*ಗೋಣಿಕೊಪ್ಪ, ನ. ೧೫: ಬ್ರಿಟಿಷರ ದಬ್ಬಾಳಿಕೆ ಮತ್ತು ಶೋಷಣೆಯ ವಿರುದ್ಧ ದಿಟ್ಟವಾಗಿ ಹೋರಾಡಿ, ಬುಡಕಟ್ಟು ಸಮುದಾಯದ ಹಕ್ಕುಗಳು ಹಾಗೂ ಸ್ವಾಭಿಮಾನಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹಾನ್ ಹೋರಾಟಗಾರ ಭಗವಾನ್ ಬಿರ್ಸಾಮುಂಡಾ ಅವರ ಹೋರಾಟ ಮತ್ತು ಆದರ್ಶಗಳು ಇಂದಿಗೂ ಸಮಾಜಕ್ಕೆ ಪ್ರೇರಣೆಯಾಗಿವೆ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅಭಿಪ್ರಾಯಪಟ್ಟರು.
ಪೊನ್ನಂಪೇಟೆ ತಾಲೂಕಿನ ತಿತಿಮತಿ ಶಾಲೆಯಲ್ಲಿ ಭಗವಾನ್ ಬಿರ್ಸಾಮುಂಡಾ ಅವರ ೧೫೧ನೇ ಜನ್ಮದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ‘ಜನಜಾತೀಯ ಗೌರವ ದಿವಸ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬುಡಕಟ್ಟು ಸಮುದಾಯದ ಹಕ್ಕುಗಳು ಮತ್ತು ಸ್ವಾಭಿಮಾನದ ರಕ್ಷಣೆಗಾಗಿ ಬಿರ್ಸಾ ಮುಂಡಾ ಅವರು ನಡೆಸಿದ ಹೋರಾಟ ಸ್ಮರಣೀಯವಾಗಿದೆ. ಇಂದಿಗೂ ಬುಡಕಟ್ಟು ಸಮುದಾಯದ ಜನರು ಅವರನ್ನು ಮಹಾತ್ಮರೆಂದು ಗೌರವಿಸಿ ಆರಾಧಿಸುತ್ತಿರುವುದು ಅವರ ಹೋರಾಟ ಹಾಗೂ ಆದರ್ಶಗಳಿಗೆ ಸಾಕ್ಷಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ, ಪೊನ್ನಂಪೇಟೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ವಿರಾಜಪೇಟೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪಿ.ವಿ. ಜಾನ್ಸನ್, ಅಕ್ಕ ಐಎಎಸ್ ಅಕಾಡೆಮಿಯ ಸಂಸ್ಥಾಪಕ ನಿರ್ದೇಶಕ ಡಾ. ಶಿವಕುಮಾರ್, ಡಿಸಿಸಿ ಸದಸ್ಯ ವಿನಯ್ ಕುಮಾರ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಪಂಕಜ, ತಿತಿಮತಿ ವಲಯ ಅಧ್ಯಕ್ಷ ನವೀನ್, ಪಂಚಾಯಿತಿ ಮಾಜಿ ಸದಸ್ಯ ಅಫ್ರೋಜ್, ಪಕ್ಷದ ಮುಖಂಡ ಕುಂಡಚ್ಚಿರ ಮಂಜು ದೇವಯ್ಯ, ಸಮಾಜ ಸೇವಕ ಚೋಕಂಡ ಸಂಜು ಸುಬ್ಬಯ್ಯ, ಆದಿವಾಸಿ ಸಮುದಾಯದ ಮುಖಂಡರಾದ ಕುಡಿಯರ ಮುತ್ತಪ್ಪ, ಭೋಜಪ್ಪ, ಮಲ್ಲಪ್ಪ, ಪಿ.ಸಿ. ರಾಮು, ಸಿದ್ದಪ್ಪ, ಮಣಿ ಕುಞ್ಞ, ಪುಷ್ಪ, ಐಟಿಡಿಪಿ ಅಧಿಕಾರಿ ಭಾಗ್ಯರಥಿ, ತಾಲೂಕು ಅಧಿಕಾರಿ ತೇಜ್ ರಾಜ್ ಸೇರಿದಂತೆ ಆದಿವಾಸಿ ಸಮುದಾಯದ ಮುಖಂಡರು ಹಾಗೂ ಸದಸ್ಯರು ಉಪಸ್ಥಿತರಿದ್ದರು.