ವೀರಾಜಪೇಟೆ, ನ. ೧೯: ಪಟ್ಟಣದ ವ್ಯಾಪ್ತಿಯಲ್ಲಿ ಕೆಲವರ ಸ್ವಾಧೀನದಲ್ಲಿರುವ ಖಾಸಗಿ ಆಸ್ತಿಯನ್ನು ಸರ್ಕಾರಿ ಹಾಗೂ ಅರಣ್ಯ ಜಾಗವೆಂದು ಇಬ್ಬರು ಸಾಮಾಜಿಕ ಕಾರ್ಯಕರ್ತರು ಬೆಂಗಳೂರಿನ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿರುವುದನ್ನು ವಿರೋಧಿಸಿ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ವೀರಾಜಪೇಟೆ ತಹಶೀಲ್ದಾರ್ ಪ್ರವೀಣ್ ಕುಮಾರ್ ನೇತೃತ್ವದಲ್ಲಿ ತಾಲೂಕು ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕ ಸಭೆ ನಡೆಯಿತು.
ವೀರಾಜಪೇಟೆ ಪುರಸಭೆ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗ, ಕೆರೆ, ತೋಡು, ರಾಜಕಾಲುವೆ ಹಾಗೂ ಪೈಸಾರಿ ಜಾಗಗಳ ಒತ್ತುವರಿ ಆರೋಪಗಳಿಗೆ ಸಂಬAಧಿಸಿದAತೆ ಎಂ.ಎಸ್. ಕಾಳಯ್ಯ ಹಾಗೂ ಮದನ್ ವಿ.ಟಿ. ಎಂಬವರು ಬೆಂಗಳೂರಿನ ಭೂಕಬಳಿಕೆ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದು, ಅನೇಕರಿಗೆ ನೋಟೀಸ್ ಜಾರಿಯಾಗಿದೆ. ಇದರಿಂದ ವಿನಾಕಾರಣ ಬೆಂಗಳೂರಿಗೆ ಅಲೆದಾಡುವ, ಮಾನಸಿಕ ಕಿರುಕುಳ ಅನುಭವಿಸುವ ಹಾಗೂ ಕೆಲವರನ್ನು ಬ್ಲಾಕ್ಮೇಲ್ ಮಾಡುವ ಪರಿಸ್ಥಿತಿ ಎದುರಾಗಿದೆ ಎಂದು ಆರೋಪಿಸಿ ನಗರದ ಏಳು ಮಂದಿ ಆಸ್ತಿ ಮಾಲೀಕರಾದ ಮಾಜಿ ಪುರಸಭಾ ಸದಸ್ಯ ಎಸ್.ಎಚ್. ಮತಿನ್, ಕೆ.ಸಿ. ಶಬರೀಶ್, ಎಂ.ಕೆ. ಚಿತ್ರಬಾನು, ಎಂ.ಡಿ. ಚಂದ್ರರಾವ್, ಮೋಹನ್ ರೈ, ವಿನೋದ್ ತರಮಲ್ ಹಾಗೂ ಪಿ.ಜೆ. ವಿಶ್ವನಾಥ್ ತಹಶೀಲ್ದಾರರಿಗೆ ತಕರಾರು ಅರ್ಜಿ ಸಲ್ಲಿಸಿ ಈ ಕುರಿತು ಮಾತನಾಡಿದರು.
ಬೇಟೋಳಿ, ಆರ್ಜಿ, ಅಂಬಟ್ಟಿ, ಮಗ್ಗುಲ ಹಾಗೂ ಕುಕ್ಲೂರು ಗ್ರಾಮಗಳ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗ ಕಬಳಿಸಿರುವುದಾಗಿ ಮಾಡಿರುವ ಆರೋಪಗಳು ಸಂಪೂರ್ಣ ಆಧಾರರಹಿತವಾಗಿವೆ ಎಂದು ಅರ್ಜಿದಾರರು ದೂರಿದರು. ವಿರಾಜಪೇಟೆ ಪಟ್ಟಣ ಪಂಚಾಯಿತಿ, ಮಂಡಲ ಪಂಚಾಯಿತಿ ಹಾಗೂ ನಂತರ ಪುರಸಭೆಯಾಗಿ ಪರಿವರ್ತನೆಯಾದ ಸಂದರ್ಭ ಪಟ್ಟಣದ ನೆರೆಯ ಗ್ರಾಮ ಪಂಚಾಯಿತಿಗಳ ಹಲವು ಪ್ರದೇಶಗಳು ಪಟ್ಟಣದ ವ್ಯಾಪ್ತಿಗೆ ಸೇರ್ಪಡೆಯಾಗಿವೆ. ಈ ಕುರಿತು ಸರ್ಕಾರದ ವಿವಿಧ ಅಧಿಸೂಚನೆಗಳು ಹಾಗೂ ಪಟ್ಟಣ ಪಂಚಾಯಿತಿಯಿAದ ನೀಡಲಾದ ದೃಢೀಕರಣ ಪತ್ರಗಳಿದ್ದು, ನಿಯಮದಂತೆ ಫಾರಂ-೩ ಮತ್ತು ಜಿಪಿಎಸ್ ಆಗಿದೆ. ತಲೆತಲಾಂತರದಿAದ ಜನತೆ ಈ ಜಾಗದ ಮಾಲೀಕರಾಗಿದ್ದಾರೆ. ಆದರೆ, ಸರ್ಕಾರದ ಅಧಿಸೂಚನೆಗಳ ಪ್ರಕಾರ ಪಟ್ಟಣದ ವ್ಯಾಪ್ತಿಗೆ ಸೇರ್ಪಡೆಯಾದ ಕೆಲವು ಪ್ರದೇಶಗಳ ಆಸ್ತಿ ವಿವರಗಳು ಕಂದಾಯ ಇಲಾಖೆಯ ನಕ್ಷೆಗಳಲ್ಲಿ ಸಮರ್ಪಕವಾಗಿ ಪರಿಷ್ಕರಣೆಯಾಗದಿರುವುದೇ ಈ ಗೊಂದಲಕ್ಕೆ ಕಾರಣವಾಗಿದೆ ಎಂದು ಸಭೆ ಯಲ್ಲಿ ಅಸಮಾಧಾನ ವ್ಯಕ್ತಪಡಿಸಲಾಯಿತು.
