ಮಡಿಕೇರಿ, ನ. ೧೧: ರಾಜ್ಯದಲ್ಲಿ ೧ ವರ್ಷ ಹಾಗೂ ೫ ವರ್ಷ ಮೇಲ್ಪಟ್ಟು ಪಡಿತರ ಚೀಟಿಗೆ ಇಕೆವೈಸಿ ದೃಢೀಕರಣಗೊಂಡಿರುವ ಫಲಾನುಭವಿಗಳ ಮರು ಇಕೆವೈಸಿ ಪೂರ್ಣಗೊಳಿಸಲು ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತೆ ದಿನಾಂಕವನ್ನು ವಿಸ್ತರಿಸಲಾಗಿದೆ.

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಪ್ರಕಟಿಸಿರುವಂತೆ, ಇಕೆವೈಸಿ ಮಾಡಿಸಿಕೊಳ್ಳಲು ನ. ೩೦ ರ ವರೆಗೆ ಅವಕಾಶ ಕಲ್ಪಿಸಲಾಗಿದೆ.

ತಾ. ೩೦ ರ ನಂತರ ಯಾವುದೇ ಕಾರಣಕ್ಕೂ ದಿನಾಂಕವನ್ನು ವಿಸ್ತರಿಸಲಾಗುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಶೇಕಡಾ ೮೩ರಷ್ಟು ಪೂರ್ಣ

ಕೊಡಗು ಜಿಲ್ಲೆಯಲ್ಲಿ ನವೆಂಬರ್ ೧೦ರವರೆಗೆ ಶೇಕಡಾ ೮೩ರಷ್ಟು ಪ್ರಗತಿ ಸಾಧಿಸಿದೆ. ಜಿಲ್ಲೆಯ ಒಟ್ಟು ೧,೯೯,೮೦೧ ಸದಸ್ಯರ ಪೈಕಿ ೧,೬೬,೭೫೩ ಸದಸ್ಯರ ಇಕೆವೈಸಿ ಪೂರ್ಣಗೊಂಡಿದೆ.

ವೆಬ್ ಆ್ಯಪ್ ಮೂಲಕ ೧,೬೨,೦೭೧ ಹಾಗೂ ಮೊಬೈಲ್ ಆ್ಯಪ್ ಮೂಲಕ ೪,೬೮೨ ಸದಸ್ಯರು ಇಕೆವೈಸಿ ಮಾಡಿಸಿದ್ದಾರೆ. ಇನ್ನೂ ೩೩,೦೪೮ ಸದಸ್ಯರ ಸಂಖ್ಯೆ ಬಾಕಿ ಇದೆ.

ಸೋಮವಾರಪೇಟೆ ತಾಲೂಕಿನಲ್ಲಿ ಅತಿ ಹೆಚ್ಚು ಪ್ರಗತಿಯಾಗಿದ್ದು, ೪೪,೪೦೮ ಸದಸ್ಯರ ಪೈಕಿ ೩೮,೫೬೦ ಮಂದಿ ಇಕೆವೈಸಿ ಮಾಡಿಸಿದ್ದಾರೆ. ಮಡಿಕೇರಿ ತಾಲೂಕಿನಲ್ಲಿ ೪೬,೪೦೫ ರಲ್ಲಿ ೩೯,೫೬೩ ಮಂದಿ, ಶೇ.೮೫.೨೬ ಪೂರ್ಣಗೊಂಡಿದೆ. ಕುಶಾಲನಗರದಲ್ಲಿ ೪೧,೯೯೮ ರಲ್ಲಿ ೩೫,೭೦೨ ಮಂದಿ, ಶೇ.೮೫.೦೧ ಪೂರ್ಣಗೊಂಡಿದೆ.

ವೀರಾಜಪೇಟೆ ತಾಲೂಕಿನಲ್ಲಿ ೩೭,೯೩೦ ರಲ್ಲಿ ೩೦,೫೦೪ ಮಂದಿ, ಶೇ.೮೦.೪೨ ಪೂರ್ಣಗೊಂಡಿದ್ದು, ಪೊನ್ನಂಪೇಟೆ ತಾಲೂಕಿನಲ್ಲಿ ಅತಿ ಕಡಿಮೆ ಪ್ರಗತಿಯಾಗಿದೆ. ೨೯,೦೬೦ ರಲ್ಲಿ ೨೨,೪೨೪ ಮಂದಿ ಮಾತ್ರ ಇಕೆವೈಸಿ ಮಾಡಿಸಿದ್ದು, ಶೇ.೭೭.೧೬ ರಷ್ಟಿದೆ.

ಬಾಕಿ ಇರುವ ಸದಸ್ಯರು ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಅಥವಾ ಮೊಬೈಲ್ ಆ್ಯಪ್ ಮೂಲಕ ಶೀಘ್ರ ಇಕೆವೈಸಿ ಮಾಡಿಸಿಕೊಳ್ಳುವಂತೆ ಆಹಾರ ಇಲಾಖೆ ಮನವಿ ಮಾಡಿದೆ.