ಸೋಮವಾರಪೇಟೆ, ನ. ೨೨: ಜೆಡಿಎಸ್ ಕೊಡಗು ಜಿಲ್ಲಾಧ್ಯಕ್ಷರಾಗಿ ಸೋಮವಾರಪೇಟೆಯ ಹೆಚ್.ಡಿ. ಪ್ರವೀಣ್ ನೇಮಕಗೊಂಡಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಪಕ್ಷದ ಜಿಲ್ಲಾ ಉಸ್ತುವಾರಿ ಸಾರಾ ಮಹೇಶ್, ಪಿರಿಯಾಪಟ್ಟಣದ ಮಾಜಿ ಶಾಸಕ ಮಹದೇವ್ ಸೇರಿದಂತೆ ಜಿಲ್ಲೆಯ ಜೆಡಿಎಸ್ ಮುಖಂಡರ ಸಮ್ಮುಖದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಸಾರಾ ಮಹೇಶ್ ಅವರು ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದರು.
ಪಟ್ಟಣದ ಅಟಲ್ ಜೀ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಪಕ್ಷಕ್ಕೆ ಜಿಲ್ಲಾಧ್ಯಕ್ಷರನ್ನು ಘೋಷಣೆ ಮಾಡುವಂತೆ ಕಾರ್ಯಕರ್ತರು ಒತ್ತಾಯಿಸಿದರು. ಆರಂಭದಲ್ಲಿ ಮಾತನಾಡಿದ ಸಾ.ರಾ. ಮಹೇಶ್, ಎನ್ಡಿಎ ಮೂಲಕ ಕೊಡಗಿನ ಎರಡೂ ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟು ಕೊಡುವ ಬಗ್ಗೆ ಕ್ರಮ ವಹಿಸುವಂತೆ ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡಿದರು. ಕಾರ್ಯಕರ್ತರು ಸಣ್ಣ ಪುಟ್ಟ ಸಮಸ್ಯೆಗಳನ್ನು ಬಿಡಬೇಕು. ಯಾರೇ ಪಕ್ಷದ ಅಧ್ಯಕ್ಷರಾದರೂ ‘ವಿಸಿಟಿಂಗ್ ಕಾರ್ಡ್’ ಅಧ್ಯಕ್ಷರಂತೆ ಇರಬಾರದು. ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆ ಇರುವವರು ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಯಾವುದೇ ಕಾರಣಕ್ಕೂ ಪಕ್ಷದ ಜವಾಬ್ದಾರಿ ಹೊರಬಾರದು. ಸ್ಥಳೀಯವಾಗಿ ಸಂಘಟನೆಗೆ ಸಮಸ್ಯೆಯಾಗಲಿದೆ. ಆಕಾಂಕ್ಷಿಗಳು ತಮ್ಮ ಅಭಿಪ್ರಾಯ ತಿಳಿಸುವಂತೆ ಹೇಳಿದರು.
ಹೆಚ್.ಡಿ. ಕುಮಾರಸ್ವಾಮಿ ಮಾತನಾಡಿ, ಪಕ್ಷದ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಕೇಂದ್ರ ಕಚೇರಿಯಿಂದಲೇ ತಡವಾಗಿದೆ. ಆದರೂ ಕಾರ್ಯಕರ್ತರು ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಸೋಮವಾರಪೇಟೆ ಹಾಗೂ ಕುಶಾಲನಗರ ಭಾಗದಲ್ಲಿ ಪಕ್ಷ ಗಟ್ಟಿಯಾಗಿದೆ. ಕಾರ್ಯಕರ್ತರ ದುಡಿಮೆ ದೊಡ್ಡಮಟ್ಟದಲ್ಲಿದೆ. ಕೆಲ ನಾಯಕರುಗಳು ಕಾರ್ಯಕರ್ತರ ಮೇಲಿನ ಅಪನಂಬಿಕೆ, ದೂಷಣೆ ಮಾಡಿ ಪಕ್ಷ ಬಿಟ್ಟಿದ್ದಾರೆ. ಕಳೆದ ಚುನಾವಣೆಯಲ್ಲೂ ಇಂತಹದೇ ಸಮಸ್ಯೆಯಾಗಿದೆ ಎಂದರು.
ಮುAದಿನ ದಿನಗಳಲ್ಲಿ ಪಕ್ಷದ ಸಂಘಟನೆ, ಮುಖಂಡರು ಹಾಗೂ ಕಾರ್ಯಕರ್ತರ ಸಮಸ್ಯೆಗಳನ್ನು ತಕ್ಷಣ ಅರಿತುಕೊಂಡು ಬಗೆಹರಿಸಲು ಸಾರಾ ಮಹೇಶ್ ಹಾಗೂ ಮಹದೇವ್ ಅವರುಗಳಿಗೆ ಜವಾಬ್ದಾರಿ ನೀಡಲಾಗುವುದು. ಅಧ್ಯಕ್ಷ, ಕಾರ್ಯಾಧ್ಯಕ್ಷ ಹಾಗೂ ಉಸ್ತುವಾರಿಗಳು ಕುಳಿತು ಚರ್ಚಿಸಿ ಪಕ್ಷಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಬೇಕು. ಕೊಡಗಿನ ಸಮಸ್ಯೆಗಳ ಬಗ್ಗೆ ಪಕ್ಷದ ಕಾರ್ಯಕರ್ತರು ಧ್ವನಿಯೆತ್ತಬೇಕು. ಜೆಡಿಎಸ್ ಸರ್ಕಾರದ ಕೊಡುಗೆಗಳನ್ನು ಜನತೆಗೆ ತಿಳಿಸಬೇಕು. ಜಿಲ್ಲಾಧ್ಯಕ್ಷರ ಆಯ್ಕೆಯನ್ನು ಇದೇ ಸಭೆಯಲ್ಲಿ ಅಂತಿಮಗೊಳಿಸಲಾಗುವುದು ಎಂದರು.
