ಮಡಿಕೇರಿ, ನ. ೧೭: “ನಗರದ ಗಾಂಧಿ ಮೈದಾನದ ಬದಿಯಲ್ಲಿನ ಅತ್ತಿ ಮರಗಳನ್ನು ಕಡಿಯದೆಯೇ ರಸ್ತೆ ಅಭಿವೃದ್ಧಿ ಕಾಮಗಾರಿ ಸಾಧ್ಯವಿದೆ. ೧೨ ಮರಗಳ ಪೈಕಿ ಒಂದು ಮರ ರಸ್ತೆ ಬದಿಯ ಕಾಲುದಾರಿಗೆ ಬಾಗಿರುವ ಕಾರಣ ಇದರ ತೆರವಿಗೆ ನಗರಸಭೆಯು ಅರಣ್ಯ ಇಲಾಖೆ ಬಳಿ ಅನುಮತಿ ಕೇಳಿದೆ. ಇದರ ತೆರವು ಅವಶ್ಯವಿದೆಯೋ ಇಲ್ಲವೋ..?, ಎಂಬುದನ್ನು ನಗರಸಭೆ ಅಭಿಯಂತರರು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಪರಿಶೀಲಿಸಿ, ಚರ್ಚೆ ನಡೆದ ಬಳಿಕವಷ್ಟೆ ತೀರ್ಮಾನಕ್ಕೆ ಬರಲಾಗುವುದು” ಎಂದು ಮಡಿಕೇರಿ ವಿಭಾಗದ ಡಿ.ಸಿ.ಎಫ್ ಅಭಿಷೇಕ್ ಅವರು ಮಾಹಿತಿ ನೀಡಿದರು.

ಕಾವೇರಿ ಕಲಾಕ್ಷೇತ್ರ ಸ್ಥಳದಲ್ಲಿ ನಿಂತಿರುವ ೧೦೦ ವರ್ಷಗಳಿಗೂ ಅಧಿಕ ವಯಸ್ಸಿನ ಸಂಪಿಗೆ ಮರವನ್ನು ಕಡಿಯುವುದಕ್ಕೂ ನಗರಸಭೆ ಅಭಿಯಂತರರಿAದ ಅರಣ್ಯ ಇಲಾಖೆ ಬಳಿ ಅನುಮತಿ ಕೋರಲಾಗಿದೆ. ಈ ಸ್ಥಳದಲ್ಲಿ ಮಲ್ಟಿ-ಲೆವೆಲ್ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದ್ದು, ಸಂಪಿಗೆ ಮರವನ್ನು ಕಡಿಯದೆಯೇ ಕಟ್ಟಡ ನಿರ್ಮಾಣಕ್ಕೆ ಹೊಸ ನೀಲನಕ್ಷೆ ತಯಾರಿಸಿ ೧ ವಾರದೊಳಗೆ ಅರಣ್ಯ ಇಲಾಖೆಗೆ ಸಲ್ಲಿಸಲು ನಗರಸಭೆ ಅಭಿಯಂತರ ಹೇಮಕುಮಾರ್ ಅವರಿಗೆ ಅಭಿಷೇಕ್ ಅವರು ಸೂಚಿಸಿದರು.

ರಾಜಾಸೀಟು ರಸ್ತೆ ಅಭಿವೃದ್ಧಿ ಸಂಬAಧ, ಗಾಂಧಿ ಮೈದಾನದ ಬಳಿಯ ೧೨ ಅತ್ತಿ ಮರಗಳು ಹಾಗೂ ಕಾವೇರಿ ಕಲಾಕ್ಷೇತ್ರದಲ್ಲಿನ ಬೃಹತ್ ಸಂಪಿಗೆ ಮರ ಕಡಿತಲೆಗೆ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆ ಅರಣ್ಯ ಭವನದಲ್ಲಿಂದು ಡಿ.ಸಿ.ಎಫ್ ಅಭಿಷೇಕ್ ಸಮ್ಮುಖದಲ್ಲಿ, ಆಕ್ಷೇಪ ವ್ಯಕ್ತಪಡಿಸಿದ ಸಾರ್ವಜನಿಕರು ಹಾಗೂ ನಗರಸಭೆ ಅಭಿಯಂತರರ ನಡುವೆ ಚರ್ಚೆಗಳು ನಡೆದು ಈ ನಿರ್ಧಾರಗಳನ್ನು ಕೈಗೊಳ್ಳಲಾಯಿತು.

