ಚೆಯ್ಯಂಡಾಣೆ, ನ. ೧೯: ಜೀವನದ ಸಂಧ್ಯಾಕಾಲದಲ್ಲಿ ಪ್ರೀತಿ, ಆರೈಕೆ ಹಾಗೂ ನೆಮ್ಮದಿಯ ಬದುಕಿನ ನಿರೀಕ್ಷೆಯಲ್ಲಿರುವ ಹಿರಿಯ ಜೀವಿಗಳಿಗೆ ವೀರಾಜಪೇಟೆಯ ಶ್ರೀ ಶಕ್ತಿ ವೃದ್ಧಾಶ್ರಮ ಆಸರೆಯಾಗಿದೆ.
ವೃದ್ಧಾಪ್ಯ ಎನ್ನುವುದು ಪ್ರತಿಯೊಬ್ಬರ ಬದುಕಿನ ಸಹಜ ಹಂತ. ಈ ಹಂತದಲ್ಲಿ ಹಿರಿಯರಿಗೆ ಕುಟುಂಬದ ಪ್ರೀತಿ, ಕಾಳಜಿ ಮತ್ತು ಮಾನವೀಯ ಆಸರೆ ಅತ್ಯಂತ ಅಗತ್ಯ. ಆದರೆ ವಿವಿಧ ಕಾರಣಗಳಿಂದಾಗಿ ಕುಟುಂಬದವರಿAದ ದೂರವಾಗಿ ಅಥವಾ ಸೂಕ್ತ ಆರೈಕೆಯ ಕೊರತೆಯಿಂದ ಬದುಕು ಸಾಗಿಸುವ ಅನೇಕ ಹಿರಿಯರಿಗೆ ವೃದ್ಧಾಶ್ರಮಗಳು ಆಶ್ರಯ ತಾಣಗಳಾಗಿವೆ. ಇಂತಹ ಹಿರಿಯ ಜೀವಿಗಳಿಗೆ ನೆಮ್ಮದಿಯ ಬದುಕು ಕಲ್ಪಿಸುವ ಉದ್ದೇಶದಿಂದ ಶ್ರೀ ಶಕ್ತಿ ವೃದ್ಧಾಶ್ರಮ ಕಳೆದ ಮೂರು ವರ್ಷಗಳಿಂದ ವೀರಾಜಪೇಟೆಯಲ್ಲಿ ಸೇವಾ ಕಾರ್ಯ ನಡೆಸುತ್ತಿದೆ. ದಾವಣಗೆರೆ ಜಿಲ್ಲೆಯ ಡಾ. ಶಶಿಕುಮಾರ್ ಅವರು ನಡೆಸುತ್ತಿರುವ ಈ ವೃದ್ಧಾಶ್ರಮದಲ್ಲಿ ಪ್ರಸ್ತುತ ಒಟ್ಟು ೨೫ ಮಂದಿ ಹಿರಿಯ ನಾಗರಿಕರು ಆಶ್ರಯ ಪಡೆದುಕೊಂಡಿದ್ದಾರೆ. ಇವರಲ್ಲಿ ೧೩ ಮಂದಿ ಪುರುಷರು ಹಾಗೂ ೧೨ ಮಂದಿ ಮಹಿಳೆಯರಾಗಿದ್ದಾರೆ. ವಿವಿಧ ಪರಿಸ್ಥಿತಿಗಳಿಂದಾಗಿ ಆಶ್ರಮದ ಆಶ್ರಯ ಪಡೆದಿರುವ ಈ ಹಿರಿಯರಿಗೆ ಅಗತ್ಯವಾದ ವಸತಿ, ಆಹಾರ ಹಾಗೂ ದೈನಂದಿನ ಆರೈಕೆಯ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ದಿನವೊಂದಕ್ಕೆ ರೂ.೧೦ ಸಾವಿರಕ್ಕೂ ಅಧಿಕ ವೆಚ:
೨೫ ಮಂದಿ ಹಿರಿಯರ ದೈನಂದಿನ ಅಗತ್ಯಗಳನ್ನು ಪೂರೈಸುವುದು ಸುಲಭದ ಕೆಲಸವಲ್ಲ. ಆಹಾರ, ವಸತಿ, ಆರೋಗ್ಯ ಸೇರಿದಂತೆ ಆಶ್ರಮದ ವಿವಿಧ ನಿರ್ವಹಣಾ ಕಾರ್ಯಗಳಿಗೆ ಪ್ರತಿದಿನ ರೂ.೧೦ ಸಾವಿರಕ್ಕೂ ಅಧಿಕ ಹಣ ವೆಚ್ಚವಾಗುತ್ತಿದೆ. ಹೀಗಾಗಿ ತಿಂಗಳ ನಿರ್ವಹಣಾ ವೆಚ್ಚವೂ ಗಣನೀಯ ಪ್ರಮಾಣದಲ್ಲಿದ್ದು, ಆಶ್ರಮವನ್ನು ನಿರಂತರವಾಗಿ ಮುನ್ನಡೆಸಲು ಆರ್ಥಿಕ ಸಹಕಾರದ ಅಗತ್ಯ ಹೆಚ್ಚಾಗಿದೆ.
