ಸಿದ್ದಾಪುರ, ನ. ೧೬: ಇತ್ತೀಚೆಗೆ ವೀರಾಜಪೇಟೆ ಕ್ಷೇತ್ರದ ಶಾಸಕರ ಸಮ್ಮುಖದಲ್ಲಿ ಶಾಸಕ ಪೊನ್ನಣ್ಣ ಅವರ ಕಾರ್ಯ ವೈಖರಿಯನ್ನು ಮೆಚ್ಚಿ ತಾನು ಹಾಗೂ ತನ್ನ ಬೆಂಬಲಿಗರಿಗೂ ಸ್ವ ಇಚ್ಛೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇವೆ ಎಂದು ಇಂಜಿಲಗೆರೆ ಪುಲಿಯೇರಿ ಗ್ರಾಮದ ನಿವಾಸಿ ಹಾಗೂ ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಶೀಲಾ ಚಂದ್ರನ್ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡವರು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದರು.

ಈ ಕುರಿತು ಮಾಹಿತಿ ನೀಡಿದ ಅವರು, ತಾನು ಇತ್ತೀಚೆಗೆ ವೀರಾಜಪೇಟೆಗೆ ತನ್ನ ಗ್ರಾಮದ ೬೦ ಕ್ಕೂ ಅಧಿಕ ಬೆಂಬಲಿಗರೊAದಿಗೆ, ಶಾಸಕ ಪೊನ್ನಣ್ಣ ಅವರ ಗೃಹ ಕಚೇರಿಗೆ ತೆರಳಿ, ತಮ್ಮ ಸ್ವ ಇಚ್ಛೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇವೆ ಹೊರತು ನಮ್ಮನ್ನು ಯಾರೂ ಕೂಡ ಬಲವಂತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳಿಸಿಲ್ಲ. ತಾನು ಸುದೀರ್ಘಕಾಲ ಅಂಗನವಾಡಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ತನ್ನ ಸೇವೆ ಗುರುತಿಸಿ ಎಲ್ಲರ ಸಮ್ಮುಖದಲ್ಲಿ ಶಾಸಕರು ಸನ್ಮಾನ ಮಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದರು. ಇತ್ತೀಚೆಗೆ ಪುಲಿಯೇರಿ ಇಂಜಿಲಗೆರೆ ಗ್ರಾಮದಲ್ಲಿ ಬಿ.ಜೆ.ಪಿ. ಕಾರ್ಯಕರ್ತರ ಸಭೆಯಲ್ಲಿ ಬಿ.ಜೆ.ಪಿ ಪದಾಧಿಕಾರಿಗಳು ಅಂಗನವಾಡಿ ಕಾರ್ಯಕರ್ತೆಯನ್ನು ಶಾಸಕರು ಸನ್ಮಾನ ಮಾಡುವ ನೆಪದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳಿಸಿದ್ದಾರೆ ಎಂದು ಸುಳ್ಳು ಹೇಳಿಕೆ ನೀಡಿದ್ದಾರೆ. ಇದು ಸತ್ಯಕ್ಕೆ ದೂರವಾಗಿದೆ ಎಂದರು.

ಅಮ್ಮತ್ತಿ ವಲಯ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎ.ಎಸ್. ಅನಿಲ್, ಎಲ್.ಶೀಲಾ, ಸುಜಾ, ಪಿ.ಟಿ.ರವಿ, ಪದ್ಮನಾಭ, ದನೀಶ್ ಎಂ.ಸಿ. ಇನ್ನಿತರರು ಹಾಜರಿದ್ದರು.