ಕೋವರ್‌ಕೊಲ್ಲಿ ಇಂದ್ರೇಶ್

ಬೆಂಗಳೂರು, ನ. ೧೧: ಹಾಕಿ ಒಲಂಪಿಯನ್ ಎಂ.ಎA. ಸೋಮಯ್ಯ ಅವರ ಮನೆಯಿಂದ ಕಳುವಾಗಿದ್ದ ಅಂದಾಜು ೩.೫ ಲಕ್ಷ ರೂಪಾಯಿ ಬೆಲೆ ಬಾಳುವ ಪದಕಗಳು ಮತ್ತು ಬೆಲೆಬಾಳುವ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿಗಳಾದ ಮಾಣಿಕ್ಯ, ಹಾಗೂ ಭರತ್ ಎಂಬುವರುಗಳನ್ನು ಬಂಧಿಸಲಾಗಿದೆ. ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ಪದಕಗಳು ಹಾಗೂ ವಸ್ತುಗಳನ್ನು ಸೋಮಯ್ಯ ಅವರಿಗೆ ಹಸ್ತಾಂತರಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದರು.

ಬುಧವಾರ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು "ದೇಶದ ಹೆಮ್ಮೆಗಾಗಿ ಅತ್ಯುತ್ತಮ ಸಾಧನೆ ಮಾಡಿ ಗೆದ್ದುಕೊಂಡಿದ್ದ ಚಿನ್ನ ಮತ್ತು ಬೆಳ್ಳಿಯ ಪದಕಗಳು ಕಳುವಾಗಿವೆ ಎಂದು ಸೋಮಯ್ಯ ಅವರು ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಪ್ರಕರಣವನ್ನು ಭೇದಿಸಲು ನನ್ನ ತಂಡಕ್ಕೆ ಸಾಧ್ಯವಾಗಿರುವುದು ಸಂತೋಷದ ವಿಷಯ. ಇಬ್ಬರು ಆರೋಪಿಗಳನ್ನು ಕಳವು ನಡೆದ ಒಂದು ವಾರದಲ್ಲೇ ಬಂಧಿಸಲಾಗಿದ್ದು ಎಲ್ಲಾ ಬೆಲೆಬಾಳುವ ವಸ್ತುಗಳು ಮತ್ತು ಪದಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಆ ಪದಕಗಳನ್ನು ಸೋಮಯ್ಯ ಅವರಿಗೆ ಹಸ್ತಾಂತರಿಸಲು ಸಾಧ್ಯವಾಗಿದ್ದನ್ನು ನಾವು ನಮ್ಮ ಸೌಭಾಗ್ಯವೆಂದು ಭಾವಿಸುತ್ತೇವೆ," ಎಂದು ಅವರು ತಿಳಿಸಿದರು. ಈ ಪ್ರಕರಣದಲ್ಲಿ ಆರಂಭದಲ್ಲಿ ಯಾವುದೇ ಸುಳಿವುಗಳು ಸಿಗದಿದ್ದರಿಂದ, ಇದು ಪೊಲೀಸರಿಗೆ ಅತ್ಯಂತ ಸವಾಲಿನ ಪ್ರಕರಣಗಳಲ್ಲಿ ಒಂದಾಗಿತ್ತು. ಬಂಧಿತರಿಬ್ಬರೂ ಈ ಹಿಂದೆಯೂ ಇಂತಹ ಅಪರಾಧಗಳಲ್ಲಿ ಭಾಗಿಯಾಗಿದ್ದರು ಎಂದು ಹೇಳಿದ ಅವರು, ಇವರು ಮತ್ತೆ ಇಂತಹ ಕೃತ್ಯಗಳನ್ನು ಎಸಗದಂತೆ ಪೊಲೀಸ್ ಇಲಾಖೆ ನಿಗಾ ವಹಿಸುತ್ತದೆ ಎಂದು ಭರವಸೆ ನೀಡಿದರು. ಆರೋಪಿಗಳನ್ನು ಪತ್ತೆಹಚ್ಚಲು ಮತ್ತು ಕಳುವಾದ ವಸ್ತುಗಳನ್ನು ವಶಪಡಿಸಿಕೊಳ್ಳಲು ಸುಮಾರು ೮೫ ಸಿಬ್ಬಂದಿಯ ತಂಡವನ್ನು ನಿಯೋಜಿಸಿ, ೭ ದಿನಗಳ ಕಾಲ ತೀವ್ರ ತನಿಖೆ ನಡೆಸಲಾಗಿತ್ತು ಎಂದು ಹೇಳಿದರು. ಬಂಧಿತರ ಅಪರಾಧ ಹಿನ್ನೆಲೆಯನ್ನೂ ಪರಿಶೀಲಿಸಲಾಗಿದ್ದು, ಇವರಲ್ಲಿ ಒಬ್ಬನ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ೩೩ ಪ್ರಕರಣಗಳು ದಾಖಲಾಗಿದ್ದರೆ, ಇನ್ನೊಬ್ಬ ಆರೋಪಿಯ ವಿರುದ್ಧ ಎರಡು ಪ್ರಕರಣಗಳಿವೆ. ತನಿಖಾ ತಂಡದ ಪ್ರಯತ್ನವನ್ನು ಶ್ಲಾಘಿಸಿದ ಪೊಲೀಸ್ ಆಯುಕ್ತರು, ಈ ಪ್ರಕರಣವನ್ನು ಭೇದಿಸಿದ ಡಿಸಿಪಿ (ಪೂರ್ವ) ವಿಕ್ರಮ್ ಅಮಾಟೆ ಮತ್ತು ತಂಡಕ್ಕೆ ೧ ಲಕ್ಷ ರೂಪಾಯಿ ನಗದು ಬಹುಮಾನವನ್ನು ಘೋಷಿಸಿದರು.

