ನಾಪೋಕ್ಲು, ನ. ೧೯: ಅಖಿಲ ಕೊಡವ ಸಮಾಜದ ಕಟ್ಟಡ ನಿರ್ಮಾಣ ಹಾಗೂ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ವಿರಾಜಪೇಟೆಯ ಆಸುಪಾಸಿನಲ್ಲಿ ೨೦ ಎಕರೆ ಜಾಗ ಮಂಜೂರು ಮಾಡುವಂತೆ ಮತ್ತು ಪುತ್ತರಿ (ಹುತ್ತರಿ)ಹಬ್ಬದ ಪ್ರಯುಕ್ತ ಮೂರು ದಿನಗಳ ಸಾರ್ವತ್ರಿಕ ರಜೆ ಘೋಷಿಸುವಂತೆ ಕೋರಿ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರಿಗೆ ಅಖಿಲ ಕೊಡವ ಸಮಾಜದ ವತಿಯಿಂದ ಮನವಿ ಸಲ್ಲಿಸಲಾಯಿತು.

ಸಮಾಜದ ಚಟುವಟಿಕೆಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ಸುಸಜ್ಜಿತ ಕಟ್ಟಡ ಹಾಗೂ ಮೂಲಸೌಕರ್ಯಗಳ ಅಗತ್ಯವಿದ್ದು, ಇದಕ್ಕಾಗಿ ವಿರಾಜಪೇಟೆ ವ್ಯಾಪ್ತಿಯಲ್ಲಿ ೨೦ ಎಕರೆ ಸರ್ಕಾರಿ ಜಾಗವನ್ನು ಮಂಜೂರು ಮಾಡಿಕೊಡುವಂತೆ ಶಾಸಕರಲ್ಲಿ ಕೋರಲಾಯಿತು.

ಪುತ್ತರಿಗೆ ೩ ದಿನ ರಜೆ ಕೋರಿಕೆ

ಇದೇ ಸಂದರ್ಭ ಕೊಡಗಿನ ಪ್ರಮುಖ ಸುಗ್ಗಿ ಹಬ್ಬವಾದ ಪುತ್ತರಿ ಹಬಕ್ಕೆ ಒಟ್ಟು ಮೂರು ದಿನಗಳ ಸಾರ್ವತ್ರಿಕ ರಜೆ ಘೋಷಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಯಿತು. ಪುತ್ತರಿ ಹಬ್ಬದ ಹಿಂದಿನ ದಿನದಿಂದಲೇ ಆರಂಭವಾಗುವ ಕೋಲ್‌ಮಂದ್, ನಾಡ್‌ಮಂದ್, ದುಡಿಕೊಟ್ಟ್ ಪಾಟ್ ಸೇರಿದಂತೆ ಕೊಡವ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಬಿಂಬಿಸುವ ವಿವಿಧ ಸಾಂಸ್ಕೃತಿಕ ಆಚರಣೆಗಳು ಯುವಜನಾಂಗಕ್ಕೆ ಇನ್ನಷ್ಟು ಹತ್ತಿರವಾಗಬೇಕು ಮತ್ತು ಮುಂದಿನ ಪೀಳಿಗೆಗೆ ಅವುಗಳ ಮಹತ್ವವನ್ನು ಪರಿಚಯಿಸುವ ನಿಟ್ಟಿನಲ್ಲಿ ಈ ರಜೆ ಅಗತ್ಯವಿದೆ ಎಂದು ಸಮಾಜದ ಪದಾಧಿಕಾರಿಗಳು ಮನವಿಯಲ್ಲಿ ವಿವರಿಸಿದ್ದಾರೆ.

ಈ ಸಂದರ್ಭ ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ, ಉಪಾಧ್ಯಕ್ಷ ಚೆಟ್ಟೋಳಿರ ಗಿರೀಶ್ ಗಣಪತಿ, ಕಕ್ಕಬೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಿಯಂಡ ಸಂಪನ್ ಅಯ್ಯಪ್ಪ, ನಾಪೋಕ್ಲು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕುಲ್ಲೇಟಿರ ಅರುಣ್ ಬೇಬ, ಅಜ್ಜಿಕುಟ್ಟಿರ ಸುಭಾಷ್ ಸೇರಿದಂತೆ ಸಮಾಜದ ಪ್ರಮುಖರು ಇದ್ದರು.