ಚೆಯ್ಯಂಡಾಣೆ, ನ. ೧೧: ಕನ್ನಡ ರಾಜ್ಯೋತ್ಸವದ ಅಂಗವಾಗಿ ಚೆಯ್ಯಂಡಾಣೆ ರಾಜ್ಯೋತ್ಸವ ಕ್ರೀಡಾ ಸಮಿತಿಯ ವತಿಯಿಂದ ಚೆಯ್ಯಂಡಾಣೆ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ರಾಜ್ಯೋತ್ಸವ ಕ್ರೀಡಾಕೂಟಕ್ಕೆ ವರ್ಣರಂಜಿತ ತೆರೆ ಬಿದ್ದಿದೆ.
ನರಿಯಂದಡ, ಕೊಕೇರಿ ಹಾಗೂ ಚೇಲಾವರ ಗ್ರಾಮಗಳ ತಂಡಗಳು ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದು, ಕ್ರೀಡಾ ಜ್ಯೋತಿ, ಶಿಸ್ತುಬದ್ಧ ಪಥಸಂಚಲನ ಹಾಗೂ ಕ್ರೀಡಾಪಟುಗಳ ಪ್ರದರ್ಶನ ಕ್ರೀಡಾಕೂಟದ ಪ್ರಮುಖ ಆಕರ್ಷಣೆಗಳಾಗಿದ್ದವು. ಚೆಯ್ಯಂಡಾಣೆ ರಾಜ್ಯೋತ್ಸವ ಕ್ರೀಡಾ ಸಮಿತಿಯ ಉಪಾಧ್ಯಕ್ಷ ಚೆಯ್ಯಂಡ ನಂದ ನಾಚಪ್ಪ ರಾಷ್ಟç ಧ್ವಜಾರೋಹಣ ನೆರವೇರಿಸಿದರೆ, ಸಮಿತಿಯ ಅಧ್ಯಕ್ಷ ಚೇನಂಡ ಸಂಪತ್ ಕನ್ನಡ ಧ್ವಜಾರೋಹಣ ನೆರವೇರಿಸಿದರು. ನಿವೃತ್ತ ಸೈನಿಕ ಚೆಯ್ಯಂಡ ಶಂಕರಿ ಪ್ರತಿಜ್ಞಾವಿಧಿ ಬೋಧಿಸಿದರು. ಪಥಸಂಚಲನಕ್ಕೆ ನರಿಯಂದಡ ತಂಡದ ವಿಶ್ವಪ್ರೀತ್, ಕೊಕೇರಿ ತಂಡದ ನಿವೃತ್ತ ಸೈನಿಕ ಚೇನಂಡ ಸಚಿನ್ ಹಾಗೂ ಚೇಲಾವರ ತಂಡದ ಹಾರ್ಥಿಕ್ ಕಾಳಪ್ಪ ನೇತೃತ್ವ ವಹಿಸಿದ್ದರು.
ಹಗ್ಗಜಗ್ಗಾಟದಲ್ಲಿ ತಂಡಗಳ ಪ್ರಾಬಲ್ಯ
ಪುರುಷರ ಹಗ್ಗಜಗ್ಗಾಟದ ಫೈನಲ್ ಪಂದ್ಯದಲ್ಲಿ ನರಿಯಂದಡ ಹಾಗೂ ಚೇಲಾವರ ತಂಡಗಳ ನಡುವೆ ತೀವ್ರ ಪೈಪೋಟಿ ನಡೆಯಿತು. ಅಂತಿಮವಾಗಿ ನರಿಯಂದಡ ತಂಡ ಜಯಗಳಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಚೇಲಾವರ ತಂಡ ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟಿತು.
ಮಹಿಳೆಯರ ಹಗ್ಗಜಗ್ಗಾಟದಲ್ಲಿ ಕೊಕೇರಿ ಹಾಗೂ ಚೇಲಾವರ ತಂಡಗಳ ನಡುವೆ ನಡೆದ ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ಚೇಲಾವರ ತಂಡ ಜಯಗಳಿಸಿ ಚಾಂಪಿಯನ್ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಕೊಕೇರಿ ತಂಡ ರನ್ನರ್ಸ್ ಸ್ಥಾನ ಪಡೆಯಿತು. ಇದಲ್ಲದೆ ನಿಧಾನಗತಿಯ ಬೈಕ್ ಸ್ಪರ್ಧೆ, ಭಾರದ ಗುಂಡು ಎಸೆತ ಹಾಗೂ ವಿವಿಧ ಅಥ್ಲೆಟಿಕ್ಸ್ ಸ್ಪರ್ಧೆಗಳು ನಡೆದವು. ವಿಜೇತರಿಗೆ ಗಣ್ಯರು ಬಹುಮಾನ ವಿತರಿಸಿದರು.