ಆರಂಭದಲ್ಲಿ ಸಿ.ಎಲ್. ವಿಶ್ವ, ಕಾರ್ಮಾಡು ಸುಬ್ಬಣ್ಣ, ಕಾಟ್ನಮನೆ ವಿಠಲ್ ಗೌಡ, ಹೊಸಬೀಡು ಹೂವಯ್ಯ ಅವರುಗಳು ತಾವು ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದೇವೆ ಎಂದರು.
ಈ ಬಗ್ಗೆ ಕೆಲ ಕಾಲ ಚರ್ಚೆಗಳು ನಡೆದು, ಒಂದು ಹಂತದಲ್ಲಿ ಪಕ್ಷದ ಜಿಲ್ಲಾಧ್ಯಕ್ಷರನ್ನಾಗಿ ಸಿ.ಎಲ್. ವಿಶ್ವ ಅವರ ಹೆಸರನ್ನು ಘೋಷಣೆ ಮಾಡಲಾಯಿತು. ಅಂತೆಯೇ ರಾಜ್ಯ ಕಾರ್ಯದರ್ಶಿ, ಪಕ್ಷದ ಜಿಲ್ಲಾ ಉಸ್ತುವಾರಿಯಾಗಿ ಕಾರ್ಮಾಡು ಸುಬ್ಬಣ್ಣ, ಜಿಲ್ಲಾ ಕಾರ್ಯದರ್ಶಿಯಾಗಿ ಹೆಚ್.ಡಿ. ಪ್ರವೀಣ್ ಅವರುಗಳ ಹೆಸರನ್ನು ಘೋಷಿಸಲಾಯಿತು. ಇದಾದ ಕೆಲ ನಿಮಿಷದಲ್ಲಿಯೇ ವಿಶ್ವ ಅವರನ್ನು ಅಧ್ಯಕ್ಷರನ್ನಾಗಿ ಘೋಷಿಸಿದ ಸಾ.ರಾ. ಮಹೇಶ್ ಅವರೇ ತಮ್ಮ ಘೋಷಣೆಯನ್ನು ಬದಲಾಯಿಸಿದರು. ವೇದಿಕೆಯಲ್ಲಿ ಏನಾಯಿತು ಎಂದು ತಿಳಿಯುವುದರೊಳಗೆ ವಿಶ್ವ ಅವರು ಮೈಕ್ ಪಡೆದು, ತಾನು ಕಾರ್ಯಾಧ್ಯಕ್ಷನಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಪ್ರವೀಣ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದರೆ ತನ್ನ ವಿರೋಧವಿಲ್ಲ ಎಂದು ಮನದಲ್ಲೇ ನೋವನ್ನು ನುಂಗಿಕೊAಡು ಘೋಷಿಸಿದರು.
ಈ ಸಂದರ್ಭ ಸಭೆಯಲ್ಲಿ ಭಾರೀ ಗೊಂದಲ ಏರ್ಪಟ್ಟಿತು. ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಕಾಟ್ನಮನೆ ವಿಠಲ್ ಗೌಡ ಅವರು, ವಿಶ್ವ ಅವರು ಅಧ್ಯಕ್ಷರಾದರೆ ನಮ್ಮ ಅಭ್ಯಂತರವಿಲ್ಲ. ಆದರೆ ಪ್ರವೀಣ್ ಅಧ್ಯಕ್ಷರಾಗುವುದು ಬೇಡ. ಈ ಘೋಷಣೆಯನ್ನೇ ಅಂತಿಮ ಮಾಡಿದರೆ ನಾವುಗಳು ಪಕ್ಷದಲ್ಲಿ ಇರುವುದಿಲ್ಲ. ಕುಮಾರಸ್ವಾಮಿ ಸೇವಾ ಟ್ರಸ್ಟ್ ಸ್ಥಾಪಿಸಿ ಸಮಾಜಮುಖಿ ಕೆಲಸ ಮಾಡುತ್ತೇವೆ. ಗುಂಪುಗಾರಿಕೆ ಮಾಡುವವರು ಪಕ್ಷದ ಅಧ್ಯಕ್ಷರಾಗುವುದು ಬೇಡ ಎಂದರು.
ಈ ಸಂದರ್ಭ ಸಭೆಯಲ್ಲಿ ಗದ್ದಲ ಇನ್ನಷ್ಟು ಜೋರಾಯಿತು. ಸ್ವತಃ ಕುಮಾರಸ್ವಾಮಿ ಅವರೇ ಮಧ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸುವ ಪ್ರಯತ್ನ ಮಾಡಿದರು. ಅಂತಿಮವಾಗಿ ಪಕ್ಷದ ಜಿಲ್ಲಾಧ್ಯಕ್ಷರನ್ನಾಗಿ ಹೆಚ್.ಡಿ. ಪ್ರವೀಣ್, ಕಾರ್ಯಾಧ್ಯಕ್ಷರಾಗಿ ಸಿ.ಎಲ್. ವಿಶ್ವ ಹಾಗೂ ರಾಜ್ಯ ಕಾರ್ಯದರ್ಶಿ ಮತ್ತು ಜಿಲ್ಲಾ ಉಸ್ತುವಾರಿಯಾಗಿ ಕಾರ್ಮಾಡು ಸುಬ್ಬಣ್ಣ ಅವರನ್ನು ಆಯ್ಕೆ ಮಾಡಲಾಯಿತು.