ಮಡಿಕೇರಿ, ನ. ೨೧: ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹೊಣೆಗಾರಿಕೆ, ಕಾನೂನು ಪಾಲನೆಯ ಜವಾಬ್ದಾರಿ, ಅಪರಾಧಗಳ ನಿಯಂತ್ರಣ ಸೇರಿದಂತೆ ಹತ್ತು ಹಲವು ಕರ್ತವ್ಯಗಳ ಒತ್ತಡದ ನಡುವೆಯೇ ಕಾರ್ಯನಿರ್ವಹಿಸುವ ಜಿಲ್ಲಾ ಪೊಲೀಸರು ಇಂದು ತಮ್ಮೆಲ್ಲಾ ಕೆಲಸದ ಒತ್ತಡವನ್ನು ಬದಿಗಿಟ್ಟು ಕ್ರೀಡಾ ಸಂಭ್ರಮದಲ್ಲಿ ಮಿಂದೆದ್ದರು.
ಸಾಮಾನ್ಯವಾಗಿ ಜನರ ಸುರಕ್ಷತೆಗಾಗಿ ಹಗಲಿರುಳು ಶ್ರಮಿಸುವ ಪೊಲೀಸ್ ಸಿಬ್ಬಂದಿ, ಇಂದು ತಮ್ಮ ದೈನಂದಿನ ಕರ್ತವ್ಯದ ಜಂಜಾಟದಿAದ ತುಸು ವಿರಾಮ ಪಡೆದು ಕ್ರೀಡಾಂಗಣದಲ್ಲಿ ಒಂದೆಡೆ ಸೇರಿದರು ಗಂಭೀರತೆಯಿAದ ಹೊರಬಂದು ಕ್ರೀಡಾಪಟುಗಳಾಗಿ ಮೈದಾನಕ್ಕಿಳಿದ ಸಿಬ್ಬಂದಿಯ ಉತ್ಸಾಹ, ಚೈತನ್ಯ ಮತ್ತು ಕ್ರೀಡಾಸ್ಫೂರ್ತಿ ಗಮನ ಸೆಳೆಯಿತು.
ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡ ಪೊಲೀಸರು ಗೆಲುವಿಗಾಗಿ ಪೈಪೋಟಿ ನಡೆಸಿದರು. ಕ್ರೀಡಾಂಗಣದಲ್ಲಿ ತಮ್ಮ ಕ್ರೀಡಾ ಪ್ರತಿಭೆ ಹಾಗೂ ಉತ್ಸಾಹವನ್ನು ಅನಾವರಣಗೊಳಿಸಿದರು.
ಡಿಎಆರ್, ಮಡಿಕೇರಿ, ಸೋಮವಾರಪೇಟೆ, ವೀರಾಜಪೇಟೆ ಉಪವಿಭಾಗ, ವಿಶೇಷ ಘಟಕ ಹಾಗೂ ಮಹಿಳಾ ಪೊಲೀಸ್ ತಂಡಗಳು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿವೆ. ಮೊದಲು ಮೈದಾನದಲ್ಲಿ ತಂಡವಾಗಿ ನಿಂತು ತಂಡಗಳ ಆಟಗಾರರು ಕ್ರೀಡಾ ಪ್ರತಿಜ್ಞೆ ಸ್ವೀಕರಿಸಿದರು.
ಬಳಿಕ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಸೇರಿದಂತೆ ಗಣ್ಯರು ಪಾರಿವಾಳವನ್ನು ಹಾರಿಬಿಡುವ ಮೂಲಕ ಈ ವರ್ಷದ ಕ್ರೀಡಾಕೂಟಕ್ಕೆ ವಿಧ್ಯುಕ್ತ ಚಾಲನೆ ನೀಡಿದರು. ವಾರ್ಷಿಕ ಕ್ರೀಡಾಕೂಟದ ಕ್ರೀಡಾ ಜ್ಯೋತಿಯನ್ನು ಕಳೆದ ವರ್ಷದ ವೈಯಕ್ತಿಕ ಚಾಂಪಿಯನ್ನು ಹೆಚ್.ಎಸ್. ಸಂಜು ಮೈದಾನಕ್ಕೆ ತಂದರು.