ಪದಕಗಳನ್ನು ಮತ್ತೊಮ್ಮೆ ಗೆದ್ದಂತೆ : ಸೋಮಯ್ಯ

ಮಾಧ್ಯಮಗಳೊಂದಿಗೆ ಮಾತನಾಡಿದ ೬೭ ವರ್ಷದ ಸೋಮಯ್ಯ ಅವರು, ಕಳುವಾಗಿದ್ದ ಪದಕಗಳನ್ನು ಪತ್ತೆಹಚ್ಚಿದ್ದಕ್ಕಾಗಿ ಪೊಲೀಸರಿಗೆ ಧನ್ಯವಾದ ಅರ್ಪಿಸಿದರು. "ಈ ಪದಕಗಳನ್ನು ನಾನು ಮತ್ತೊಮ್ಮೆ ಗೆದ್ದಂತೆ ನನಗೆ ಅನಿಸುತ್ತಿದೆ" ಎಂದು ಅವರು ಹೇಳಿದರು. ತಾವು ಕುಟುಂಬದೊAದಿಗೆ ೨೫ ನೇ ತಾರೀಖೀನಂದು ಕೊಡಗಿಗೆ ತೆರಳಿದ್ದು, ಕಳ್ಳತನ ೨೮ನೇ ತಾರೀಖಿನ ಬೆಳಿಗ್ಗೆ ನಡೆದಿತ್ತು. ಈ ಪ್ರಕರಣವನ್ನು ಭೇದಿಸಿ, ನನ್ನ ಪದಕಗಳನ್ನು ಮಾತ್ರವಲ್ಲದೆ ನನ್ನ ಮನೆಯಿಂದ ಕಳುವಾಗಿದ್ದ ಇತರ ಬೆಲೆಬಾಳುವ ವಸ್ತುಗಳನ್ನು ಮರಳಿ ತಂದುಕೊಟ್ಟಿದ್ದಕ್ಕಾಗಿ ಪೊಲೀಸ್ ಆಯುಕ್ತರು ಹಾಗೂ ಅವರ ತಂಡಕ್ಕೆ ನಾನು ಆಭಾರಿಯಾಗಿದ್ದೇನೆ," ಎಂದು ಹೇಳಿದರು. ಪದಕಗಳೊಂದಿಗೆ ತಮಗಿರುವ ಭಾವನಾತ್ಮಕ ನಂಟಿನ ಬಗ್ಗೆ ಮಾತನಾಡಿದ ಸೋಮಯ್ಯ, "ಈ ಪದಕಗಳು ಹಲವು ವರ್ಷಗಳ ಕಠಿಣ ಪರಿಶ್ರಮದ ಫಲವಾಗಿದೆ. ಈ ಪದಕಗಳು ಕೇವಲ ನನಗಷ್ಟೇ ಅಲ್ಲ, ನಮ್ಮ ರಾಜ್ಯ ಮತ್ತು ದೇಶಕ್ಕೇ ಒಂದು ಗೌರವದ ಸಂಕೇತವಾಗಿವೆ. ಇವುಗಳೊಂದಿಗೆ ನನ್ನ ಅನೇಕ ನೆನಪುಗಳು ಮತ್ತು ಭಾವನೆಗಳು ಬೆಸೆದುಕೊಂಡಿವೆ, ಹಾಗಾಗಿ ಇವು ನನಗೆ ಬಹಳ ವಿಶೇಷ; ಅದರಲ್ಲೂ ಒಲಿಂಪಿಕ್ ಚಿನ್ನದ ಪದಕವಂತೂ ಅತ್ಯಂತ ವಿಶೇಷವಾದುದು. ಈಗ ಅವು ಮತ್ತೆ ನನ್ನ ಬಳಿ ಬಂದಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ," ಎಂದು ಅವರು ಹೇಳಿದರು.

೧೯೮೦, ೧೯೮೪ ಮತ್ತು ೧೯೮೮ರ ಒಲಿಂಪಿಕ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ, ಮೂರು ಬಾರಿ ಒಲಿಂಪಿಯನ್ ಆಗಿರುವ ಸೋಮಯ್ಯ, ಈ ಪ್ರಕರಣದ ತನಿಖೆಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಕೋರಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದರು. ೧೯೮೦ರ ಚಿನ್ನದ ಪದಕದ ಐತಿಹಾಸಿಕ ಮಹತ್ವವನ್ನು ಅವರು ಇದರಲ್ಲಿ ಉಲ್ಲೇಖಿಸಿದ್ದರು; ಪುರುಷರ ಹಾಕಿ ವಿಭಾಗದಲ್ಲಿ ಭಾರತ ಗೆದ್ದ ಕೊನೆಯ ಒಲಿಂಪಿಕ್ ಚಿನ್ನದ ಪದಕ ಇದಾಗಿದೆ.