆವು. ಕಮಿಟಿ ಕೆಲಸ ಆರಂಭಿಸುವ ಮೊದಲೇ ಅಧಿಕಾರದಿಂದ ಇಳಿಯಬೇಕಾಯಿತು ಎಂದು ಸ್ಮರಿಸಿದರು.
ಕೇಂದ್ರ ಲೋಕಸಭಾ ಅಧಿವೇಶನ ಸಂದರ್ಭ ಕೊಡಗಿನ ರೈತ ಪ್ರತಿನಿಧಿಗಳ ನಿಯೋಗ ದೆಹಲಿಗೆ ಬಂದರೆ ಕೇಂದ್ರ ಸರ್ಕಾರದ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು, ಕೇಂದ್ರ ಪರಿಸರ ಖಾತೆ ಸಚಿವರೊಂದಿಗೆ ಸಭೆ ಏರ್ಪಡಿಸಿ ಸಮಗ್ರ ಚರ್ಚೆ ನಡೆಸಲಾಗುವುದು. ಈಗಾಗಲೇ ತಡವಾಗಿ ತಕರಾರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ದೆಹಲಿ ಮಟ್ಟದಲ್ಲಿ ಹಿರಿಯ ವಕೀಲರನ್ನು ನೇಮಿಸಿ ರೈತರ ಸಮಸ್ಯೆಯನ್ನು ನ್ಯಾಯಾಲಯದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
ಸಿ ಮತ್ತು ಡಿ ಲ್ಯಾಂಡ್ ಸಮಸ್ಯೆಗೆ ಪರಿಹಾರ ದೊರಕಲೇಬೇಕು. ರೈತ ಕುಟುಂಬಗಳನ್ನು ತಮ್ಮ ಜಮೀನಿನಿಂದ ಹೊರಹಾಕಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಈ ಹಿಂದಿನ ಸರ್ಕಾರಗಳು ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಿಲ್ಲ ಎಂದು ಬೇಸರ ಬೇಡ ಎಂದ ಕುಮಾರಸ್ವಾಮಿ ಅವರು, ಪ್ರಸ್ತುತ ಆಡಳಿತ ನಡೆಸುತ್ತಿರುವ ಸರ್ಕಾರದಲ್ಲಿ ಅಧಿಕಾರಿಗಳ ನಡವಳಿಕೆ ಹೇಗಿದೆ? ಎಂಬ ಬಗ್ಗೆ ಎಲ್ಲರಿಗೂ ಅರಿವಿದೆ. ಇವರ ನಡವಳಿಕೆಗಳನ್ನು ಬದಲಿಸುವ ಕಾಲ ಬರಲಿದೆ ಎಂದರು.
ಕೇAದ್ರ ಸರ್ಕಾರದ ಮೂಲಕ ರೈತರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇವೆ. ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ರೈತರ ಧ್ವನಿಯಾಗಿ ಕೆಲಸ ಮಾಡುತ್ತೇವೆ. ದೇಶದ ಉಳಿವು ರೈತರ ಕೈಯಲ್ಲಿದೆ. ರೈತ ಎಂದು ಹೇಳಿಕೊಳ್ಳಲು ಯಾವುದೇ ಅಂಜಿಕೆ ಬೇಡ. ರೈತರೆಲ್ಲರೂ ಸ್ವಾಭಿಮಾನಿಗಳಾಗಿದ್ದಾರೆ. ಭೂಮಿ ನಂಬಿ ಬದುಕುವ ರೈತರು ದೇಶಕ್ಕೆ ಅನ್ನ ನೀಡುವ ಬದ್ಧತೆ-ಕಳಕಳಿ ಹೊಂದಿದ್ದಾರೆ. ತಮ್ಮೆಲ್ಲರ ಬೇಡಿಕೆ ಈಡೇರಿಸಲು ತಾನು ಬದ್ಧನಾಗಿದ್ದು, ತನ್ನ ಮೇಲೆ ವಿಶ್ವಾಸವಿಡಿ ಎಂದ ಅವರು, ಕೊಡಗಿನ ಮೇಲೆ ತನಗೆ ವಿಶೇಷ ಪ್ರೀತಿ-ಕಾಳಜಿ ಇದೆ. ಕೊಡಗಿನಲ್ಲಿ ಬಡತನ ಇದ್ದರೂ ಕೊಡಗಿನವರ ಹೃದಯದಲ್ಲಿ ಬಡತನವಿಲ್ಲ. ಪ್ರಾಕೃತಿಕ ವಿಕೋಪ ಸಂದರ್ಭ ಮುಖ್ಯಮಂತ್ರಿಯಾಗಿ ತನ್ನ ಜವಾಬ್ದಾರಿ ನಿರ್ವಹಣೆ ಮಾಡಿದ್ದೇನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೈತ ಹೋರಾಟ ಸಮಿತಿ ಅಧ್ಯಕ್ಷ ಚಕ್ರವರ್ತಿ ಸುರೇಶ್ ಮಾತನಾಡಿ, ಕಳೆದ ೨ ವರ್ಷಗಳಿಂದ ಸಿ ಮತ್ತು ಡಿ ಲ್ಯಾಂಡ್ ಸಮಸ್ಯೆ ಬಗ್ಗೆ ಹೋರಾಟ ಮಾಡುತ್ತಿದ್ದೇವೆ. ೧೯೭೮ರಲ್ಲಿ ಸಿ ಮತ್ತು ಡಿ ಭೂಮಿಗೆ ೫೦ ಸಾವಿರ ಎಕರೆ ಗುರುತಿಸಲಾಗಿದೆ. ವ್ಯವಸಾಯಕ್ಕೆ ಯೋಗ್ಯವಲ್ಲದ ಭೂಮಿ ಗುರುತಿಸುವಂತೆ ೧೯೯೪ರಲ್ಲಿ ನೂತನ ಆದೇಶ ಬಂದ ಸಂದರ್ಭ ಜಿಲ್ಲೆಯ ಕಂದಾಯ ಇಲಾಖೆ ವೈಜ್ಞಾನಿಕವಾಗಿ ಗುರುತಿಸಿಲ್ಲ. ಕಚೇರಿಯಲ್ಲಿ ಕುಳಿತು ಪೈಸಾರಿ ಜಾಗವನ್ನು ಸಿ ಮತ್ತು ಡಿ ಮಾಡಿದ್ದಾರೆ. ಇಂತಹ ಜಾಗದಲ್ಲಿ ಬಡ ರೈತರು ಮನೆ, ಕೃಷಿ ಮಾಡಿಕೊಂಡಿದ್ದಾರೆ ಎಂದು ಕುಮಾರಸ್ವಾಮಿ ಅವರ ಗಮನ ಸೆಳೆದರು.
ಇಂತಹ ಜಾಗಕ್ಕೆ ಫಾರಂ ನಂಬರ್ ೫೦,೫೩,೫೭ರಡಿ ಅರ್ಜಿ ಸಲ್ಲಿಸಿದ್ದರೂ ದಾಖಲಾತಿ ಆಗುತ್ತಿಲ್ಲ. ಸರ್ಕಾರ ರಚಿಸಿದ ಎಸ್.ಐ.ಟಿ. ತನಿಖೆಯ ವರದಿ ೬ ತಿಂಗಳಲ್ಲಿ ನೀಡಬೇಕಿತ್ತು. ಈವರೆಗೆ ನೀಡಿಲ್ಲ. ತಾ. ೩೦ರೊಳಗೆ ಸಮಿತಿ ವರದಿ ನೀಡಬೇಕು. ವಿಧಾನಸಭಾ ಅಧಿವೇಶನದಲ್ಲಿ ರೈತ ಪರವಾಗಿ ನಿರ್ಣಯ ಕೈಗೊಂಡು ಕೇಂದ್ರಕ್ಕೆ ಕಳುಹಿಸಿಕೊಡಬೇಕು ಎಂದರು.
ಸೆಕ್ಷನ್-೪, ಸಿ ಮತ್ತು ಡಿ ಜಾಗ ಸಮಸ್ಯೆ, ಕಸ್ತೂರಿರಂಗನ್ ವರದಿ ವಿರೋಧಿ ಹೋರಾಟ ಮಾಡುತ್ತಿರುವ ರೈತ ಮುಖಂಡರನ್ನು ಸುಳ್ಳು ಮೊಕದ್ದಮೆ ದಾಖಲಿಸಿ ಹೋರಾಟದ ತೀವ್ರತೆಯನ್ನು ಕುಗ್ಗಿಸುವ ಯತ್ನ ನಡೆಸಲಾಗುತ್ತಿದೆ ಎಂದು ದೂರಿದರು.
