ಕುಶಾಲನಗರ, ನ. ೧೭: ಕುಶಾಲನಗರ ಐತಿಹಾಸಿಕ ಶ್ರೀ ಗಣಪತಿ ದೇವಾಲಯದ ರಥೋತ್ಸವ ನ.೨೭ ರಂದು ಶುಕ್ರವಾರ ನಡೆಯಲಿದೆ.
ಶ್ರೀ ಗಣಪತಿ ವಾರ್ಷಿಕ ರಥೋತ್ಸವ ಅಂಗವಾಗಿ ನ.೨೪ ರಿಂದ ಡಿಸೆಂಬರ್ ೩ರ ತನಕ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
೨೪ರಂದು ದೇವಾಲಯದಲ್ಲಿ ಸತ್ಯನಾರಾಯಣ ಪೂಜೆ ನಡೆಯಲಿದೆ. ಸಂಜೆ ದೀಪಾರಾಧನೆ, ಕಾರ್ತಿಕ ದಟ್ಟೋತ್ಸವ, ರಂಗ ಪೂಜೆ, ಮಹಾಮಂಗಳಾರತಿ ನಡೆಯಲಿದೆ.
೨೫ರ ಬುಧವಾರ ಬೆಳಿಗ್ಗೆ ೧೦.೩೦ ಕ್ಕೆ ಪೂಜೆ, ನಂತರ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ. ೨೬ ರಂದು ಸಂಜೆ ೫:೩೦ಕ್ಕೆ ಮೂಷಿಕ ವಾಹನ, ೨೬ ರಂದು ಚಂದ್ರ ಬಿಂಬೋತ್ಸವ ಪಲ್ಲಕ್ಕಿ ಉತ್ಸವ ನಡೆಯಲಿದೆ. ನ.೨೭ ರಂದು ದೇವಸ್ಥಾನ ವತಿಯಿಂದ ಮಧ್ಯಾಹ್ನ ೧೨ ಗಂಟೆಗೆ ರಥೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯುವುದು. ರಥೋತ್ಸವದ ದಿನ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಮಧ್ಯಾಹ್ನ ೧ ರಿಂದ ೪ ಗಂಟೆ ತನಕ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.
ತಾ.೨೮ ರಂದು ವೃಷಭ ವಾಹನ ಸೇವೆ ಮಂಟಪೋತ್ಸವ ೨೯ ರಂದು ಅಶ್ವರೂಢ ಸೇವೆ, ಹೂವಿನ ಪಲ್ಲಕ್ಕಿ ಮಂಟಪೋತ್ಸವ, ತಾ.೩೦ರಂದು ಮಯೂರರೂಢ ಸೇವೆ, ಡಿಸೆಂಬರ್ ೧ ರಂದು ಕಾವೇರಿ ನದಿಯಲ್ಲಿ ಸಂಜೆ ೭:೩೦ಕ್ಕೆ ತೆಪ್ಪೋತ್ಸವ ನಡೆಯಲಿದೆ. ಡಿಸೆಂಬರ್ ೨ ರಂದು ಹೋಮ, ವಿವಿಧ ಪೂಜಾ ಕಾರ್ಯಕ್ರಮಗಳೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು, ಡಿಸೆಂಬರ್ ೩ ರಂದು ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳು ಸಾಂಪ್ರದಾಯಿಕವಾಗಿ ಸಮಾಪ್ತಿಗೊಳ್ಳಲಿವೆ.
ನ. ೨೭ ರಿಂದ ಜಾತ್ರಾ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗುಂಡೂರಾವ್ ಬಡಾವಣೆಯ ಜಾತ್ರಾ ಮೈದಾನದಲ್ಲಿ ನ. ೨೬ ರಿಂದ ಮನರಂಜನೆ ಪಾರ್ಕ್ ತೆರೆಯಲಾಗುತ್ತದೆ. ಡಿಸೆಂಬರ್ ೫ ರಿಂದ ಎರಡು ದಿನಗಳ ಕಾಲ ಗುಂಡುರಾವ್ ಬಡಾವಣೆಯ ಜಾತ್ರಾ ಮೈದಾನದಲ್ಲಿ ಗೋ ಪ್ರದರ್ಶನ ಮತ್ತು ಉತ್ತಮ ರಾಸುಗಳ ಆಯ್ಕೆ ಕಾರ್ಯ ನಡೆಯುವುದು, ಡಿಸೆಂಬರ್ ೭ ರಂದು ಸಂಜೆ ೫ ಗಂಟೆಗೆ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ಗಣಪತಿ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷರಾದ ಎಂ.ಕೆ ದಿನೇಶ್ ತಿಳಿಸಿದ್ದಾರೆ.
ದೇವಾಲಯ ಸೇವಾ ಸಮಿತಿಯ ಗೌರವಾಧ್ಯಕ್ಷರಾಗಿ ವಿ.ಎನ್ ವಸಂತ್ ಕುಮಾರ್, ಉಪಾಧ್ಯಕ್ಷರಾಗಿ ಆರ್ ಬಾಬು, ಕಾರ್ಯದರ್ಶಿಯಾಗಿ ಬಿ.ಕೆ ಮುತ್ತಣ್ಣ, ಖಜಾಂಚಿಯಾಗಿ ಎಸ್.ಕೆ ಸತೀಶ್, ಸಹ ಕಾರ್ಯದರ್ಶಿಯಾಗಿ ಕೆ.ಎನ್ ದೇವರಾಜ್, ನಿರ್ದೇಶಕರಾಗಿ ವಿ.ಪಿ ಶಶಿಧರ್, ನಿರ್ದೇಶಕರಾಗಿ ಟಿ.ಆರ್ ಶರವಣ ಕುಮಾರ್, ಹೆಚ್.ಎಂ ಚಂದ್ರು ಮತ್ತು ಪ್ರಧಾನ ಅರ್ಚಕರಾಗಿ ಆರ್.ಕೆ ನಾಗೇಂದ್ರ ಬಾಬು ಮತ್ತು ವಿಶೇಷ ಆಹ್ವಾನಿತರು ಹಾಗೂ ವ್ಯವಸ್ಥಾಪಕರಾದ ಎಸ್.ಕೆ ಶ್ರೀನಿವಾಸ ರಾವ್ ಅವರುಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ಜಾತ್ರಾ ಮಹೋತ್ಸವ, ಧಾರ್ಮಿಕ ಕಾರ್ಯಕ್ರಮಗಳು ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳ ಪೂರ್ವಸಿದ್ಧತೆಗಾಗಿ ಉಪ ಸಮಿತಿಗಳನ್ನು ರಚಿಸಲಾಗಿದೆ ಎಂದು ದೇವಾಲಯ ಸಮಿತಿಯ ಅಧ್ಯಕ್ಷರು ತಿಳಿಸಿದ್ದಾರೆ.
-ಚಂದ್ರಮೋಹನ್