ಸೋಮವಾರಪೇಟೆ, ನ. ೧೭: ಗ್ರಾಮೀಣ ಪ್ರದೇಶದ ಕೃಷಿಕರು, ರೈತರು, ಸಾರ್ವಜನಿಕರ ಆರ್ಥಿಕ ಬೆನ್ನುಲುಬಾಗಿ ಸೇವೆ ಸಲ್ಲಿಸುತ್ತಿರುವ ಸಹಕಾರ ಸಂಘಗಳ ಬಲವರ್ಧನೆಗೆ ಸರ್ಕಾರದಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಹೇಳಿದರು.

ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್, ಸಹಕಾರ ಕೇಂದ್ರ ಬ್ಯಾಂಕ್, ಸಹಕಾರ ಇಲಾಖೆ ಹಾಗೂ ಶಾಂತಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ನೇತೃತ್ವದಲ್ಲಿ, ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ೭೩ನೇ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕೊಡಗಿನ ಸಹಕಾರ ಕ್ಷೇತ್ರದ ಸಂಸ್ಥಾಪಕರು, ತಲ್ತರೆಶೆಟ್ಟಳ್ಳಿಯಲ್ಲಿ ಪ್ರಥಮ ಸಹಕಾರ ಸಂಘ ಸ್ಥಾಪಿಸಿದ ಹಿರಿಯ ಸಹಕಾರಿ ಕುರಾದಗೌಡ್ನಮನೆ ದೊಡ್ಡಯ್ಯ ಅವರ ಪುತ್ಥಳಿ ನಿರ್ಮಾಣಕ್ಕೂ ಇದೇ ವೇಳೆ ಶಂಕುಸ್ಥಾಪನೆ ನೆರವೇರಿಸಿದ ಶಾಸಕರು, ಸಹಕಾರಿ ಸಪ್ತಾಹ ಕಾರ್ಯಕ್ರಮದಲ್ಲಿ ಹಿರಿಯ ಸಹಕಾರಿಗಳನ್ನು ಸನ್ಮಾನಿಸಿದರು.

ಮುಂದುವರೆದು ಮಾತನಾಡಿದ ಅವರು, ಸಹಕಾರ ಕ್ಷೇತ್ರದಲ್ಲಿ ಯುವ ಸಮುದಾಯ ಹೆಚ್ಚು ತೊಡಗಿಸಿಕೊಳ್ಳಬೇಕು. ಹಿರಿಯರ ಮಾರ್ಗದರ್ಶನ ಪಡೆಯಬೇಕು. ಯುವ ಸಮುದಾಯದ ಭಾಗವಹಿಸುವಿಕೆಯಿಂದ ವಿನೂತನ ಯೋಜನೆಗಳು, ನೂತನ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳಲು ಸಾಧ್ಯ ಎಂದು ಡಾ. ಮಂತರ್ ಗೌಡ ಅಭಿಪ್ರಾಯಿಸಿದರು.

ಕೊಡಗಿನ ಸಹಕಾರ ಸಂಘಗಳ ಬಲವರ್ಧನೆಗೆ ಸರ್ಕಾರದಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ಪೂರ್ವಿಕರು ಸ್ಥಾಪಿಸಿದ ಸಹಕಾರ ಸಂಘ ಉಳಿಸಿ ಬೆಳೆಸಬೇಕು. ದೊಡ್ಡಯ್ಯ ಅವರ ಕುಟುಂಬಸ್ಥರ ಒಪ್ಪಿಗೆಯೊಂದಿಗೆ ಪುತ್ಥಳಿ ಸ್ಥಾಪನೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಸಹಕಾರ ಇಲಾಖೆ ಹಾಗೂ ಶಾಸಕರ ನಿಧಿಯಡಿ ಶಾಂತಳ್ಳಿ ಸಹಕಾರ ಸಂಘದ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡಲಾಗುವುದು ಎಂದರು.