ಮಾಜಿ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಮಾತನಾಡಿ, ಕೊಡಗಿನಲ್ಲಿ ೨೦೧೮ರಲ್ಲಿ ಉಂಟಾದ ಜಲಪ್ರಳಯ ಸಂದರ್ಭ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಹೆಚ್ಚಿನ ಸಹಕಾರ ನೀಡಿದ್ದಾರೆ. ಇದನ್ನು ಕೊಡಗು ಜಿಲ್ಲೆ ಎಂದಿಗೂ ಮರೆಯುವುದಿಲ್ಲ. ಇದರೊಂದಿಗೆ ಕುಶಾಲನಗರ ಹಾಗೂ ಪೊನ್ನಂಪೇಟೆ ತಾಲೂಕು ರಚನೆ ಮಾಡುವ ಮೂಲಕ ಭರವಸೆ ಈಡೇರಿಸಿದ್ದಾರೆ ಎಂದು ಅಭಿಪ್ರಾಯಿಸಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರೈತರ ಸಾಲವನ್ನು ರೂ.೫೦ ಸಾವಿರ ಮನ್ನಾ ಮಾಡಿದರೆ, ಕುಮಾರಸ್ವಾಮಿ ಅವರು ೧ ಲಕ್ಷ ರೂ. ವರೆಗೆ ಸಾಲ ಮನ್ನಾ ಮಾಡಿದ್ದಾರೆ ಎಂದು ಸ್ಮರಿಸಿದ ಅವರು, ಯಡವನಾಡು ಗ್ರಾಮದ ಸಮಸ್ಯೆಯನ್ನು ಪಿಟಿಷನ್ ಕಮಿಟಿಯಲ್ಲಿಟ್ಟು ವಿಲೇವಾರಿ ಮಾಡಿದ ನಂತರ ಸ್ಥಳೀಯರಿಗೆ ಪಟ್ಟೆ ಕೊಟ್ಟಿದ್ದೇವೆ. ಇದೀಗ ಸರ್ಕಾರ ವಾಪಸ್ ಪಡೆದಿದೆ. ಈಗಿನ ಸರ್ಕಾರದಿಂದ ರೈತರಿಗೆ ಸಮಸ್ಯೆ ನೀಡುವ ಹಲವಷ್ಟು ಕಾಯ್ದೆಗಳು ಬರುತ್ತಿವೆ ಎಂದರು.
ರೈತರಿಗೆ ಅರಣ್ಯ ಹಕ್ಕು ಸಮಿತಿಯ ಮೂಲಕವಾದರೂ ಪಟ್ಟೆ ನೀಡಬೇಕು. ನಾವುಗಳು ಅಧಿಕಾರದಲ್ಲಿದ್ದ ಸಂದರ್ಭ ಅರಣ್ಯ ಹಕ್ಕು ಸಮಿತಿ ಮುಖಾಂತರ ೩೫೦೦ ಮಂದಿಗೆ ಪಟ್ಟೆ ಕೊಟ್ಟಿದ್ದೇವೆ. ಸಿ ಮತ್ತು ಡಿ ಲ್ಯಾಂಡ್ನಲ್ಲಿ ೨೬೦೦ ಪಟ್ಟೆ ಕೊಟ್ಟಿದ್ದೇವೆ. ೯೪ ಸಿ ಮತ್ತು ೯೪ ಸಿ.ಸಿ ಅಡಯಲ್ಲಿ ೬ ಸಾವಿರ ಪಟ್ಟೆ ಕೊಟ್ಟಿದ್ದೇವೆ. ಇದೀಗ ಅಂತಹ ಜಾಗವನ್ನೂ ಸಹ ಅರಣ್ಯ ಎಂದು ಮಾಡಬಹದು. ಇಂತಹ ಕ್ರಮಗಳಿಗೆ ತಡೆಯೊಡ್ಡಿ, ಕೊಡಗಿನಲ್ಲಿ ನಕ್ಸಲ್ ಸಮಸ್ಯೆ ಬರದಂತೆ ಕ್ರಮ ವಹಿಸಬೇಕು ಎಂದರು.
ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ರೈತರನ್ನು ಕಾಡುತ್ತಿರುವ ಕಸ್ತೂರಿ ರಂಗನ್ ವರದಿ ೨೦೧೨ ರಿಂದಲೇ ಇದೆ. ಕೇರಳದ ಮಾದರಿ ಇಲ್ಲೂ ಕೂಡ ಮಾಡಬೇಕು. ಸಿ ಮತ್ತು ಡಿ ಲ್ಯಾಂಡ್ ಸಮಸ್ಯೆಗೆ ಅರಣ್ಯ ಇಲಾಖೆ ಕಾರಣ. ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿ ನ್ಯಾಯಾಧೀಶರಿಗೆ ಸಮಸ್ಯೆಯ ಬಗ್ಗೆ ಮನವರಿಕೆ ಮಾಡಬೇಕು ಎಂದರು.
ಒಕ್ಕಲಿಗರ ಸಂಘದ ಜಿಲ್ಲಾ ನಿರ್ದೇಶಕ ಹರಪಳ್ಳಿ ರವೀಂದ್ರ ಮಾತನಾಡಿ, ಯಾರೊಬ್ಬರೂ ಬಡವನಾಗಿ ಹುಟ್ಟುವುದು ತಪ್ಪಲ್ಲ; ಬಡವರಾಗಿಯೇ ಸಾಯುವುದು ತಪ್ಪು. ನಾವುಗಳು ಸಮಾಜದ ಭಾಗವಾಗಿ ಬದುಕಬೇಕು. ಸಿ ಮತ್ತು ಡಿ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಕುಮಾರಸ್ವಾಮಿ ಅವರು ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.
ವೇದಿಕೆಯಲ್ಲಿ ಮಾಜಿ ಶಾಸಕರುಗಳಾದ ಸಾರಾ ಮಹೇಶ್, ಪಿರಿಯಾಪಟ್ಟಣದ ಮಹದೇವ್, ಮಾಜಿ ಎಂಎಲ್ಸಿ ಎಸ್.ಜಿ. ಮೇದಪ್ಪ, ರಾಜ್ಯ ಒಕ್ಕಲಿಗರ ಸಂಘದ ಖಜಾಂಚಿ ರಘು ಗೌಡ, ತಾಲೂಕು ರೈತ ಸಂಘದ ಅಧ್ಯಕ್ಷ ಕೆ.ಎಂ. ದಿನೇಶ್, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಂ ಚಂಗಪ್ಪ, ಸಮಾಜ ಸೇವಕ ಸಂಕೇತ್ ಪೂವಯ್ಯ, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಹೂವಯ್ಯ ಮಾಸ್ಟರ್, ಮಲೆನಾಡು ಅಭಿವೃದ್ಧಿ ಸಮಿತಿ ಸದಸ್ಯ ಕೆ.ಎಂ. ಲೋಕೇಶ್, ಪ್ರಮುಖರಾದ ವಿ.ಪಿ. ಶಶಿಧರ್, ಸಿ.ಎಲ್ ವಿಶ್ವ, ತಾಲೂಕು ಜೆ.ಡಿ.ಎಸ್. ಅಧ್ಯಕ್ಷ ನಾಗರಾಜು, ಜೆಡಿಎಸ್ ಸಾಮಾಜಿಕ ಜಾಲತಾಣ ಸಂಚಾಲಕ ಚಂದನ್, ಹರಪಳ್ಳಿ ರವೀಂದ್ರ ಅಭಿಮಾನಿ ಬಳಗದ ಅಧ್ಯಕ್ಷ ಹೆಚ್.ಎ. ನಾಗರಾಜು, ಪುಸ್ತಕ ರಚನೆಕಾರ ಟಿ.ಜೆ. ಪ್ರವೀಣ್ ಕುಮಾರ್, ಜಿ.ವಿ. ರವಿಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವಿನೋದ್ ಮೂಡಗದ್ದೆ, ಆತ್ಮೀಯ, ಬಿ.ಜೆ. ದೀಪಕ್, ಕೂತಿ ದಿವಾಕರ್ ಸೇರಿದಂತೆ ರೈತ ಹೋರಾಟ ಸಮಿತಿಯ ಪದಾಧಿಕಾರಿಗಳು, ಹರಪಳ್ಳಿ ರವೀಂದ್ರ ಅಭಿಮಾನಿ ಬಳಗದ ಸದಸ್ಯರು ಕಾರ್ಯಕ್ರಮ ನಿರ್ವಹಿಸಿದರು.