ಮಡಿಕೇರಿ, ನ. ೧೮: ಕುಶಾಲನಗರ ತಾಲೂಕಿನ ಹಾರಂಗಿ ಹಿನ್ನೀರು ಪ್ರದೇಶಕ್ಕೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.

ಹಾರಂಗಿ ಹಿನ್ನೀರು ಪ್ರದೇಶದ ಜಲಸಾಹಸ ಕ್ರೀಡೆ ಸಂದರ್ಭ ಬೋಟ್ ಮುಳುಗಿ ದಂಪತಿ ಮೃತಪಟ್ಟ ಹಿನ್ನೆಲೆ ಆ ಪ್ರದೇಶಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ಜಲಸಾಹಸ ಕ್ರೀಡೆ ಸಂದರ್ಭದಲ್ಲಿ ದುರ್ಘಟನೆಗಳು ಸಂಭವಿಸದAತೆ ಎಚ್ಚರ ವಹಿಸಬೇಕಿತ್ತು. ಸದ್ಯ ಹಾರಂಗಿ ಹಿನ್ನೀರಿನ ಪ್ರದೇಶದಲ್ಲಿ ಜಲಸಾಹಸ ಕ್ರೀಡೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಮೃತಪಟ್ಟ ದಂಪತಿ ಸ್ಪೀಡ್ ಬೋಟ್‌ನಲ್ಲಿ ತೆರಳುತ್ತಿದ್ದರು. ತಿರುವು ತೆಗೆದುಕೊಳ್ಳುವ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಬೋಟ್ ಮಗುಚಿದೆ. ಅಷ್ಟರಲ್ಲಿ ಬೋಟ್‌ನಡಿ ಇಬ್ಬರು ಸಿಲುಕಿ ಮೃತಪಟ್ಟಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದರು.

ಬಳಿಕ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ದುಬಾರೆ ರಿವರ್ ರ‍್ಯಾಫ್ಟಿಂಗ್ ಬಳಿ ನಿರ್ಮಾಣವಾಗಿರುವ ಹೈಟೆಕ್ ಶೌಚಾಲಯದ ಕುರಿತು ಮಾಹಿತಿ ಪಡೆದರು.

ನಂತರ ಬಸವನಹಳ್ಳಿ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭ ಜಿಲ್ಲಾಡಳಿತದ ಕಾನೂನು ಸಲಹೆಗಾರ ಲೋಕೇಶ್ ಕುಮಾರ್ ಕಾವೇರಿ ನೀರಾವರಿ ನಿಗಮದ ಎಸ್‌ಇ ಸತೀಶ್, ಎಇಇ ಪುಟ್ಟಸ್ವಾಮಿ, ತಹಶೀಲ್ದಾರ್ ರಮೇಶ್, ಲೋಕೋಪಯೋಗಿ ಕಾರ್ಯಪಾಲಕ ಇಂಜಿನಿಯರ್ ಪ್ರಭು ಇತರರು ಇದ್ದರು.