ಗೋಣಿಕೊಪ್ಪಲು, ನ. ೧೮: ಸಹಕಾರ ಸಂಘಕ್ಕೆ ತನ್ನದೆ ಆದ ಇತಿಹಾಸವಿದ್ದು ಕ್ರೀಯಾಶೀಲ ವ್ಯಕ್ತಿಗಳು ಸಂಘದ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದೆ ಆದಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನೀಡಲು ಸಾಧ್ಯ ಎಂದು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಪಳೆಯಂಡ ಯು. ರಾಬಿನ್ ದೇವಯ್ಯ ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಹಾಗೂ ಹುದಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಹುದಿಕೇರಿ ಸಹಕಾರ ಸಂಘದ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ ೭೩ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಸಹಕಾರ ಶಿಕ್ಷಣ- ತರಬೇತಿ-ಪ್ರಚಾರ ಸಹಕಾರ ಸಂಸ್ಥೆಗಳಲ್ಲಿ ಪರಿಣಾಮಕಾರಿ ಬದಲಾವಣೆ ಹಾಗೂ ಉಚಿತ ನೇತ್ರ, ದಂತ ತಪಾಸಣೆ ಚಿಕಿತ್ಸೆ ಮತ್ತು ಸಲಹಾ ಶಿಬಿರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮ ಮಟ್ಟದಲ್ಲಿ ಸಹಕಾರ ಸಂಘಗಳು ಉತ್ತಮ ಬೆಳವಣಿಗೆಯತ್ತ ದಾಪುಗಾಲು ಹಾಕುತ್ತಿವೆ. ಹಿರಿಯ ಸಹಕಾರಿಗಳು ಸಹಕಾರ ಸಂಘದ ಏಳಿಗೆಗೆ ಅಮೂಲ್ಯ ಕೊಡುಗೆಯನ್ನು ನೀಡಿದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿರುವ ಸಹಕಾರ ಸಂಘಗಳು ಪ್ರಗತಿಪಥದತ್ತ ಸಾಗುತ್ತಿವೆ ಎಂದರು.
ದವಸ ಭಂಡಾರಗಳು ದಕ್ಷಿಣ ಕೊಡಗಿನಲ್ಲಿ ಹೆಚ್ಚಾಗಿ ಕಾರ್ಯ ನಿರ್ವಹಿಸುತ್ತಿವೆ. ಪರಸ್ಪರ ನಂಬಿಕೆಯ ಮೂಲಕ ಆರಂಭವಾದ ದವಸ ಭಂಡಾರಗಳು ಇಂದು ಬೆಳವಣಿಗೆಯತ್ತ ಸಾಗುತ್ತಿವೆ. ಭಾರತ ದೇಶದಲ್ಲಿ ೮.೫೦ ಲಕ್ಷ ಸಹಕಾರ ಸಂಘಗಳು ಕೆಲಸ ನಿರ್ವಹಿಸುತ್ತಿವೆ. ೩ ಕೋಟಿ ಅಧಿಕ ಸಹಕಾರಿಗಳು ಸಹಕಾರ ಸಂಘದಲ್ಲಿ ಸದಸ್ಯತ್ವವನ್ನು ಪಡೆದಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಕೊಡಂದೇರ ಪಿ. ಗಣಪತಿ ಮಾತನಾಡಿ, ಕೊಡಗಿನಲ್ಲಿ ರೈತರ ಬೇಡಿಕೆಗೆ ಅನುಕೂಲವಾಗಿ ಸಹಕಾರ ಸಂಘಗಳು ಕೆಲಸ ನಿರ್ವಹಿಸುತ್ತಿದೆ. ಭ್ರಷ್ಟಾಚಾರ ರಹಿತ ಆಡಳಿತ ನಡೆಸಲು ಒತ್ತು ನೀಡಲಾಗುತ್ತಿವೆ. ಹಲವು ಸಂಘಗಳಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳನ್ನು ಗಮನಿಸಿದ್ದೇವೆ. ಅಂತಹ ಸಂಘಗಳಿಗೆ ಸಲಹೆ ಸೂಚನೆ ನೀಡುವ ಮೂಲಕ ಪ್ರಗತಿಯತ್ತ ಸಾಗಲು ನಿರ್ದೇಶನಗಳನ್ನು ನೀಡಲಾಗುತ್ತಿದೆ. ಹುದಿಕೇರಿ ಸಹಕಾರ ಸಂಘವು ತನ್ನದೆ ಆದ ರೀತಿಯಲ್ಲಿ ಅಭಿವೃದ್ಧಿಯತ್ತ ಸಾಗುತ್ತಿರುವುದು ಶ್ಲಾಘನೀಯ ಎಂದರು.
ಹುದಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಜ್ಜಿಕುಟ್ಟಿರ ಎಂ. ಮುತ್ತಪ್ಪ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಹಿರಿಯ ಸಹಕಾರಿಗಳಾದ ಬಯವಂಡ ಯು. ಮಾದಪ್ಪ, ಚೆಕ್ಕೆರ ಎನ್. ಅರುಣ್, ಕಳ್ಳಿಚಂಡ ಕೆ. ಪೊನ್ನಪ್ಪ, ಕೇಚೆಟ್ಟಿರ ಅಪ್ಪಣ್ಣ, ಚೆಕ್ಕೆರ ಬೋಪಯ್ಯ ಇವರುಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.
ಉತ್ತಮ ಆಡಳಿತಕ್ಕಾಗಿ ಕೇಂದ್ರ ಸಹಕಾರ ಬ್ಯಾಂಕಿನಿAದ ನಮ್ಮ ಸಂಘಕ್ಕೆ ಅತ್ಯುತ್ತಮ ಮಾದರಿ ಸಂಘ ಎಂಬ ಪ್ರಶಸ್ತಿಯು ಲಭಿಸಿದೆ. ಆಡಳಿತ ಮಂಡಳಿಯ ಸರ್ವ ಸದಸ್ಯರ, ಸಂಘದ ಸಿಇಒ, ಸಿಬ್ಬಂದಿಯ ಅವಿರತ ಶ್ರಮ ಇದಕ್ಕೆ ಕಾರಣ ಎಂದರು.
ದಿನದ ಮಹತ್ವ ಕುರಿತು ಕೊಡಗು ಜಿಲ್ಲಾ ಸಹಕಾರ ಯೂನಿಯನ್ನ ನಿರ್ದೇಶಕಿ ನಿವೃತ್ತ ಪ್ರಾಂಶುಪಾಲೆ ಎಂ.ಎA. ಶ್ಯಾಮಲ ವಿಷಯ ಮಂಡನೆ ಮಾಡಿದರು. ವೇದಿಕೆಯಲ್ಲಿ ಕೊಡಗು ಜಿಲ್ಲಾ ಸಹಕಾರ ಯೂನಿಯನ್ನ ನಿರ್ದೇಶಕರುಗಳಾದ ಹೊಟ್ಟೆಂಗಡ ಎಂ. ರಮೇಶ್, ಎಂ.ಟಿ. ಸುಬ್ಬಯ್ಯ, ಎ.ಸಿ. ಕುಶಾಲಪ್ಪ, ಎ.ಎಸ್. ಶ್ಯಾಮ್ಚಂದ್ರ, ಎಸ್.ಆರ್. ಸುನೀಲ್ ರಾವ್, ಹುದಿಕೇರಿ ಪ್ಯಾಕ್ಸ್ನ ಉಪಾಧ್ಯಕ್ಷೆ ಕೆ.ಎಸ್. ಊರ್ಮಿಳ, ಕೊಡಗು ಜಿಲ್ಲಾ ಯೂನಿಯನ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್, ಹುದಿಕೇರಿ ಪ್ಯಾಕ್ಸ್ನ ಆಡಳಿತ ಮಂಡಳಿಯ ನಿರ್ದೇಶಕರುಗಳಾದ ಸಿ.ಡಿ. ತಿಮ್ಮಯ್ಯ, ಕೆ.ಎಸ್. ನರೇಂದ್ರ, ಎಂ.ಎ. ರಮೇಶ್, ಕಾಳಿಮಾಡ ಎ. ನರೇಂದ್ರ, ಕೆ.ಕೆ. ಮಂದಣ್ಣ, ಎಂ.ಬಿ. ಬೋಪಣ್ಣ, ಎ.ಎ. ಬೋಪಣ್ಣ, ಎಂ.ಎA. ನವೀನ್, ಹೆಚ್.ಕೆ. ರಾಜಪ್ಪ, ಕೆ.ಪಿ. ಗಾಯತ್ರಿ, ಜೆ.ಪಿ. ಗಂಗು, ಸಿಇಒ ಮತ್ರಂಡ ಎಂ. ತಮ್ಮಯ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಹುದಿಕೇರಿ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷೆ ಕೆ.ಎಸ್. ಊರ್ಮಿಳ ಸ್ವಾಗತಿಸಿ, ಯೋಗೆಂದ್ರ ನಾಯಕ್ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಉಚಿತ ನೇತ್ರ, ದಂತ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.