ಸೋಮವಾರಪೇಟೆ, ನ. ೧೯: ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಮೈ ಭಾರತ್, ಜಿಲ್ಲಾ ಯುವ ಒಕ್ಕೂಟ ಮತ್ತು ತಾಲೂಕು ಒಕ್ಕೂಟ ಹಾಗೂ ತಲ್ತಾರೆಶೆಟ್ಟಳ್ಳಿ ಚೌಡೇಶ್ವರಿ ಯೂತ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ತಾ. ೨೧ರಂದು ಜಿಲ್ಲಾಮಟ್ಟದ ೨೦೨೬-೨೭ನೇ ಸಾಲಿನ ಯುವ ಜನೋತ್ಸವ ನಡೆಯಲಿದೆ ಎಂದು ಯುವ ಒಕ್ಕೂಟದ ಜಿಲ್ಲಾಧ್ಯಕ್ಷ ಪಿ.ಪಿ. ಸುಕುಮಾರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಂತಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಲ್ತಾರೆಶೆಟ್ಟಳ್ಳಿ ಗ್ರಾಮದ ಚೌಡೇಶ್ವರಿ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ. ಜಿಲ್ಲೆಯ ೧೫ ರಿಂದ ೨೯ ವಯೋಮಾನದ ಶಾಲಾ ಕಾಲೇಜು ಹಾಗೂ ಯುವ ಜನರು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ತಮ್ಮ ವಯೋಮಾನದ ದಾಖಲಾತಿಯನ್ನು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಂದರ್ಭ ದೃಢೀಕರಿಸಬೇಕು. ಅಂದು ಬೆಳಿಗ್ಗೆ ೯-೩೦ರಿಂದ ನೋಂದಣಿ ಪ್ರಾರಂಭಗೊಳ್ಳಲಿದೆ ಎಂದರು.

ಯುವಕ ಮತ್ತು ಯುವತಿಯರಿಗೆ ಒಟ್ಟಾಗಿ ಸ್ಪರ್ಧೆ ನಡೆಯಲಿದ್ದು, ಎಲ್ಲ ವಿಭಾಗಗಳಲ್ಲಿ ಪ್ರಥಮ ಸ್ಥಾನಗಳಿಸಿದವರಿಗೆ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ದೊರೆಯಲಿದೆ. ಸ್ಪರ್ಧಿಗಳಿಗೆ ಊಟ ಮತ್ತು ಪ್ರಯಾಣ ಭತ್ಯೆ ನೀಡಲಾಗುವುದು. ಜನಪದ ನೃತ್ಯದಲ್ಲಿ ೭ ರಿಂದ ೧೦ ಜನರ ತಂಡ, ಜನಪದ ಗೀತೆ ೭ ರಿಂದ ೧೦, ನಾಟಕ ೧೦ ಜನರ ತಂಡಕ್ಕೆ ಅವಕಾಶ ಇದೆ. ಕವಿತೆ ಮತ್ತು ಚಿತ್ರಕಲೆ ವೈಯಕ್ತಿಕ ಸ್ಪರ್ಧೆಯಾಗಿರುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಪಿ.ಎಂ. ನರೇಂದ್ರ ಸ್ವಾಮಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಶಾಸಕ ಡಾ. ಮಂತರ್ ಗೌಡ ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಶಾಸಕ ಎ.ಎಸ್. ಪೊನ್ನಣ್ಣ, ಸಂಸದ ಯದುವೀರ್ ಒಡೆಯರ್, ಗ್ಯಾರಂಟಿ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಮೆಹರೋಜ್ ಖಾನ್, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಬೋಜೇಗೌಡ, ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಜಿಲ್ಲಾ ಪಂಚಾಯತ್ ಆಡಳಿತಾಧಿಕಾರಿ ಎನ್.ವಿ. ಪ್ರಸಾದ್, ಜಿಲ್ಲಾಧಿಕಾರಿ ಸೋಮಶೇಖರ್ ಸೇರಿದಂತೆ ಹಲವರು ಪಾಲ್ಗೊಳ್ಳಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ೯೫೯೧೧೩೭೨೭೫, ೯೪೮೩೮೪೩೩೯೫ ಸಂಪರ್ಕಿಸಲು ಮನವಿ ಮಾಡಿದರು.

ಗೋಷ್ಠಿಯಲ್ಲಿ, ಯುವ ಒಕ್ಕೂಟದ ತಾಲೂಕು ಘಟಕದ ಉಪಾಧ್ಯಕ್ಷ ಎಚ್.ಕೆ. ಮಹೇಶ್, ಪ್ರಧಾನ ಕಾರ್ಯದರ್ಶಿ ರವಿ, ಸಲಹೆಗಾರರಾದ ಕಂದ ದೇವಯ್ಯ ಮತ್ತು ಚೌಡೇಶ್ವರಿ ಯೂತ್ ಕ್ಲಬ್ ಅಧ್ಯಕ್ಷ ಎಚ್.ಬಿ. ರಾಜಪ್ಪ ಉಪಸ್ಥಿತರಿದ್ದರು.