ರಾಜಾಸೀಟು ರಸ್ತೆ ಅಭಿವೃದ್ಧಿ ನೆಪದಲ್ಲಿ ರಸ್ತೆಯ ಬದಿಯಲ್ಲಿ ದಶಕಗಳಿಂದ ನಿಂತಿದ್ದ ೧೨ ಮರಗಳನ್ನು ಕಾಲುದಾರಿ ಸೌಂದರ್ಯಿಕರಣಕ್ಕೆAದು ತೆರವು ಮಾಡುವಂತೆ ನಗರಸಭೆ ವತಿಯಿಂದ ಅನುಮತಿ ಕೋರಿ ಅರಣ್ಯ ಇಲಾಖೆಗೆ ಮನವಿ ಮಾಡಲಾಗಿತ್ತು. ರಸ್ತೆಯ ಅಭಿವೃದ್ಧಿಗೆ ಈ ಮರಗಳು ಯಾವುದೇ ಅಡಚಣೆಯಾಗದ ಹಿನ್ನೆಲೆ ಸಾರ್ವಜನಿಕರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಕಾಲುದಾರಿಗೆ ಬಾಗಿರುವ ಒಂದು ಮರವನ್ನು ಮಾತ್ರ ತೆರವುಗೊಳಿಸುವಂತೆ ನಗರಸಭೆ ಅಭಿಯಂತರರು ಇಂದಿನ ಸಭೆಯಲ್ಲಿ ಮನವಿ ಮಾಡಿದರು. ಈ ಸಂದರ್ಭ ಮಾತನಾಡಿದ ಸಾರ್ವಜನಿಕರು, ಈ ಮರವು ಕಾಲುದಾರಿಗೆ ಬಾಗಿರುವುದರಿಂದ ಕಾಲುದಾರಿಗೆ ಹೊಂದಿಕೊAಡಿರುವ ಬೇಲಿಯನ್ನು ಸ್ವಲ್ಪ ಒಳಕ್ಕೆ ತಳ್ಳಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಬಹುದಾಗಿದೆ. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಇದರ ಬಗ್ಗೆ ತಾ.೧೮ ರಂದು (ಇಂದು)ಸಾರ್ವಜನಿಕರ ಸಮ್ಮುಖದಲ್ಲಿ ಪರಿಶೀಲನೆ ನಡೆಸಬಹುದಾಗಿದೆ ಎಂದರು. ಈ ಸಂದರ್ಭ ಮಾತನಾಡಿದ ಡಿ.ಸಿ.ಎಫ್ ಅಭಿಷೇಕ್, ಸಾರ್ವಜನಿಕರ ಸಮ್ಮುಖದಲ್ಲಿ ಈ ಬಗ್ಗೆ ಪರಿಶೀಲಿಸಲು ಅಭಿಯಂತರ ಹೇಮಕುಮಾರ್ ಅವರಿಗೆ ಸೂಚಿಸಿದರು.

ಕಾವೇರಿ ಕಲಾಕ್ಷೇತ್ರದಲ್ಲಿ ನಿಂತಿರುವ ಸಂಪಿಗೆ ಮರ ಸುತ್ತ ಜೆ.ಸಿ.ಬಿ ಯಂತ್ರ ಬಳಿಸಿ ಮಣ್ಣು ತೆರವು ಮಾಡಲಾಗಿದೆ. ಇನ್ನಷ್ಟು ಬಗೆದರೆ ಅಪಾಯ ಕಂಡಿತ ಎಂದು ಸಾರ್ವಜನಿಕರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭ ಮಾತನಾಡಿದ ಅಭಿಷೇಕ್ ಅವರು, ಮರಕ್ಕೆ ಅಪಾಯ ಆಗದಂತೆ ಅದರ ಸುತ್ತ ಮಣ್ಣು ಹಾಕುವಂತೆ ಅಭಿಯಂತರರಿಗೆ ಸೂಚಿಸಿದರು.

ಆಕ್ಷೇಪ ವ್ಯಕ್ತಪಡಿಸಿದ ಸಾರ್ವಜನಿಕರಲ್ಲಿ ಒಬ್ಬರಾದ ಕರ್ನಲ್ ಸಿ.ಪಿ ಮುತ್ತಣ್ಣ ಮಾತನಾಡಿ, ಕಾವೇರಿ ಕಲಾಕ್ಷೇತ್ರದ ಸ್ಥಳದಲ್ಲಿ ಮಲ್ಟಿ ಲೆವೆಲ್ ಪಾರ್ಕಿಂಗ್ ನೆಪದಲ್ಲಿ ಮರವನ್ನು ಕಡಿಯುವುದು ಸರಿಯಾದ ಕ್ರಮವಲ್ಲ. ಯಾವುದೇ ಕಾರಣಕ್ಕೂ ಈ ಕಟ್ಟಡ ಬರಲು ಬಿಡುವುದಿಲ್ಲ. ಇದರ ನಿರ್ಮಾಣದ ವಿರುದ್ಧ ನ್ಯಾಯಾಲಯದಲ್ಲಿ ಧಾವೆ ಹೂಡುವುದಾಗಿ ಹೇಳಿದರು.