ಸಮಾರೋಪ ಸಮಾರಂಭ
ಕನ್ನಡ ರಾಜ್ಯೋತ್ಸವ ಕ್ರೀಡಾ ಸಮಿತಿಯ ಅಧ್ಯಕ್ಷ ಚೇನಂಡ ಎಂ ಸಂಪತ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭವನ್ನು ಗಣ್ಯರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಸಿಐಡಿ ಡಿಟೆಕ್ಟಿವ್ ಪೊಲೀಸ್ ಇನ್ಸ್ಪೆಕ್ಟರ್ ಕುಪ್ಪೋಡಂಡ ರಫೀಕ್ ಮಾತನಾಡಿ, ಚೆಯ್ಯಂಡಾಣೆ ಸೌಹಾರ್ದತೆಗೆ ಹೆಸರುವಾಸಿಯಾದ ನಾಡಾಗಿದ್ದು, ಕ್ರೀಡೆಗೆ ಜಾತಿ-ಧರ್ಮದ ಭೇದವಿಲ್ಲ ಎಂದರು. ಮಾದಕ ವಸ್ತುಗಳು ಯುವಜನತೆಯ ಭವಿಷ್ಯಕ್ಕೆ ಮಾರಕವಾಗಿವೆ. ಇಂತಹ ವಸ್ತುಗಳನ್ನು ಯಾರೂ ಹಣ ನೀಡಿ ಮೊದಲ ಬಾರಿಗೆ ಖರೀದಿಸುವುದಿಲ್ಲ; ಉಚಿತವಾಗಿ ಪರಿಚಯಿಸಿ ವ್ಯಸನಿಗಳನ್ನಾಗಿ ಮಾಡುವ ಪ್ರಯತ್ನ ನಡೆಯುತ್ತದೆ. ಮಾದಕ ವಸ್ತುಗಳ ಸೇವನೆ, ಬೆಳೆಸುವುದು, ಸಂಗ್ರಹಿಸುವುದು ಹಾಗೂ ಮಾರಾಟ ಮಾಡುವುದು ಕಾನೂನುಬಾಹಿರ ಅಪರಾಧವಾಗಿದೆ. ಯುವಜನತೆ ಇಂತಹ ಚಟುವಟಿಕೆಗಳಿಂದ ದೂರವಿರಬೇಕು ಎಂದು ಎಚ್ಚರಿಸಿದರು. ಚೆಯ್ಯಂಡಾಣೆಯಲ್ಲಿ ರಾಜ್ಯೋತ್ಸವ ಕ್ರೀಡಾಕೂಟವನ್ನು ಯಶಸ್ವಿಯಾಗಿ ಆಯೋಜಿಸಿರುವುದು ಶ್ಲಾಘನೀಯ. ಮುಂದಿನ ವರ್ಷಗಳಲ್ಲಿಯೂ ಇದೇ ಉತ್ಸಾಹದೊಂದಿಗೆ ಕ್ರೀಡಾಕೂಟ ಮುಂದುವರಿಯಲಿ ಎಂದು ಶುಭ ಹಾರೈಸಿದರು.