ಸಹಕಾರ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ರಾಬಿನ್ ದೇವಯ್ಯ, ಭತ್ತದ ಕೃಷಿಕರಿಗೆ ಸಣ್ಣ ಪ್ರಮಾಣದಲ್ಲಿ ಸಹಕಾರ ನೀಡುವ ಉದ್ದೇಶದಿಂದ ಸಹಕಾರ ಸಂಘಗಳು ಸ್ಥಾಪನೆಯಾದವು. ಕೊಡಗಿನ ಪ್ರಥಮ ಸಹಕಾರ ಸಂಘ ತಲ್ತರೆಶೆಟ್ಟಳ್ಳಿಯಲ್ಲಿ ಸ್ಥಾಪನೆಯಾಗಿದ್ದು, ೧ ರೂ. ಪಾಲು ಬಂಡವಾಳ, ೧೦ ರೂಪಾಯಿ ಸಾಲದೊಂದಿಗೆ ಪ್ರಾರಂಭವಾಯಿತು. ಇಂದು ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಸೆಡ್ಡು ಹೊಡೆಯುವಷ್ಟರ ಮಟ್ಟಿಗೆ ಸಹಕಾರ ಸಂಘಗಳು ಬೆಳವಣಿಗೆಯಾಗಿವೆ ಎಂದು ತಿಳಿಸಿದರು.

ಇಂದು ಕೃಷಿಯೊಂದಿಗೆ ಕೃಷಿಯೇತರ ಸಾಲವನ್ನೂ ಸಹಕಾರ ಸಂಘಗಳ ಮೂಲಕ ನೀಡಲಾಗುತ್ತಿದೆ. ವಿವಿಧ ಸಾಲಗಳ ಮೂಲಕ ಸಹಕಾರಿಗಳ ಆರ್ಥಿಕ ಬೆಳವಣಿಗೆಗೆ ಕಾರಣೀಭೂತವಾಗಿವೆ. ಹಿಂದಿನ ಪೀಳಿಗೆ ನೀಡಿದ ಸಹಕಾರ ಸಂಘಗಳನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ನೀಡಬೇಕು. ಆಡಳಿತದಲ್ಲಿ ಪ್ರಾಮಾಣಿಕತೆ ಹಾಗೂ ಪಾರದರ್ಶಕತೆಗೆ ಒತ್ತು ನೀಡಬೇಕು. ನಮ್ಮ ಕುಟುಂಬದ ಸಂಘ ಎಂಬ ಭಾವನೆ ಬೆಳೆಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಂತಳ್ಳಿ ಸಹಕಾರ ಸಂಘದ ಅಧ್ಯಕ್ಷ ಕೆ.ಆರ್. ಶಿವಕುಮಾರ್ ಮಾತನಾಡಿ, ಸಂಘದಿAದ ಸದಸ್ಯರ ಶ್ರೇಯೋಭಿವೃದ್ದಿಗೆ ಹಲವಾರು ಯೋಜನೆಗಳು, ಸಾಲಗಳನ್ನು ನೀಡಲಾಗುತ್ತಿದೆ. ಸರ್ಕಾರದ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಇವುಗಳನ್ನು ಬಳಸಿಕೊಂಡು ರೈತರು ಅಭಿವೃದ್ಧಿ ಕಾಣಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಹೆಚ್.ಕೆ. ಮಾದಪ್ಪ, ದಕ್ಷಿಣ ಕರ್ನಾಟಕದ ಪ್ರಥಮ ಸಹಕಾರ ಸಂಘ ಸ್ಥಾಪನೆಯಾಗಿರುವುದು ಶಾಂತಳ್ಳಿಯ ತಲ್ತರೆಶೆಟ್ಟಳ್ಳಿಯಲ್ಲಿ ಎಂಬುದು ಎಲ್ಲರಿಗೂ ಹೆಮ್ಮೆಯ ವಿಷಯ. ಕುರಾದಗೌಡ್ನಮನೆ ದೊಡ್ಡಯ್ಯ ಅವರು ೧೯೦೫ರಲ್ಲಿ ಸಹಕಾರ ಸಂಘ ಸ್ಥಾಪಿಸಿದರು. ಇವರ ನೆನಪನ್ನು ಶಾಶ್ವತವನ್ನಾಗಿಸುವ ನಿಟ್ಟಿನಲ್ಲಿ ಪುತ್ಥಳಿ ಸ್ಥಾಪನೆಗೆ ಇದೀಗ ಕಾಲ ಕೂಡಿ ಬಂದಿದೆ ಎಂದು ಅಭಿಪ್ರಾಯಿಸಿದರು. ಶಾಸಕರ ಸಹಕಾರದೊಂದಿಗೆ ಜಿಲ್ಲೆಯ ಎಲ್ಲಾ ಸಹಕಾರ ಸಂಘಗಳೂ ಈ ಕಾರ್ಯಕ್ಕೆ ಕೈಜೋಡಿಸಬೇಕು. ಇದರೊಂದಿಗೆ ಸಹಕಾರ ಯೂನಿಯನ್, ಸಹಕಾರ ಕೇಂದ್ರ ಬ್ಯಾಂಕ್‌ನಿAದಲೂ ಸಹಯೋಗ ನೀಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಹಕಾರಿಗಳಾದ ಎನ್.ಎ. ಜೋಯಪ್ಪ, ಬಿ.ಎಸ್. ಪೂವಯ್ಯ, ಕೆ.ಕೆ. ಗೋಪಾಲ, ಕೆ.ಕೆ. ಮುತ್ತಣ್ಣ, ಕೆ.ಟಿ. ರಾಜಶೇಖರ್, ಕುಂದಳ್ಳಿ ದಿನೇಶ್, ಬಿ.ಎ. ಧರ್ಮಪ್ಪ, ಬಿ.ಈ. ಜಯೇಂದ್ರ, ಬಿ.ಪಿ. ಜೋಯಪ್ಪ, ಕುರಾದಗೌಡ್ನಮನೆ ಕುಟುಂಬಸ್ಥರಾದ ಕೊಮಾರಪ್ಪ ಕೆ.ಪಿ. ಅವರುಗಳನ್ನು ಸನ್ಮಾನಿಸಲಾಯಿತು.