ಬಳಿಕ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಮಾತನಾಡಿ, ಪೊಲೀಸ್ ಇಲಾಖೆ ಅತ್ಯಂತ ಮಹತ್ವದ ಜವಾಬ್ದಾರಿಯನ್ನು ಹೊಂದಿರುವ ಇಲಾಖೆಯಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು, ಅಪರಾಧ ಪ್ರಕರಣಗಳನ್ನು ತಡೆಗಟ್ಟುವುದು, ಸಂಕಷ್ಟಕ್ಕೊಳಗಾದವರಿಗೆ ನ್ಯಾಯ ದೊರಕಿಸಿಕೊಡುವುದು ಹಾಗೂ ಸಾರ್ವಜನಿಕರ ಕುಂದುಕೊರತೆಗಳಿಗೆ ಸ್ಪಂದಿಸಿ ಪರಿಹಾರ ಒದಗಿಸುವ ಮಹತ್ತರ ಕಾರ್ಯವನ್ನು ಪೊಲೀಸರು ನಿರ್ವಹಿಸುತ್ತಿದ್ದಾರೆ. ಈ ಸಂದರ್ಭ ಪೊಲೀಸರು ಹಲವಾರು ಸವಾಲುಗಳು, ಕ್ಲಿಷ್ಟಕರ ಸನ್ನಿವೇಶಗಳು ಹಾಗೂ ತೀವ್ರವಾದ ವೃತ್ತಿ ಒತ್ತಡಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಗಳಲ್ಲಿಯೂ ನಿರಂತರವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಯ ಸೇವೆ ಶ್ಲಾಘನೀಯ ಎಂದರು.
ಪೊಲೀಸರು ತಮ್ಮ ವೃತ್ತಿಯಲ್ಲಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢರಾಗಿರುವುದು ಅತ್ಯಗತ್ಯ. ೪ನಾಲ್ಕನೇ ಪುಟಕ್ಕೆ
ಈ ನಿಟ್ಟಿನಲ್ಲಿ ಕ್ರೀಡೆ ಅವರ ಜೀವನದ ಅವಿಭಾಜ್ಯ ಅಂಗವಾಗಬೇಕು. ಪೊಲೀಸ್ ಸಿಬ್ಬಂದಿಗೆ ಕ್ರೀಡೆ ಅತ್ಯಂತ ಅವಶ್ಯಕವಾಗಿದ್ದು, ಇದು ದೈಹಿಕ ಸಾಮರ್ಥ್ಯ ಹೆಚ್ಚಿಸುವುದರ ಜೊತೆಗೆ ಮಾನಸಿಕ ಉಲ್ಲಾಸ ಮತ್ತು ನಾಯಕತ್ವ ಗುಣಗಳನ್ನು ಬೆಳೆಸಲು ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಕ್ರೀಡೆಯಲ್ಲಿ ಸೋಲು - ಗೆಲುವು ಸಹಜ. ಆದರೆ ಫಲಿತಾಂಶಕ್ಕಿAತ ಸ್ಪರ್ಧೆಯಲ್ಲಿ ಭಾಗವಹಿಸುವುದು ಮತ್ತು ಕ್ರೀಡಾಸ್ಫೂರ್ತಿಯಿಂದ ಆಟವಾಡುವುದು ಮುಖ್ಯ. ನಿರಂತರ ಕರ್ತವ್ಯ ಹಾಗೂ ವೃತ್ತಿಪರ ಒತ್ತಡಗಳಿಂದ ಹೊರಬಂದು ಸಹೋದ್ಯೋಗಿಗಳೊಂದಿಗೆ ಸಂತಸದ ಕ್ಷಣಗಳನ್ನು ಕಳೆಯಲು ಇಂತಹ ಕ್ರೀಡಾಕೂಟಗಳು ಉತ್ತಮ ವೇದಿಕೆಯಾಗಿವೆ. ಪೊಲೀಸ್ ಸಿಬ್ಬಂದಿಯ ಮಾನಸಿಕ ಆರೋಗ್ಯ ಮತ್ತು ದೈಹಿಕ ಕ್ಷಮತೆ ಕಾಪಾಡುವ ದೃಷ್ಟಿಯಿಂದ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ವಾರ್ಷಿಕ ಕ್ರೀಡಾಕೂಟದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಕರ್ತವ್ಯದ ಒತ್ತಡದಿಂದ ಹೊರಬಂದು ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಲು ಕ್ರೀಡೆ ಸಹಕಾರಿಯಾಗಿದೆ. ಸಿಬ್ಬಂದಿಗೆ ಉತ್ತೇಜನ ನೀಡುವ ಉದ್ದೇಶದಿಂದ ಪ್ರತಿವರ್ಷ ಜಿಲ್ಲಾ, ವಲಯ ಹಾಗೂ ರಾಜ್ಯ ಮಟ್ಟದಲ್ಲಿ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಆಯೋಜಿಸಲಾಗುತ್ತದೆ ಎಂದರು.
ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿನೇಶ್ ಕುಮಾರ್ ಮೀನಾ ಉಪಸ್ಥಿತರಿದ್ದರು. ಎಸ್ಪಿ ಬಿಂದುಮಣಿ ಸ್ವಾಗತಿಸಿದರು. ವೀರಾಜಪೇಟೆ ಡಿವೈಎಸ್ಪಿ ಮಹೇಶ್ ವಂದಿಸಿದರು.