ಬೆಂಗಳೂರು, ನ. ೧೭: ರಾಜ್ಯದ ಗ್ರಾಮೀಣ ಭಾಗದ ರಸ್ತೆ ಮೂಲಸೌಕರ್ಯವನ್ನು ಮೇಲ್ದರ್ಜೆಗೇರಿಸಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಮುಖ್ಯಮಂತ್ರಿ ಗ್ರಾಮೀಣಾಭಿವೃದ್ಧಿ ಯೋಜನೆಯಡಿ ರೂ. ೬,೦೦೦ ಕೋಟಿ ವೆಚ್ಚದ ವಿಶೇಷ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರ ಅಧಿಕೃತವಾಗಿ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಕೊಡಗು ಜಿಲ್ಲೆಗೆ ರೂ. ೧೦೨ ಕೋಟಿ ಮೀಸಲಿಡಲಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಸರ್ವಋತು ಗುಣಮಟ್ಟದ ರಸ್ತೆ ಸಂಪರ್ಕ ಕಲ್ಪಿಸುವುದು, ಹೊಸ ಬಡಾವಣೆ ಹಾಗೂ ಕುಗ್ರಾಮಗಳನ್ನು ಮುಖ್ಯ ರಸ್ತೆಗೆ ಜೋಡಿಸುವುದು ಮತ್ತು ಆ ಮೂಲಕ ಗ್ರಾಮೀಣ ಆರ್ಥಿಕತೆಗೆ ವೇಗ ನೀಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಸರ್ಕಾರದ ಆದೇಶದಂತೆ, ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಈ ಪೈಕಿ ಗಡಿ ಜಿಲ್ಲೆ ಬೆಳಗಾವಿಗೆ ಅತಿ ಹೆಚ್ಚು ಅಂದರೆ ರೂ. ೩೯೯.೫೦ ಕೋಟಿ ಅನುದಾನ ಲಭಿಸಿದೆ.

ಯೋಜನೆಗೆ ರಸ್ತೆಗಳನ್ನು ಆಯ್ಕೆ ಮಾಡುವಾಗ ಜನಸಂಖ್ಯೆ, ಕೃಷಿ ಮತ್ತು ಆರ್ಥಿಕ ಚಟುವಟಿಕೆಗಳು ಹಾಗೂ ಸಾರ್ವಜನಿಕ ಹಿತಾಸಕ್ತಿಯನ್ನು ಪ್ರಮುಖ ಮಾನದಂಡಗಳನ್ನಾಗಿ ಪರಿಗಣಿಸಲಾಗುತ್ತದೆ. ಕಾಮಗಾರಿಗಳ ಅನುಷ್ಠಾನದಲ್ಲಿ ಪಾರದರ್ಶಕತೆ ಕಾಪಾಡಲು ಇ-ಟೆಂಡರ್ ಪ್ರಕ್ರಿಯೆ ಕಡ್ಡಾಯಗೊಳಿಸಲಾಗಿದ್ದು, ರಸ್ತೆ ನಿರ್ಮಾಣದ ಗುಣಮಟ್ಟ ಪರಿಶೀಲನೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.