ಕುಶಾಲನಗರ, ನ. ೧೪: ಕುಶಾಲನಗರ ಗಣಪತಿ ದೇವಾಲಯದ ವಾರ್ಷಿಕ ರಥೋತ್ಸವ ಅಂಗವಾಗಿ ನಡೆಯುವ ಜಾತ್ರಾ ಮೈದಾನಕ್ಕೆ ಕ್ಷೇತ್ರದ ಶಾಸಕ ಡಾ ಮಂತರ್ ಗೌಡ ಮತ್ತು ಪುರಸಭೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾ. ೨೫ ರಿಂದ ಜಾತ್ರಾ ಮಹೋತ್ಸವ ಆರಂಭಗೊಳ್ಳಲಿದ್ದು, ತಾ. ೨೭ ರಂದು ಗಣಪತಿ ರಥೋತ್ಸವ ಜರುಗಲಿದೆ. ಜಾತ್ರಾ ಮೈದಾನದ ಪೂರ್ವ ಸಿದ್ಧತೆಯ ಪರಿಶೀಲನೆ ಹಿನ್ನೆಲೆ ಶಾಸಕರು ದೇವಸ್ಥಾನ ಸಮಿತಿ ಪ್ರಮುಖರಿಂದ ಮತ್ತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುವ ಮನರಂಜನಾ ಕಾರ್ಯಕ್ರಮದಲ್ಲಿ ಈ ಬಾರಿ ರಾಜ್ಯಮಟ್ಟದ ಕಲಾವಿದರಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಬಗ್ಗೆ ಚಿಂತನೆ ಹರಿಸಲಾಗುವುದು ಎಂದು ಶಾಸಕರು ಈ ಸಂದರ್ಭ ಮಾಹಿತಿ ನೀಡಿದರು.
ಜಾತ್ರಾ ಮೈದಾನದಲ್ಲಿ ಸಮರ್ಪಕ ವ್ಯವಸ್ಥೆ ಕಲ್ಪಿಸಲು ಪುರಸಭೆಯ ಅಧಿಕಾರಿ ಕೃಷ್ಣಪ್ರಸಾದ್ ಮತ್ತು ಆರೋಗ್ಯ ಅಧಿಕಾರಿ ಉದಯಕುಮಾರ್ ಅವರುಗಳಿಗೆ ಸೂಚನೆ ನೀಡಿದರು.
ಜಾತ್ರಾ ಮೈದಾನದ ಸಂಪೂರ್ಣ ಉಸ್ತುವಾರಿಯನ್ನು ಪುರಸಭೆ ಅಧಿಕಾರಿಗಳು ವಹಿಸಿ ನಿರ್ವಹಣೆ ಮಾಡುವಂತೆ ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಮುಂದಿನ ದಿನಗಳಲ್ಲಿ ಅಭಿವೃದ್ಧಿಪಡಿಸುವ ಯೋಜನೆ ರೂಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಕುಶಾಲನಗರ ಸೇರಿದಂತೆ ಸುತ್ತಮುತ್ತ ಗ್ರಾಮಗಳ ನಾಗರಿಕರು ಜಾತ್ರೆಗೆ ಆಗಮಿಸುವ ಸಂದರ್ಭ ವಾಹನಗಳ ನಿಲುಗಡೆ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಶಾಸಕರು ತಿಳಿಸಿದರು.
ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಎಂ.ಕೆ. ದಿನೇಶ್, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ದೇವಾಲಯ ಸಮಿತಿ ಪ್ರಮುಖರಾದ ಟಿ.ಆರ್. ಶರವಣಕುಮಾರ್, ಮುತ್ತಣ್ಣ, ಕೆ.ಎನ್.ದೇವರಾಜ್, ಪುರಸಭೆ ಮಾಜಿ ಸದಸ್ಯ ಜಗದೀಶ್, ಕುಶಾಲನಗರ ಪಂಚಾಯಿತಿ ಮಾಜಿ ಅಧ್ಯಕ್ಷ ಹೆಚ್.ಡಿ. ಚಂದ್ರು, ಪ್ರಮುಖರಾದ ಹೆಬ್ಬಾಲೆ ರಂಜನ್, ಇರ್ಫಾನ್ ಮತ್ತಿತರರು ಇದ್ದರು.