ಸಿದ್ದಾಪುರ, ನ. ೧೯: ಸಿದ್ದಾಪುರ ಸಮೀಪದ ಅವರೆಗುಂದ ಭಾಗದಲ್ಲಿ ಶಾಸಕರ ವಿಶೇಷ ಅನುದಾನದಡಿಯಲ್ಲಿ ನಿರ್ಮಾಣಗೊಂಡ ರೂ. ೫೦ ಲಕ್ಷ ವೆಚ್ಚದ ಕಾಂಕ್ರಿಟ್ ರಸ್ತೆಯನ್ನು ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಅವರೆಗುಂದ ಭಾಗದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲಾಗುವುದೆಂದು ಭರವಸೆ ನೀಡಿದರು.
ಇದೇ ಸಂದರ್ಭ ಅವರೆಗುಂದ - ಬಸವನಹಳ್ಳಿ ಭಾಗದ ನಿವಾಸಿಗಳು ಪೊನ್ನಣ್ಣ ಹಾಗೂ ವೀರಾಜಪೇಟೆ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜಿ ಪೂಣಚ್ಚ, ಸಿದ್ದಾಪುರ ವಲಯ ಕಾಂಗ್ರೆಸ್ ಅಧ್ಯಕ್ಷ ಎಸ್.ಬಿ. ಪ್ರತೀಶ್ ಅವರನ್ನು ಸನ್ಮಾನಿಸಿ, ಗೌರವಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಹನೀಫ್, ಕಾವೇರಿ ಜಲಾನಯನ ಮಂಡಳಿಯ ನಿರ್ದೇಶಕ ಸೂರಜ್ ಹೊಸೂರು, ವೀರಾಜಪೇಟೆ ತಾಲೂಕು ಗ್ಯಾರಂಟಿ ಯೋಜನೆಯ ಅಧ್ಯಕ್ಷ ಜಾನ್ಸನ್, ಪಂಚಾಯಿತಿ ಮಾಜಿ ಸದಸ್ಯ ಎಂ.ಎಸ್. ವೆಂಕಟೇಶ್, ಕಾಂಗ್ರೆಸ್ ಪಕ್ಷದ ವಕ್ತಾರ ತೆನ್ನೀರ ಮೈನಾ, ಪ್ರಮುಖರಾದ ರಫೀಕ್, ಅಪ್ರು ರವೀಂದ್ರ, ವಿ.ಕೆ. ಬಶೀರ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರುಗಳು ಇನ್ನಿತರರು ಹಾಜರಿದ್ದರು.