ಇAದು ಮಂಗಳೂರಿನಲ್ಲಿ ಗಾಯನ
ಸೋಮವಾರಪೇಟೆ, ನ. ೧೧: ಮಂಗಳೂರಿನ ಟೌನ್ ಹಾಲ್ನಲ್ಲಿ ನಡೆಯುತ್ತಿರುವ ಗಿನ್ನಿಸ್ ವಿಶ್ವದಾಖಲೆಯ ಪ್ರಯತ್ನವಾದ ನಿರಂತರ ಕೊಂಕಣಿ ಗಾಯನ ಮ್ಯಾರಥಾನ್ನಲ್ಲಿ ಕೊಡಗಿನ ತಂಡ ಭಾಗಿಯಾಗುತ್ತಿದೆ.
೬,೦೦೦ಕ್ಕೂ ಅಧಿಕ ಮಂದಿ, ೩೦೦ಕ್ಕೂ ಹೆಚ್ಚು ತಂಡಗಳಾಗಿ ಭಾಗವಹಿಸುತ್ತಿರುವ ಈ ಐತಿಹಾಸಿಕ ಪ್ರಯತ್ನದಲ್ಲಿ ಕೊಡಗಿನ ಏಕೈಕ ತಂಡವಾಗಿ ಸೋಮವಾರಪೇಟೆಯ ಜಯವೀರ ಮಾತೆಯ ದೇವಾಲಯ ಹಾಗೂ ಅಬ್ಬೂರುಕಟ್ಟೆಯ ಸಂತ ಲಾರೆನ್ಸ್ ದೇವಾಲಯದ ಭಕ್ತಾದಿಗಳು ಒಂದು ತಂಡವಾಗಿ ಭಾಗವಹಿಸುತ್ತಿದ್ದಾರೆ.
೧೨ ದಿನ, ೧೨ ಗಂಟೆ ಮತ್ತು ೧೨ ನಿಮಿಷಗಳ ಕಾಲ ನಡೆಯಲಿರುವ ಈ ಗಾಯನ ಮ್ಯಾರಥಾನ್ನಲ್ಲಿ ಎರಡು ಚರ್ಚ್ಗಳ ಭಕ್ತಾದಿಗಳು ತಾ. ೧೨ರಂದು (ಇಂದು) ಬೆಳಿಗ್ಗೆ ೬ರಿಂದ ೭ರವರೆಗೆ ಗಾಯನದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕೊಂಕಣಿ ಭಾಷೆ, ಸಂಗೀತ ಮತ್ತು ಸಂಸ್ಕೃತಿಯ ಶ್ರೀಮಂತಿಕೆಯನ್ನು ಸಾರುವ ಈ ಪ್ರಯತ್ನವು ಮಾತೃಭಾಷೆಯ ಉಳಿವು ಮತ್ತು ಮುಂದಿನ ಪೀಳಿಗೆಗೆ ಅದರ ಮಹತ್ವವನ್ನು ಪರಿಚಯಿಸುವ ನಿಟ್ಟಿನಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ ಎಂದು ಇಲ್ಲಿನ ಜಯವೀರಮಾತೆ ದೇವಾಲಯದ ಧರ್ಮಗುರು ಅವಿನಾಶ್ ಅಭಿಪ್ರಾಯಿಸಿದ್ದಾರೆ.