ಚೆಟ್ಟಳ್ಳಿ, ನ. ೧೬: ಚೆಸ್ಕಾಂನ ಚೆಟ್ಟಳ್ಳಿ ಶಾಖಾ ವ್ಯಾಪ್ತಿಯ ಚೆಟ್ಟಳ್ಳಿ, ವಾಲ್ನೂರು-ತ್ಯಾಗತ್ತೂರು, ನೆಲ್ಲಿಹುದಿಕೇರಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಮಾರ್ಗಗಳ ನಿರ್ವಹಣೆ ಹಾಗೂ ಅಗತ್ಯ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ತಾ.೧೮ ಮತ್ತು ೧೯ ರಂದು ಎರಡು ದಿನಗಳ ಕಾಲ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ಎರಡೂ ದಿನಗಳಂದು ಬೆಳಿಗ್ಗೆ ೯ರಿಂದ ಸಂಜೆ ೬ ಗಂಟೆಯವರೆಗೆ ವಿದ್ಯುತ್ ಸರಬರಾಜು ಸಂಪೂರ್ಣ ಸ್ಥಗಿತಗೊಳ್ಳಲಿದೆ ಎಂದು ಚೆಸ್ಕಾಂನ ಚೆಟ್ಟಳ್ಳಿ ಶಾಖಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯುತ್ ವ್ಯತ್ಯಯದ ಹಿನ್ನೆಲೆಯಲ್ಲಿ ಸಾರ್ವಜನಿಕರು ಕುಡಿಯುವ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವುದು, ಮೊಬೈಲ್ ಸೇರಿದಂತೆ ವಿದ್ಯುನ್ಮಾನ ಉಪಕರಣಗಳನ್ನು ಮುಂಚಿತವಾಗಿ ಚಾರ್ಜ್ ಮಾಡಿಕೊಳ್ಳುವುದು ಹಾಗೂ ಕೃಷಿ ಚಟುವಟಿಕೆಗಳಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಮನವಿ ಮಾಡಲಾಗಿದೆ.

ವಿದ್ಯುತ್ ವ್ಯತ್ಯಯದ ಅವಧಿಯನ್ನು ಸದ್ಬಳಕೆ ಮಾಡಿಕೊಂಡು ತೋಟ ಹಾಗೂ ಜಮೀನುಗಳ ಮೂಲಕ ಹಾದುಹೋಗಿರುವ ವಿದ್ಯುತ್ ಮಾರ್ಗಗಳ ಅಕ್ಕಪಕ್ಕದಲ್ಲಿ ಬೆಳೆದು ತಂತಿಗಳಿಗೆ ತಾಗುತ್ತಿರುವ ಅಥವಾ ತಾಗುವ ಸಾಧ್ಯತೆಯಿರುವ ಮರದ ಕೊಂಬೆಗಳನ್ನು ತೆರವುಗೊಳಿಸುವಂತೆ ತೋಟದ ಮಾಲೀಕರಲ್ಲಿ ಚೆಸ್ಕಾಂ ಮನವಿ ಮಾಡಿದೆ.

ಮರದ ಕೊಂಬೆಗಳಿAದ ವಿದ್ಯುತ್ ವ್ಯತ್ಯಯ ಉಂಟಾಗುವುದನ್ನು ತಡೆಗಟ್ಟುವುದು, ಗಾಳಿ-ಮಳೆಯ ಸಂದರ್ಭ ವಿದ್ಯುತ್ ಮಾರ್ಗಗಳಿಗೆ ಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸುವುದು ಹಾಗೂ ಸಾರ್ವಜನಿಕರು, ರೈತರು ಮತ್ತು ಜಾನುವಾರುಗಳ ಸುರಕ್ಷತೆ ಕಾಪಾಡುವುದು ಇದರ ಉದ್ದೇಶವಾಗಿದೆ.

ವಿದ್ಯುತ್ ಸರಬರಾಜು ಸ್ಥಗಿತಗೊಂಡಿದ್ದರೂ ತಂತಿಗಳು ಸಂಪೂರ್ಣ ಸುರಕ್ಷಿತವಾಗಿವೆ ಎಂದು ಭಾವಿಸಬಾರದು. ಚೆಸ್ಕಾಂ ಸಿಬ್ಬಂದಿಯ ಪೂರ್ವಾನುಮತಿ, ಲೈನ್ ಐಸೋಲೇಷನ್ ಹಾಗೂ ಅಗತ್ಯ ಸುರಕ್ಷತಾ ಕ್ರಮಗಳನ್ನು ಖಚಿತಪಡಿಸಿಕೊಳ್ಳದೆ ಯಾರೂ ವಿದ್ಯುತ್ ತಂತಿಗಳ ಸಮೀಪ ಮರದ ಕೊಂಬೆಗಳನ್ನು ಕಡಿಯಬಾರದು. ಇಲಾಖೆಯ ಸಿಬ್ಬಂದಿಯ ಸಮನ್ವಯ ಮತ್ತು ಮೇಲ್ವಿಚಾರಣೆಯಲ್ಲಿಯೇ ಕೊಂಬೆ ತೆರವು ಕಾರ್ಯ ಕೈಗೊಳ್ಳಬೇಕೆಂದು ಪ್ರಕಟಣೆ ತಿಳಿಸಿದೆ. ಸಾರ್ವಜನಿಕರು ಹಾಗೂ ತೋಟದ ಮಾಲೀಕರು ಇಲಾಖೆಯೊಂದಿಗೆ ಸಹಕರಿಸುವಂತೆ ಚೆಸ್ಕಾಂ ಮನವಿ ಮಾಡಿದೆ.