ಸಹಕಾರ ಸಂಸ್ಥೆಗಳ ಮೂಲಕ ಮೌಲ್ಯವರ್ಧನೆ-ಬ್ರಾö್ಯಂಡ್ ನಿರ್ಮಾಣ ಎಂಬ ಘೋಷಣೆಯೊಂದಿಗೆ ನಡೆದ ಕಾರ್ಯಕ್ರಮದಲ್ಲಿ ದಿನದ ಮಹತ್ವದ ಬಗ್ಗೆ ನಿವೃತ್ತ ಪ್ರಾಂಶುಪಾಲೆ, ಸಹಕಾರ ಯೂನಿಯನ್ ನಿರ್ದೇಶಕಿ ಎಂ.ಎA. ಶ್ಯಾಮಲ ವಿಷಯ ಮಂಡಿಸಿದರು. ವೇದಿಕೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಯೂನಿಯನ್ ನಿರ್ದೇಶಕರುಗಳಾದ ವಿ.ಸಿ. ಅಮೃತ್, ಕೆ.ಟಿ. ಪರಮೇಶ್, ಎಸ್.ಆರ್. ಸುನಿಲ್ ರಾವ್, ಎಂ.ಟಿ. ಸುಬ್ಬಯ್ಯ, ಶಾಂತಳ್ಳಿ ವಿಎಸ್‌ಎಸ್‌ಎನ್ ಉಪಾಧ್ಯಕ್ಷೆ ಬಿ.ಎಲ್. ಅನಿತ, ನಿರ್ದೇಶಕರುಗಳಾದ ಬಿ.ಎ. ಧರ್ಮಪ್ಪ, ಬಿ.ಈ. ಜಯೇಂದ್ರ, ಜಿ.ಹೆಚ್. ರಾಜೇಶ್, ಯು.ಎಂ. ಬಸವರಾಜು, ಪಿ.ಎಸ್. ಅರುಣ್, ಕೆ.ಪಿ. ಕುಮಾರ್, ಡಿ.ಎಸ್. ಲಿಂಗರಾಜು, ಹೆಚ್.ಕೆ. ತ್ರಿಶೂಲ್, ಬಿ.ಟಿ. ಪರಮೇಶ್, ಎಸ್.ಎಂ. ನಿಶಾಂತ್, ಕೆ.ಕೆ. ಚಂದ್ರಾವತಿ, ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಸಂದ್ಯಾ ಅವರುಗಳು ಇದ್ದರು.

ಬೆಟ್ಟದಳ್ಳಿ ಶ್ರೀಕುಮಾರಲಿಂಗೇಶ್ವರ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿ, ಸಹಕಾರ ಯೂನಿಯನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.

ಶಾಂತಳ್ಳಿ ಆರೋಗ್ಯ ಕೇಂದ್ರದ ವತಿಯಿಂದ ರಕ್ತದೊತ್ತಡ ಪರೀಕ್ಷೆ, ಡಯಾಬಿಟೀಸ್ ಪರೀಕ್ಷೆ, ಉಚಿತ ಹೆಪಟೈಟಸ್ ಬಿ ಲಸಿಕೆ ಅಭಿಯಾನ ಆಯೋಜಿಸಲಾಗಿತ್ತು.