ಪ್ರಮುಖರಾದ ಅಭಿಷೇಕ್ ಜೈನ್ ಅವರು ಮಾತನಾಡಿ, ಅಭಿವೃದ್ಧಿ ನೆಪದಲ್ಲಿ ಮರ ಕಡಿದು ಇತರೆಡೆ ಗಿಡ ನೆಡುವುದಕ್ಕಿಂತ ಮರವನ್ನು ಕಡಿಯದೆಯೇ ಅಭಿವೃದ್ಧಿ ನಡೆಸುವ ವೈಜ್ಞಾನಿಕ ಕ್ರಮವನ್ನು ಪಾಲಿಸುವಂತೆ ಒತ್ತಾಯಿಸಿದರು.

ಪ್ರಜ್ಞಾ ಜಿ.ಆರ್ ಮಾತನಾಡಿ, ಅತ್ತಿ ಮರಗಳು ಹಾಗೂ ಸಂಪಿಗೆ ಮರಗಳು ಕರ್ನಾಟಕ ಮರಗಳ ಸಂರಕ್ಷಣಾ ಕಾಯ್ದೆಯ ಸೆಕ್ಷನ್-೮ರಡಿಯಲ್ಲಿ ಸಂರಕ್ಷಿತ ಎಂದು ಘೋಷಿತವಾಗಿವೆ. ಈ ಮರಗಳನ್ನು ಕಡಿಯುವುದಕ್ಕೂ ಮುನ್ನ ಪರ್ಯಾಯ ಅಭಿವೃದ್ಧಿ ಮಾರ್ಗಗಳನ್ನು ಪಾಲಿಸುವುದು ಕಡ್ಡಾಯ ಎಂದರು.

ಸಂಪತ್ ಕುಮಾರ್ ಸರಳಾಯ ಅವರು ಮಾತನಾಡಿ, ೮೦ರ ದಶಕದಲ್ಲಿ ಅಂದಿನ ಡಿ.ಸಿ, ಅರಣ್ಯ ಅಧಿಕಾರಿ ಸಮ್ಮುಖದಲ್ಲಿಯೇ ಅತ್ತಿ ಮರಗಳನ್ನು ನೆಡಲಾಗಿತ್ತು. ಅನಾವಶ್ಯಕ ಇದರ ಹನನ ಮಾಡುವುದು ಸರಿಯಾದ ಕ್ರಮವಲ್ಲ ಎಂದರು.

ಪ್ರಜ್ವಲ್ ಜಿ.ಆರ್ ಅವರು ಮಾತನಾಡಿ, ಕಲಾಕ್ಷೇತ್ರ ಜಾಗದಲ್ಲಿ ಅಧಿಕ ಅಂತಸ್ತಿನ ಕಟ್ಟಡ ಕಟ್ಟಲು ಪುರಾತತ್ವ ಇಲಾಖೆ ವತಿಯಿಂದ ಇನ್ನೂ ಅನುಮತಿ ದೊರೆತಿಲ್ಲ ಎಂದರು.

ವಿಪಿನ್ ಬಾಳಿಗ ಹಾಗೂ ಅನಿಲ್ ಬೆಟ್ಟದಳ್ಳಿ ಅವರು ಮಾತನಾಡಿ, ಸಂಪಿಗೆ ಮರವನ್ನು ರಕ್ಷಿಸುವುದು ಅತ್ಯಗತ್ಯ. ಇದರ ಸುತ್ತ ಸೌಂದರ್ಯಿಕರಣ ಮಾಡಿ ಉದ್ಯಾನ ರೀತಿ ಮಾಡಬಹುದಾಗಿದೆ ಎಂದರು.

ಸಭೆಯಲ್ಲಿ ನೈಲ ಗಣೇಶ್, ಡಾ. ಶಾಂತಿ ಅಚ್ಚಪ್ಪ, ಆಂಟೊನಿ ಫ್ರಾö್ಯಂಕ್ಲಿನ್, ಪ್ರಸನ್ನ ಕೆ.ಟಿ, ಡಾ. ಅನುಶಾ, ಪ್ರಯಾಗ್ ಗೌಡ, ಪುನೀತ್ ಕೆ.ಎಸ್, ಧನುಶ್ ಕಾವೇರಿಯಪ್ಪ, ಕರಣ್ ಸುಬ್ಬಯ್ಯ, ಸೋಮಣ್ಣ, ಚೆಂಗಪ್ಪ ಹಾಗೂ ಇತರರು ಹಾಜರಿದ್ದು ಮರ ಕಡಿತಲೆಗೆ ಆಕ್ಷೇಪ ವ್ಯಕ್ತಪಡಿಸಿದರು.