ತಹಶೀಲ್ದಾರ್ ಸ್ಪಷ್ಟನೆ
ಸಭೆಯಲ್ಲಿ ಮಾತನಾಡಿದ ತಹಶೀಲ್ದಾರ್ ಪ್ರವೀಣ್ ಕುಮಾರ್, “ಬೆಂಗಳೂರಿನ ಭೂ ಕಬಳಿಕೆ ನ್ಯಾಯಾಲಯದಲ್ಲಿ ನೇರವಾಗಿ ದೂರು ದಾಖಲಿಸಿರುವುದು ಮೊದಲು ನಮ್ಮ ಗಮನಕ್ಕೆ ಬಂದಿರಲಿಲ್ಲ. ನ್ಯಾಯಾಲಯ ನಮ್ಮನ್ನು ಮೂರನೇ ಪಾರ್ಟಿಯಾಗಿ ಪರಿಗಣಿಸಿ ನೋಟಿಸ್ ನೀಡಿದಾಗ ವಿಚಾರ ತಿಳಿಯಿತು. ಇನ್ನು ದಾಖಲೆ ನೀಡುವ ವಿಚಾರದಲ್ಲಿ ನಾವು ಮಾಹಿತಿ ಹಕ್ಕು ನಿಯಮದಂತೆ ದಾಖಲೆ ನೀಡಲೇಬೇಕಾಗುತ್ತದೆ. ಕಂದಾಯ ಇಲಾಖೆಯಲ್ಲಿದ್ದ ಭೂ ದಾಖಲೆಗಳನ್ನು ಕಾಲಕಾಲಕ್ಕೆ ಪಟ್ಟಣ ಪಂಚಾಯಿತಿ ಮತ್ತು ಪುರಸಭೆಗೆ ನಿಯಮದಂತೆ ವರ್ಗಾಯಿಸಲಾಗುತ್ತಿದೆ. ನಾವು ಪ್ರಕರಣದಲ್ಲಿ ಪಾರ್ಟಿಗಳಾಗಿರುವುದರಿಂದ ಯಾರ ಮೇಲೆ ಪ್ರಕರಣವಿದೆಯೋ ಅವರ ಜಾಗವನ್ನು ನಿಖರವಾಗಿ ಸರ್ವೆ ನಡೆಸಿ ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕಿದೆ. ಸದ್ಯ ೩೪ ಎಕರೆ ಅನುಸೂಚಿತ ಆಸ್ತಿಯಲ್ಲಿ ಮಾತ್ರ ಗೊಂದಲ ಉಂಟಾಗಿದ್ದು, ಏನೇ ಇದ್ದರೂ ಈ ಪ್ರಕರಣಗಳನ್ನು ನ್ಯಾಯಾಲಯದಲ್ಲೇ ಸೂಕ್ತ ದಾಖಲೆಗಳೊಂದಿಗೆ ಇತ್ಯರ್ಥಪಡಿಸಿಕೊಳ್ಳಬೇಕಿದೆ,” ಎಂದರು.
ಸಭೆಯಲ್ಲಿ ಪುರಸಭಾ ಮಾಜಿ ಸದಸ್ಯರಾದ ಮಹಮ್ಮದ್ ರಾಫಿ, ಪುರಸಭೆ ಮಾಜಿ ಅಧ್ಯಕ್ಷೆ ಎಂ.ಕೆ. ದೇಚಮ್ಮ, ವೀರಾಜಪೇಟೆ ತಾಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಆರ್.ಕೆ. ಸಲಾಂ, ನಗರ ಕಾಂಗ್ರೆಸ್ ಅಧ್ಯಕ್ಷ ಮಾಳೇಟಿರ ಬೋಪಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ ಇತರರು ಮಾತನಾಡಿದರು.
ಈ ಸಂದರ್ಭ ಜೋಕಿಂ ರೋಡ್ರಿಗಸ್, ಕಂದಾಯ ಪರಿವೀಕ್ಷಕ ಹರೀಶ್ ಸೇರಿದಂತೆ ೫೦ಕ್ಕೂ ಅಧಿಕ ಸಾರ್ವಜನಿಕರು ಉಪಸ್ಥಿತರಿದ್ದರು.