ಆಶ್ರಮದ ದೈನಂದಿನ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ನಾಲ್ವರು ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಆಶ್ರಮದ ವ್ಯವಸ್ಥಾಪಕರಾಗಿ ಹನುಮಂತ ಅವರು ಉಸ್ತುವಾರಿ ವಹಿಸಿಕೊಂಡಿದ್ದು, ಆಶ್ರಮದ ನಿರ್ವಹಣೆ ಹಾಗೂ ಹಿರಿಯರ ಆರೈಕೆಯ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದಾರೆ.
ಒಂದು ಆಶ್ರಮವನ್ನು ಆರಂಭಿಸುವುದಕ್ಕಿAತ ಅದನ್ನು ನಿರಂತರವಾಗಿ ಮುನ್ನಡೆಸುವುದು ದೊಡ್ಡ ಸವಾಲಾಗಿದೆ. ಅದರಲ್ಲೂ ೨೫ ಮಂದಿ ಹಿರಿಯರ ದೈನಂದಿನ ಅಗತ್ಯಗಳನ್ನು ಪೂರೈಸಲು ನಿರಂತರ ಹಣಕಾಸಿನ ನೆರವು ಬೇಕಾಗುತ್ತದೆ. ಸಾರ್ವಜನಿಕರ ಸಹಕಾರವಿಲ್ಲದೆ ಇಂತಹ ಸೇವಾ ಸಂಸ್ಥೆಗಳನ್ನು ಮುನ್ನಡೆಸುವುದು ಕಷ್ಟಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಶ್ರೀ ಶಕ್ತಿ ವೃದ್ಧಾಶ್ರಮಕ್ಕೆ ದಾನಿಗಳು, ಸಂಘ-ಸAಸ್ಥೆಗಳು, ಉದ್ಯಮಿಗಳು, ಸಮಾಜಸೇವಕರು ಹಾಗೂ ಸಾರ್ವಜನಿಕರು ತಮ್ಮ ಕೈಲಾದ ನೆರವು ನೀಡಬಹುದು.
ಒಬ್ಬರು ಒಂದು ದಿನದ ಆಹಾರದ ವೆಚ್ಚವನ್ನು ಭರಿಸುವ ಮೂಲಕವೂ ಆಶ್ರಮದ ಸೇವಾ ಕಾರ್ಯಕ್ಕೆ ಕೈಜೋಡಿಸಬಹುದು. ಹಾಗೆಯೇ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಹಣಕಾಸಿನ ನೆರವು ಅಥವಾ ಅಗತ್ಯ ವಸ್ತುಗಳನ್ನು ನೀಡುವ ಮೂಲಕ ಹಿರಿಯರ ಬದುಕಿಗೆ ಆಸರೆಯಾಗಬಹುದು.
ಹಿರಿಯ ಜೀವಿಗಳಿಗೆ ನೆರವಾಗುವುದು ಕೇವಲ ದಾನಧರ್ಮವಲ್ಲ; ಅದು ಮಾನವೀಯತೆಯ ಪ್ರತೀಕ. ಇಂದು ನಾವು ನೀಡುವ ಸಣ್ಣ ಸಹಾಯವೂ ಆಶ್ರಮದಲ್ಲಿರುವ ಹಿರಿಯರ ಪಾಲಿಗೆ ದೊಡ್ಡ ಭರವಸೆಯಾಗಬಹುದು. ಸಮಾಜದ ಪ್ರತಿಯೊಬ್ಬರೂ ಇಂತಹ ಸೇವಾ ಕಾರ್ಯಗಳಿಗೆ ಪ್ರೋತ್ಸಾಹ ನೀಡಿದಾಗ ಮಾತ್ರ ಮಾನವೀಯ ಮೌಲ್ಯಗಳು ಮತ್ತಷ್ಟು ಗಟ್ಟಿಗೊಳ್ಳಲು ಸಾಧ್ಯ.
ವೀರಾಜಪೇಟೆ-ಪೆರುಂಬಾಡಿ ಮುಖ್ಯರಸ್ತೆಯಿಂದ ಗುಂಡಿಕೆರೆ ತೆರಳುವ ರಸ್ತೆಯಲ್ಲಿರುವ ಶ್ರೀ ಶಕ್ತಿ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಹಿರಿಯರ ಯೋಗಕ್ಷೇಮ ವಿಚಾರಿಸುವುದರ ಜೊತೆಗೆ ತಮ್ಮ ಕೈಲಾದ ಸಹಕಾರ ನೀಡಬಹುದು. ದಾನಿಗಳು ಹಾಗೂ ಸಾರ್ವಜನಿಕರು ಆಶ್ರಮದೊಂದಿಗೆ ಕೈಜೋಡಿಸಿ ಈ ಮಾನವೀಯ ಸೇವಾ ಕಾರ್ಯಕ್ಕೆ ಬೆಂಬಲ ನೀಡಬಹುದು ಸಹಕರಿಸುವವರು ವ್ಯವಸ್ಥಾಪಕ ಹನುಮಂತ ಅವರನ್ನು ಮೊಬೈಲ್: ೯೬೧೧೬೧೨೨೮೨ ಸಂಪರ್ಕಿಸಬಹುದು.
- ಅಶ್ರಫ್