ಮತ್ತೋರ್ವ ಮುಖ್ಯ ಅತಿಥಿ ನಿವೃತ್ತ ಸೈನಿಕ ಕ್ಯಾಪ್ಟನ್ ಬಿದ್ದಂಡ ನಾಣಿ ನಾಣಯ್ಯ ಮಾತನಾಡಿ, ಸಮಿತಿಯ ದೂರದೃಷ್ಟಿ ಹಾಗೂ ಉತ್ತಮ ಉದ್ದೇಶದಿಂದ ಇಷ್ಟೊಂದು ಬೃಹತ್ ಕ್ರೀಡಾಕೂಟ ಆಯೋಜಿಸಲು ಸಾಧ್ಯವಾಗಿದೆ. ಮೂರು ಗ್ರಾಮಗಳ ಜನರು ತಮ್ಮ ಮನೆಯ ಕಾರ್ಯಕ್ರಮವೆಂಬAತೆ ಉತ್ಸಾಹದಿಂದ ಪಾಲ್ಗೊಂಡು ಯಶಸ್ವಿಗೊಳಿಸಿರುವುದು ಮೆಚ್ಚುವಂತಹದ್ದು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಚೇನಂಡ ಸಂಪತ್, ಮೂರು ಗ್ರಾಮಗಳ ಜನರು ಒಗ್ಗೂಡಿ ಕನ್ನಡ ರಾಜ್ಯೋತ್ಸವ ಕ್ರೀಡಾಕೂಟವನ್ನು ಅದ್ದೂರಿಯಾಗಿ ಆಚರಿಸಿರುವುದು ಸಂತಸದ ವಿಚಾರ. ಇಂತಹ ಕ್ರೀಡಾಕೂಟಗಳನ್ನು ಕರ್ನಾಟಕದಲ್ಲಿ ಚೆಯ್ಯಂಡಾಣೆಯಲ್ಲಿ ಮಾತ್ರ ಕಾಣಲು ಸಾಧ್ಯ. ೧೯೮೧ರಲ್ಲಿ ಬಿತ್ತಿದ ಕ್ರೀಡಾಕೂಟದ ಬೀಜ ಇಂದು ಮೊಳಕೆಯೊಡೆದು ಹೆಮ್ಮರವಾಗಿ ಬೆಳೆದಿದೆ ಎಂದರು. ಕ್ರೀಡಾಕೂಟದ ನಿರಂತರ ಬೆಳವಣಿಗೆ ಹಾಗೂ ಇನ್ನಷ್ಟು ಉತ್ತಮವಾಗಿ ಆಯೋಜಿಸಲು ಸರ್ಕಾರದಿಂದ ಅನುದಾನ ಒದಗಿಸಿಕೊಡುವಂತೆ ಮಾಧ್ಯಮದವರ ಮೂಲಕ ಮನವಿ ಮಾಡಿದರು. ಪ್ರಗತಿಪರ ಕೃಷಿಕ ಮಕ್ಕಿಮನೆ ಸುಧೀರ್, ಚೇಲಾವರದ ನಾಟಿ ವೈದ್ಯ ಪಡಿಂಞರಮ್ಮAಡ ನಂದಕುಮಾರ್ ಹಾಗೂ ಕೊಕೇರಿಯ ಪ್ರಗತಿಪರ ಕೃಷಿಕ ಕುಮ್ಮಂಡ ಕಾವೇರಪ್ಪ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಚೆಯ್ಯಂಡ ಕುಟುಂಬದ ಹಿರಿಯರು, ಕ್ರೀಡಾಪಟು ಹಾಗೂ ಪೋಸ್ಟ್ ಮಾಸ್ಟರ್ ಪಟ್ಟಚೆರುವಂಡ ಜೀವನ್ ಮುದ್ದಪ್ಪ, ಚೆಯ್ಯಂಡ ಪ್ರಕಾಶ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಸಮಿತಿಯ ಉಪಾಧ್ಯಕ್ಷ ನಂದ ನಾಚಪ್ಪ, ಕಾರ್ಯದರ್ಶಿ ಸುನಿಲ್, ಕೋಶಾಧಿಕಾರಿ ನಮೂ ಚೀಯಣ್ಣ, ಸಂಚಾಲಕ ಹರಿಪ್ರಸಾದ್, ಬಿದ್ದಂಡ ರಾಜೇಶ್ ಅಚ್ಚಯ್ಯ, ಪೊಕ್ಕುಳಂಡ್ರ ದಿವ್ಯ ದನೋಜ್, ಚೆಯ್ಯಂಡ ಲವ ಅಪ್ಪಚ್ಚು, ರಾಜ ಉತ್ತಪ್ಪ, ಲೀಲಾವತಿ ಸೇರಿದಂತೆ ಕ್ರೀಡಾಕೂಟದ ಉಪಸಮಿತಿಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಸಮಿತಿಯ ಪದಾಧಿಕಾರಿಗಳು ಅತಿಥಿ ಗಣ್ಯರನ್ನು ಮೆರವಣಿಗೆಯ ಮೂಲಕ ವೇದಿಕೆಗೆ ಕರೆತಂದರು. ಅತಿಥಿ ಗಣ್ಯರು ವಿಜೇತರಿಗೆ ಬಹುಮಾನ ವಿತರಿಸಿದರು. ಬಿ. ವೇದಿಕ ಹರಿಪ್ರಸಾದ್ ಪ್ರಾರ್ಥಿಸಿ, ಸ್ವಾಗತ ನೃತ್ಯ ಮಾಡಿದರು, ಅನಂತ್ ಕುಮಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
-ಅಶ್ರಫ್