ಮಡಿಕೇರಿ, ನ. ೧೨; ಮನೆ ಮಾಲೀಕರು ಕಾಫಿ ಕುಯ್ಯಲೆಂದು ತೋಟಕ್ಕೆ ತೆರಳಿದ್ದ ಸಂದರ್ಭ ಹಾಡ ಹಗಲೇ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿರುವ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಅಪ್ಪಂಗಳದಲ್ಲಿ ಸಂಭವಿಸಿದೆ. ಅಪ್ಪಂಗಳ ನಿವಾಸಿ, ಬಿಎಸ್‌ಎಫ್ ನಿವೃತ್ತ ಇನ್ಸ್ಪೆಕ್ಟರ್ ತಳೂರು ಲಾಲ ಹಾಗೂ ಅವರ ಪತ್ನಿ ತೋಟಕ್ಕೆ ತೆರಳಿದ್ದ ಸಂದರ್ಭ ಈ ಕಳ್ಳತನ ನಡೆದಿದೆ.

ಎಂದಿನAತೆ ಇಂದು ಬೆಳಿಗ್ಗೆ ೧೦ ಗಂಟೆ ವೇಳೆಗೆ ಮನೆಗೆ ಬೀಗ ಹಾಕಿ ಲಾಲ ಹಾಗೂ ಪತ್ನಿ ಕಾಫಿ ಕುಯ್ಯಲೆಂದು ಸನಿಹದ ತೋಟಕ್ಕೆ ತೆರಳಿದ್ದರು. ಲಾಲ ಅವರ ತೋಟ ಮನೆಯಿಂದ ಒಂದೂವರೆ ಕಿ.ಮೀ. ದೂರದಲ್ಲಿದ್ದು, ತೋಟಕ್ಕೆ ಹೋಗಿ ಬರುವದರೊಳಗಾಗಿ ಮನೆಗೆ ನುಗ್ಗಿದ ಕಳ್ಳರು ಕಳವು ಮಾಡಿದ್ದಾರೆ. ಲಾಲ ಅವರು ಮಧ್ಯಾಹ್ನ ೨ಗಂಟೆ ವೇಳೆಗೆ ಮನೆಗೆ ವಾಪಸ್ ಬಂದ ಸಂದರ್ಭ ಕಳವಾಗಿರುವದು ಗೋಚರಿಸಿದೆ. ಸುಮಾರು ರೂ.೨೫ ಲಕ್ಷಕ್ಕೂ ಅಧಿಕ ಮೌಲ್ಯದ ಅಂದಾಜು ೨೦೦ ಗ್ರಾಂ.ಗೂ ಹೆಚ್ಚು ಚಿನ್ನಾಭರಣ ಹಾಗೂ ಅಂದಾಜು ರೂ.೩೫ಸಾವಿರ ನಗದು ಕಳವಾಗಿರುವದಾಗಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

ಹಿಂಬಾಗಿಲಿನಿAದ ನುಗ್ಗಿದ ಕಳ್ಳರು

ಬೆಳಿಗ್ಗೆ ಅಂದಾಜು ೧೧.೩೦ರ ವೇಳೆಗೆ ಕಳವು ಮಾಡಿರಬಹುದೆಂದು ಸಂಶಯಿಸಲಾಗಿದೆ. ಅದೇ ವೇಳೆಗೆ ನಾಯಿ ಬೊಗಳುತ್ತಿದ್ದ ಸದ್ದು ಕೇಳಿರುವದಾಗಿ ಪಕ್ಕದ ಮನೆಯವರು ಹೇಳುತ್ತಿದ್ದು, ಬಹುಷ ಕಳ್ಳರು ಬಂದಿದ್ದಾಗ ನಾಯಿ ಬೊಗಳಿರಬಹುದೆಂಬ ಸಂಶಯ ವ್ಯಕ್ತಗೊಂಡಿದೆ. ಹಿಂಬಾಗಿಲನ್ನು ಮುರಿದು ಒಳನುಗ್ಗಿರುವ ಕಳ್ಳರು ಮನೆಯೊಳಗಡೆಯಿದ್ದ ನಗ-ನಾಣ್ಯಗಳನ್ನು ದೋಚಿ ಪರಾರಿಯಾಗಿದ್ದಾರೆ.

ಮನೆಯ ಆಯುಧಗಳ ಬಳಕೆ..!

ಲಾಲ ಅವರ ಮನೆ ರಸ್ತೆ ಬದಿ ಇದ್ದರೂ ರಸ್ತೆಗೆ ಕಾಣಿಸದಂತಿದೆ. ಹಾಗಾಗಿ ಮನೆಯತ್ತ ಕಳ್ಳರು ನುಸುಳಿರುವದು ಯಾರಿಗೂ ಗೋಚರಿಸಲಿಲ್ಲ. ಮನೆಯ ಹಿಂಭಾಗಕ್ಕೆ ಬಂದ ಕಳ್ಳರು ಅಲ್ಲಿಯೇ ಪಕ್ಕದಲ್ಲಿ ಗೋದಾಮಿನಲ್ಲಿದ್ದ ಹಾರೆ, ಗುದ್ದಲಿ, ಕೊಡಲಿಯನ್ನು ಬಳಸಿ ಬಾಗಿಲು ಮುರಿದು ಒಳನುಗ್ಗಿದ್ದಾರೆ. ಯಾವದೇ ಆಯುಧಗಳನ್ನು ತಾರದೆ ಮನೆಯಲ್ಲಿಯೇ ಇದ್ದ ಆಯುಧಗಳನ್ನು ಬಳಸಿಕೊಂಡಿರುವದರಿAದ ಗೊತ್ತಿರುವವರೇ ಕಳ್ಳತನ ಮಾಡಿರಬಹುದೆಂಬ ಸಂಶಯ ಸ್ಥಳಿಯರಲ್ಲಿ ವ್ಯಕ್ತಗೊಂಡಿದೆ.

ಪೊಲೀಸರಿಂದ ಪರಿಶೀಲನೆ

ಕಳವಾಗಿರುವ ಮಾಹಿತಿ ದೊರೆತೊಡನೆ ಸ್ಥಳಕ್ಕೆ ಭೇಟಿ ನೀಡಿದ ಮಡಿಕೇರಿ ಗ್ರಾಮಾಂತರ ನಿರೀಕ್ಷಕ ಚಂದ್ರಶೇಖರ್ ಹಾಗೂ ತಂಡದವರು ಪರಿಶೀಲನೆ ನಡೆಸಿದರು.

ಬೆರಳಚ್ಚು ತಜ್ಞರು ಹಾಗೂ ಶ್ವಾನ ದಳದವರು ಕೂಡ ಭೇಟಿ ನೀಡಿ ಪರಿಶೀಲನೆ ಮಾಡಿದರು. ಶ್ವಾನ ದಳದ ಮೌರ್ಯ ಮನೆಯೊಳಗಡೆ, ತೋಟದೊಳಗೆ ೫೦೦ಮೀಟರ್ ಸಾಗಿ ರಸ್ತೆ ಬದಿ ಆಟೋರಿಕ್ಷಾ ನಿಂತಿದ್ದ ಸ್ಥಳದವರೆಗೆ ತೆರಳಿ ಅಲ್ಲಿಗೆ ನಿಂತಿದೆ. ಲಾಲ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. - ಸಂತೋಷ್