(ಕೆ.ಎಂ ಇಸ್ಮಾಯಿಲ್ ಕಂಡಕರೆ)
ನವದೆಹಲಿ, ನ. ೧೮: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕಾರಣದಿಂದಾಗಿ ಜಿಬಿಎ(ಬೆಂಗಳೂರು ಸ್ಥಳೀಯ ಸಂಸ್ಥೆ) ಚುನಾವಣೆ ನಡೆಸಲು ಜನವರಿ ೩೧, ೨೦೨೭ ರವರೆಗೆ ಸಮಯ ವಿಸ್ತರಿಸುವಂತೆ ಕೋರಿ ರಾಜ್ಯ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
ರಾಜ್ಯ ಚುನಾವಣಾ ಆಯೋಗ ಸಿದ್ಧಪಡಿಸಿರುವ ಹಳೆಯ ಅಂತಿಮ ಮತದಾರರ ಪಟ್ಟಿಯ ಆಧಾರದಲ್ಲಿ ಚುನಾವಣೆ ನಡೆಸಲು ಅನುಮತಿ ಕೊಡಿ, ಇಲ್ಲವೇ ಚುನಾವಣೆ ಮುಂದೂಡಲು ಸಮ್ಮತಿಸುವಂತೆ ಆಯೋಗ ಮನವಿ ಮಾಡಿದೆ. ೨೦೨೬ರ ಡಿಸೆಂಬರ್ ೩೧ರೊಳಗೆ ಜಿಬಿಎ ಚುನಾವಣೆ ಪೂರ್ಣಗೊಳಿಸುವಂತೆ ಸುಪ್ರೀಂಕೋರ್ಟ್ ಜುಲೈನಲ್ಲಿ ಆದೇಶಿಸಿತ್ತು.
ಅದಲ್ಲದೇ ಜಿ.ಬಿ.ಎ ಚುನಾವಣೆಗೆ ಸಂಬAಧಿಸಿದ ಅರ್ಜಿಯೊಂದಿಗೆ ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಸೇರಿದಂತೆ ಸುಮಾರು ೧೮೭ ಸ್ಥಳೀಯ ಸಂಸ್ಥೆಗಳ ಅವಧಿ ಈಗಾಗಲೇ ಮುಗಿದಿದ್ದು, ಚುನಾವಣೆ ನಡೆಸುವುದು ಬಾಕಿ ಇದೆ.
ಈ ಹಿನ್ನೆಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್ಐಆರ್) ಬಳಿಕ ಪ್ರಕಟವಾಗಿರುವ ಹೊಸ ಪಟ್ಟಿಯ ಸಂಪೂರ್ಣ ದತ್ತಾಂಶ ಇನ್ನೂ ಲಭ್ಯವಾಗಿಲ್ಲದ ಕಾರಣ, ೨೦೨೫ರ ಜನವರಿ ತಿಂಗಳ ಮತದಾರರ ಪಟ್ಟಿ ಹಾಗೂ ೨೦೨೫ರ ಅಕ್ಟೋಬರ್ ೧ ರಂದು ಅಸ್ತಿತ್ವದಲ್ಲಿದ್ದ ವಿಧಾನಸಭಾ ಮತದಾರರ ಪಟ್ಟಿಯ ಆಧಾರದಲ್ಲೇ ಜಿಲ್ಲಾ ಪಂಚಾಯತ್ ಸೇರಿದಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಅನುಮತಿ ನೀಡಬೇಕು ಎಂದು ರಾಜ್ಯ ಚುನಾವಣಾ ಆಯೋಗ ಸುಪ್ರೀಂಕೋರ್ಟ್ಗೆ ಮನವಿ ಮಾಡಿದೆ.
ಅಲ್ಲದೆ, ಅಗತ್ಯ ಮತದಾರರ ಪಟ್ಟಿಯ ದತ್ತಾಂಶವನ್ನು ರಾಜ್ಯ ಚುನಾವಣಾ ಆಯೋಗಕ್ಕೆ ಒದಗಿಸುವಂತೆ ಭಾರತೀಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಆಯೋಗ ಅರ್ಜಿಯಲ್ಲಿ ಕೋರಿದೆ.
ಎಸ್ಐಆರ್ ಪ್ರಕ್ರಿಯೆ ಕಾರಣದಿಂದಾಗಿ ಪರಿಷ್ಕೃತ ಮತದಾರರ ಪಟ್ಟಿಯ ಸಂಪೂರ್ಣ ದತ್ತಾಂಶ ಹಸ್ತಾಂತರಗೊAಡಿಲ್ಲ. ಕರಡು ಪಟ್ಟಿಯ ಆಧಾರದಲ್ಲಿ ಚುನಾವಣೆ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಹಳೆಯ ಅಂತಿಮ ಪಟ್ಟಿಯಲ್ಲೇ ಚುನಾವಣೆ ನಡೆಸಲು ಅನುಮತಿ ಕೋರಲಾಗಿದೆ ಎಂದು ಆಯೋಗ ತನ್ನ ಅರ್ಜಿಯಲ್ಲಿ ವಿವರಿಸಿದೆ.
ರಾಜ್ಯದಲ್ಲಿ ಈಗಾಗಲೇ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗೆ ಸಂಬAಧಿಸಿದAತೆ ಕ್ಷೇತ್ರವಾರು ಕರಡು ಮೀಸಲು ಪಟ್ಟಿ ಪ್ರಕಟಗೊಂಡಿದೆ. ಡಿಸೆಂಬರ್ ೧೫ರೊಳಗೆ ಚುನಾವಣೆಗೆ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ. ರಾಜ್ಯ ಚುನಾವಣಾ ಆಯೋಗವು ಚುನಾವಣೆಗೆ ಸಂಬAಧಿಸಿದAತೆ ಎಲ್ಲಾ ತಯಾರಿಯನ್ನು ನಡೆಸುತ್ತಿದೆ.ಎಸ್.ಐ.ಆರ್ ಅಂತಿಮ ಮತದಾರರ ಪಟ್ಟಿಯಲ್ಲಿ ಚುನಾವಣೆ ನಡೆಸಬೇಕೇ? ಎಂಬ ಗೊಂದಲ ರಾಜ್ಯ ಸರ್ಕಾರದಲ್ಲಿ ಉಂಟಾಗಿತ್ತು. ಇದೀಗ ರಾಜ್ಯ ಚುನಾವಣಾ ಆಯೋಗ, ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಿದ್ದು, ಸುಪ್ರೀಂ ಆದೇಶಕ್ಕಾಗಿ ಕಾಯುತ್ತಿದೆ. ಈ ತಿಂಗಳೊಳಗೆ ಸುಪ್ರೀಂ ಕೋರ್ಟ್ ಮತದಾರರ ಪಟ್ಟಿಯ ಬಗ್ಗೆ ಆದೇಶ ನೀಡಿದಲ್ಲಿ ಜನವರಿ ತಿಂಗಳೊಳಗೆ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ ನಡೆಯಲಿದೆ.